ರಾಯಚೂರು

ಸುದ್ದಿ ಸಂಕ್ಷೇಪ

Published On :

ನಿಸ್ವಾರ್ಥದಿಂದ ದುಡಿವರ ಕೊರತೆ:ಸಚಿವರ ಬೇಸರ
ರಾಯಚೂರು: ಸರ್ಕಾರ ಜನಪರ ಯೋಜನೆಗಳ ಜಾರಿಗೆ ಬದ್ಧವಾಗಿದೆ. ಸರ್ಕಾರಕ್ಕೆ ಹಣ ಮತ್ತು ತಜ್ಞರ ಕೊರತೆಯಿಲ್ಲ. ಆದರೆ ನಿಸ್ವಾರ್ಥ ಸೇವೆ ಸಲ್ಲಿಸುವ ಜನರ ಕೊರತೆ ಸಾಕಷ್ಟಿದೆ. ಅದರಿಂದಾಗಿ ಯೋಜನಾ ಬದ್ಧ ಕಾರ್ಯನಿರ್ವಹಣೆಯಲ್ಲಿ ವಿಫಲರಾಗುತ್ತಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಎಲೆ ಬಿಚ್ಚಾಲಿ ಗ್ರಾಮದ ಆಸರೆ ಕಾಲನಿಯಲ್ಲಿ ಸಿಸ್ಕೋ ಸಂಸ್ಥೆಯಿಂದ ಎಲೆ ಬಿಚ್ಚಾಲಿ ಹಾಗೂ ತಲಮಾರಿಯಲ್ಲಿ ನಿರ್ಮಿಸಿರುವ ಹಿರಿಯ ಪ್ರಾಥಮಿಕ ಶಾಲೆಗಳ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ತಡೆದು ಯೋಜನೆಗಳ ಲಾಭ ಜನತೆಗೆ ದೊರೆಯುವಂತೆ ಮಾಡುವುದು ಎಲ್ಲರ ಗುರಿಯಾಗಬೇಕೆಂದರು.
ಅಗತ್ಯ ಸೌಲಭ್ಯಕ್ಕೆ ಕ್ರಮ: 2009ರ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಿದರೂ ಆಸರೆ ಕಾಲನಿಗಳಲ್ಲಿ ಮೂಲ ಸೌಕರ್ಯದ ಕೊರತೆಯಿಂದ ಅಂಥ ಕಾಲನಿಗಳಲ್ಲಿ ಜನವಾಸಕ್ಕೆ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದರು.ಸಿಸ್ಕೋ ಸಂಸ್ಥೆಯ ಇನ್‌ಕ್ಲೂಸಿವ್ ಗ್ರೋತ್ ವಿಭಾಗದ ಅಧ್ಯಕ್ಷ ಅರವಿಂದ ಸೀತಾರಾಮನ್ ಮಾತನಾಡಿ, ಪ್ರವಾಹ ಪೀಡಿತ ಗ್ರಾಮಗಳಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯಿಂದ ಸಮುದಾಯ ಹೆಸರಿನಲ್ಲಿ 50 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ನೂತನ ಶಾಲಾ ಕಟ್ಟಡ: ಸಂಸ್ಥೆಯು ರಾಯಚೂರು ತಾಲೂಕಿನ ಐದು ಪ್ರವಾಹ ಪೀಡಿತ ಗ್ರಾಮಗಳಲ್ಲಿ 3320 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದ್ದು, ತಲಾ 2 ಕೋಟಿ ವೆಚ್ಚದಲ್ಲಿ ಎಲೆ ಬಿಚ್ಚಾಲಿ ಹಾಗೂ ತಲಮಾರಿ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದು ವಿವರಿಸಿದರು. ಸಮಾರಂಭದ ಸಾನ್ನಿಧ್ಯವನ್ನು ಬಿಚ್ಚಾಲಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, ಮುಖಂಡರಾದ ಎ.ವಸಂತಕುಮಾರ, ತಾಯಣ್ಣ ನಾಯಕ, ಲಿಂಗರಾಜ ಪಾಟೀಲ್, ಜನಾರ್ದನ ರೆಡ್ಡಿ, ಸಹಾಯಕ ಆಯುಕ್ತ ಮಾರುತಿ, ಡಿಡಿಪಿಐ ರಾಮಾಂಜನೇಯ ಪಾಲ್ಗೊಂಡಿದ್ದರು. ಆಸರೆ ಕಾಲನಿಯ ನಿವಾಸಿಗಳು ಹಾಗೂ ಗ್ರಾಮಸ್ಥರಿದ್ದರು.
ಪದವಿ ಕಾಲೇಜು ಆರಂಭಕ್ಕೆ ಭರವಸೆ
ಸಿಂಧನೂರು: ತಾಲೂಕಿನ ಬಳಗಾನೂರ ಗ್ರಾಮಕ್ಕೆ ಪದವಿ ಕಾಲೇಜು ಮಂಜೂರಾತಿಗಾಗಿ ಸಂಬಂಧಿಸಿದ ಇಲಾಖೆಯ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜ್ ಆರಂಭಕ್ಕೆ ಮಂಜೂರಾತಿ ದೊರೆಯುವ ವಿಶ್ವಾಸವಿದೆ ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.    ಮುಖಂಡರಾದ ಡಾ. ಬಿ.ಎಚ್. ದಿವಟರ್, ದಯಾನಂದ ಪಾಟೀಲ್, ಬಸವರಾಜಸ್ವಾಮಿ ಹಸಮಕಲ್ ಇತರರಿದ್ದರು.
ಜನಾಕರ್ಷಿಸಿದ ಚಾಯ್ ಪೇ ಚರ್ಚಾ
ಸಿಂಧನೂರು: ನಗರದ ಮೂರು ಹೊಟೇಲ್‌ಗಳ ಬಳಿ ಚಾಯ್ ಪೇ ಚರ್ಚಾ ಕರೋ ಎಂಬ ಬಿಜೆಪಿ ವಿಶೇಷ ಕಾರ್ಯಕ್ರಮ ಜನರನ್ನು ಆಕರ್ಷಿಸಿತು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಸೂಚಿ ಹೇಗಿರಬೇಕೆಂದು ನೇರವಾಗಿ ಯುವಕರೊಂದಿಗೆ ಚರ್ಚಿಸಲು ನರೇಂದ್ರ ಮೋದಿ ಸಂವಾದದ ಅಂಗವಾಗಿ ಬುಧವಾರ ನಗರದ ಬಸವ ವೃತ್ತ, ಅಂಬಾದೇವಿ ದೇವಸ್ಥಾನ, ಸುಕಾಲಪೇಟೆಯ ಬೃಂದಾವನ ಹೊಟೇಲ್ ಹತ್ತಿರ ಸಾರ್ವಜನಿಕವಾಗಿ ದೂರದರ್ಶನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮೋದಿಯವರ ಭಾಷಣ ಕೇಳುತ್ತಾ, ಉಚಿತ ಚಹಾ ಕುಡಿಯುತ್ತ ಜನತೆ ಗುಂಪು ಗುಂಪಾಗಿ ನಿಂತಿದ್ದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಉಪಾಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಕೊಲ್ಲಾ ಶೇಷಗಿರಿರಾವ್, ಶಾಂತಗೌಡ ಜಾಗೀರದಾರ, ಎಂ.ದೊಡ್ಡಬಸವರಾಜ, ಪ್ರೇಮಾ ಸಿದ್ಧಾಂತಿಮಠ, ಮಮತಾ ಹಿರೇಮಠ  ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.