ರಾಯಚೂರು

ಸುದ್ದಿ ಸಂಕ್ಷೇಪ

Published On :

ಜೆಸ್ಕಾಂ ಸಿಬ್ಬಂದಿ ವರ್ಗಾವಣೆಗೆ ಆಗ್ರಹಿಸಿ ಮನವಿ
ರಾಯಚೂರು: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಜೆಸ್ಕಾಂ ನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಬೇರೆಡೆಗೆ ವರ್ಗಾಯಿಸುವಂತೆ ಜೈ ಕರವೇ ಸಂಘಟನೆ ಒತ್ತಾಯಿಸಿದೆ.ಈ ಕುರಿತು ಈಚೆಗೆ ಜೆಸ್ಕಾಂ ಎಂಡಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜೆಸ್ಕಾಂನ ಕಚೇರಿಗಳಲ್ಲಿ ಕಳೆದ ಅನೇಕ ವರ್ಷಗಳಿಂದ ಸಿಬ್ಬಂದಿ ವರ್ಗಾವಣೆ ನಡೆದಿಲ್ಲ. ಹಾಗಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಜನತೆಗೆ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಆರೋಪಿಸಿದರು.ಕಚೇರಿ ವೇಳೆಯಲ್ಲಿ ಸಿಬ್ಬಂದಿ ಹಾಜರಿರದೇ ಗ್ರಾಹಕರಿಗೆ ಸೌಲಭ್ಯ ಸರಿಯಾಗಿ ದೊರೆಯುತ್ತಿಲ್ಲ. ತಿಂಗಳುಗಟ್ಟಲೇ ಸಿಬ್ಬಂದಿಗಳು ಕೆಲಸ ಮಾಡಿಕೊಡಲು ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿದ ಕಾರ್ಯಕರ್ತರು, ಮೇಲಧಿಕಾರಿಗಳೂ ಸಹ ಕಚೇರಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ವರ್ಗಾವಣೆಯಾಗದ್ದರಿಂದ ಸಿಬ್ಬಂದಿ ಗ್ರಾಹಕರಿಂದ ವಿವಿಧ ಕೆಲಸ ಕಾರ್ಯಗಳನ್ನು ಪೂರೈಸಲು ಹಣ ಪಡೆಯಲು ಸಾಧ್ಯವಾಗಿದೆ. ಕಾರಣ ಕೂಡಲೇ ಕಳೆದ ಅನೇಕ ವರ್ಷಗಳಿಂದ ನಗರ ಮತ್ತು ಗ್ರಾಮೀಣ ಭಾಗದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘಟನೆಯ ಶರಣಪ್ಪ ಎನ್.ಎಚ್., ವೆಂಕಟಸ್ವಾಮಿ, ಎಂ. ವಸಂತಕುಮಾರ್, ರಮೇಶ ವಡವಾಟಿ, ಉರುಕುಂದಿ ಸೇರಿದಂತೆ ಅನೇಕರಿದ್ದರು.
ದೌರ್ಜನ್ಯ: ತನಿಖೆಗೆ ದಸಂಸ ಒತ್ತಾಯ
ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾದ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ರೀತಿಯಲ್ಲಿ ಪೊಲೀಸ್ ಮೇಲಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕೂಡಲೇ ತನಿಖಾಧಿಕಾರಿಯನ್ನು ಬದಲಿಸಿ ನ್ಯಾಯ ದೊರಕಿಸಿಕೊಡುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿರುವ ಸಂಘಟನೆಯ ದೇವದುರ್ಗ ತಾಲೂಕು ಶಾಖೆಯ ಪ್ರಮುಖರಾದ ಬಾಳಪ್ಪ ಗಣೇಕಲ್, ಅಂಜಿನಯ್ಯ ಬಡಿಗೇರ್ ಹಾಗೂ ಮರಿಲಿಂಗಪ್ಪ ಕೋಳೂರು, ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ರಾಮದುರ್ಗ ಗ್ರಾಮದ ರಾಮನಗೌಡ ಮತ್ತಿತರರರ ಮೇಲೆ ದಾಖಲಿಸಲಾಗಿದ್ದ ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಡಿಎಸ್ಪಿ ಅನಿತಾ ಹದ್ದಣ್ಣನವರ ತನಿಖೆಯ ವೇಳೆ ಘಟನೆಗೆ ಸಂಬಂಧಿಸಿರದಂಥ ವ್ಯಕ್ತಿಗಳ ಹೆಸರು ಪ್ರಸ್ತಾಪಿಸಿದ್ದಾರೆಂದು ಆರೋಪಿಸಿದ್ದಾರೆ. ದೂರುದಾರರು ನೀಡಿದ ದೂರಿನನ್ವಯ ತನಿಖೆ ನಡೆಸದೇ ಪ್ರಕರಣಕ್ಕೆ ಸಂಬಂಧವಿಲ್ಲದ ಹಾಗೂ ಆರೋಪಿಗಳಿಗೆ ನೆರವಾಗುವ ರೀತಿಯಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ. ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ. ಆರೋಪಿಗಳನ್ನು ಕೂಡಲೇ ಬಂಧಿಸಲು ಸೂಚಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.