ರಾಯಚೂರು

ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ ಅಪಾರ

Published On :

ಬಸವಪ್ಪಶಾಸ್ತ್ರಿ ವೇದಿಕೆ)
ಕ.ಪ್ರ. ವಾರ್ತೆ    ಮಸ್ಕಿ    ಫೆ.12
ರಾಯಚೂರು ಜಿಲ್ಲೆಯ ಸಾಹಿತಿಗಳು, ಕವಿಗಳು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ಸಾಹಿತಿ ಕಲಿಗಣನಾಥ ಗುಡದೂರು ಬಣ್ಣಿಸಿದರು.
ತಾಲೂಕಿನ ಮಸ್ಕಿಯಲ್ಲಿ ಜರುಗಿದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ ಕುರಿತ (ಶಾಂತರಸರಿಂದ ಮಹಾಂತೇಶ ನವಲಕಲ್‌ವರೆಗೆ) 3ನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆ ಕನ್ನಡದ ಮಟ್ಟಿಗೆ ಕಥನ ಪರಂಪರೆಯ ಫಲವತ್ತಾದ ಭೂಮಿಯಾಗಿದೆ. ರಾಜ್ಯದಲ್ಲಿ ಕನ್ನಡ ಕಥನಗಳಿಗೆ ಪ್ರಥಮ ಬಹುಮಾನ ಗಿಟ್ಟಿಸಿಕೊಂಡ ಕೀರ್ತಿ ಜಿಲ್ಲೆಗೆ ಸಲ್ಲುತ್ತದೆ. ನಾಡಿನ ಕಥಾ ಸಾಹಿತ್ಯಕ್ಕೆ ಮೆರಗು ತಂದವರು ಇಲ್ಲಿನ ಸಾಹಿತಿಗಳೇ ಎಂದರು.
ಜಿಲ್ಲೆಯ ಸಾಹಿತ್ಯ ರಸ್ತೆ ಬದಿಯ ಮರಗಳಿದ್ದಂತೆ: ನಿಜಾಮರ ದಬ್ಬಾಳಿಕೆ, ದೌರ್ಜನ್ಯ ಹಾಗೂ ರಜಾಕರ ಹಾವಳಿಯನ್ನು ತಮ್ಮ ಸಾಮಾಜಿಕ ಸಂರಚನೆ ಮೂಲಕ ಧ್ವನಿ ಎತ್ತಿದ ಶಾಂತರಸರು, ಕಲಾನಿಷ್ಠೆ, ಸಾಮಾಜಿಕ ಹೊಣೆಗಾರಿಕೆ, ಐತಿಹಾಸಿಕ ಪ್ರಜ್ಞೆಯಿಂದ ಕಥೆ ಬರೆದು ವೃತ್ತ ಕಥೆಯಲ್ಲಿ ಭಿನ್ನವಾಗಿ ಕಂಡ ರಾಜಶೇಖರ ನೀರಮಾನವಿ ಪ್ರಬುದ್ಧ ಕಥೆಗಾರರಾಗಿದ್ದಾರೆ. ಜಿಲ್ಲೆಯ ಸಾಹಿತಿಗಳು ರಚಿಸಿದ ಕಥೆ, ಸಂಕಲನಗಳು ದಾರಿಗುಂಟ ಇರುವ ಸಾಲು ಮರಗಳಿದ್ದಂತೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ. ಮಹಿಳೆಯರ ಕುರಿತು ಅಧ್ಯಯನ ನಡೆಸಲು ಆಕರ ಕಥೆಗಳಾಗಿವೆ ನುಡಿದರು.
ಜಿಲ್ಲೆಯ ಕಥೆಗಾರರಿಗೆ 3 ಕಥಾ ಸಂಕಲನಗಳ ಮೂಲಕ ಇತರೆ ಸಾಹಿತ್ಯಾಸಕ್ತರಿಗೆ ದಾರಿ ತೋರಿದ ಅಮರೇಶ ನುಗಡೋಣಿ ಸಾಹಿತ್ಯ ಪರಂಪರೆಗೆ ನಾಂದಿ ಹಾಡಿದ್ದಾರೆ. ಇತ್ತೀಚಿನ ಸಾಹಿತಿಗಳು ರಚಿಸಿದ ವಲಸಿಗರ ಬದುಕು ಹಾಗೂ ಅವರ ಸ್ಥಿತಿಗತಿಗಳ ಕುರಿತು ಅವರ ಬೆನ್ನು ಬಿದ್ದಿದ್ದಾರೆ.
ದಣಿವರಿಯದ ಸಾಹಿತಿಗಳು: ಮಹಾಂತೇಶ ನವಲಕಲ್, ಅಮರೇಶ ನುಗಡೋಣಿ, ಆಂಜನೇಯ ಜಾಲಿಬೆಂಚಿ, ಚಿದಾನಂದ ಜಾಲಿಬೆಂಚಿಯಂತಹ ಅನೇಕ ಹಿರಿಯ ಸಾಹಿತಿಗಳು ಸಾಹಿತ್ಯ ಕ್ಷೇತ್ರದಲ್ಲಿ ದಣಿವರಿಯದೆ ದುಡಿದಿದ್ದಾರೆ. ಮಾನವೀಯತೆ ಕುಲುಕದಂತೆ ತೃತೀಯ ಜಗತ್ತಿಗೆ ಅದ್ಭುತ ಕಥೆಗಳನ್ನು ನೀಡಿದ್ದಾರೆ. ಸಮಾಜವಾದಿ ನೆಲೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ಡಾ. ದಸ್ತಗೀರಸಾಬ ದಿನ್ನಿ(ಅಮರಚಿಂತರಿಂದ ಆರೀಫ್‌ವರೆಗೆ) ಮಾತನಾಡಿ, ಜಿಲ್ಲೆಯ ಸಾಹಿತಿಗಳ ಪೈಕಿ ಭಾವುಕ ಕವಿ ಹಾಗೂ ಬದುಕಿನ ನಿಜವಾದ ಕಾವ್ಯ ಕಟ್ಟಿಕೊಟ್ಟ ಜಂಪಣ್ಣ ಅಮರಚಿಂತರು ಅಬ್ಬರ, ಆವೇಶಗಳಿಲ್ಲದೆ ತನ್ಮಯತೆಯಿಂದ ಅನೇಕ ಕಾವ್ಯ ರಚಿಸಿದ್ದಾರೆ. ಸಾವಯವ ರೂಪಕಗಳನ್ನು ಸಮರ್ಪಕವಾಗಿ ಅಳವಡಿಸಿಕೊಂಡು ವೈಚಾರಿಕತೆ ಹಿನ್ನೆಲೆಯಲ್ಲಿ ಕಾವ್ಯ ರಚಿಸಿದ್ದಾರೆ. ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ, ಕೋಮುವಾದಿಗಳ ವಿರುದ್ಧ ಧ್ವನಿ ಎತ್ತಿದ ಬಂಡಾಯ ಸಾಹಿತಿ ಪ್ರೊ. ಬೆಟ್ಟದೂರು.
ಭ್ರಷ್ಟಾಚಾರ, ದೌರ್ಜನ್ಯ ನೂಕಾಚೆ ದೂರ..: ಭ್ರಷ್ಟಾಚಾರ, ದೌರ್ಜನ್ಯಗಳ ವಿರುದ್ಧ ನವ್ಯದ ಧಾಟಿಯ ಕವಿತೆಗಳ ಮೂಲಕ ಧ್ವನಿ ಎತ್ತಿದ ಭಗತರಾಜರು ಹಾಗೂ ಎಸ್.ಜಿ. ಸ್ವಾಮಿ, ಡಾ. ಸ್ವಾಮಿರಾವ್ ಕುಲಕರ್ಣಿ, ವೀರಹನುಮಾನ್, ಚಂದ್ರಕಾಂತ ಕುಸನೂರ, ಮಹಾಂತೇಶ ಮಸ್ಕಿ, ರಮೇಶ ಅರೋಲಿ, ಶಿವರಾಜ ಬೆಟ್ಟದೂರು ಸೇರಿದಂತೆ ಜಿಲ್ಲೆಯ ಅನೇಕ ಸಾಹಿತಿಗಳು ಮನುಷ್ಯನ ಪ್ರೀತಿಯ ಹುಡುಕಾಟ, ಜಾನಪದ ಲಯ ಬಳಸಿದ ಸಂಕಲನ ಮತ್ತು ಭಾವನಾತ್ಮಕ ತಾಕಲಾಟ, ಬಹು ಸಂಸ್ಕೃತಿ ಬೆರೆವ ಸಮರ್ಥ ಕವಿಗಳಾಗಿದ್ದಾರೆ. ಮಹಿಳೆಯರು ಕಾವ್ಯ ಕ್ಷೇತ್ರಕ್ಕೆ ಬರಬೇಕಿದೆ. ಅನುಭವದ ತೀವ್ರತೆ, ವರ್ತಮಾನ, ಭಾವಗೀತೆ, ಅನುಭಾವದ ಕುರಿತು ಹೊಸ ಕಾವ್ಯ ಕಟ್ಟುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಯ ನೆಲ ಘಟ್ಟಿಗೊಳಿಸಬೇಕಿದೆ ಎಂದರು.
ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ್ಣಿ, ಪ್ರೊ. ಹರ್ಲಾಪುರ, ಸಾಹಿತಿ ಬಸವರಾಜ ಕೋಡಗುಂಟಿ, ಕೆ.ನರಸಿಂಹ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.