ರಾಯಚೂರು

ಹಳೆ ಬಜಾರ್ ರಸ್ತೆ ಕಾಮಗಾರಿ ಪ್ರಾರಂಭ

Published On :

ಸಿಂಧನೂರು: ನಗರದ ಹೃದಯಭಾಗದಲ್ಲಿರುವ ಹಳೆ ಬಜಾರ್ ವ್ಯಾಪಾರಸ್ಥರ ಬಹುದಿನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ ಅವರು ಡಾಂಬರೀಕರಣ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚೆನ್ನಮ್ಮ ವೃತ್ತದಿಂದ ಬಸವ ವೃತ್ತದವರೆಗಿನ 1.3 ಕಿಮೀ ರಸ್ತೆ ಡಾಂಬರೀಕರಣಕ್ಕೆ 13ನೇ ಹಣಕಾಸು ಯೋಜನೆಯಡಿ 43 ಲಕ್ಷ ಮಂಜೂರಾಗಿದೆ. ಈ ಕಾಮಗಾರಿ ನಿರ್ವಹಿಸಲು ಆಹ್ವಾನಿಸಿದ ಟೆಂಡರ್‌ನಲ್ಲಿ ಒಬ್ಬ ಗುತ್ತಿಗೆದಾರರು ಮಾತ್ರ ಟೆಂಡರ್ ಹಾಕಿದ್ದರಿಂದ ಕಾಮಗಾರಿ ಕೈಗೊಳ್ಳಲು ವಿಳಂಬವಾಯಿತು ಎಂದರು.
6 ತಿಂಗಳ ಕಾಲಾವಕಾಶ: ಪೌರಾಡಳಿತ ಇಲಾಖೆಯು ಟೆಂಡರ್ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿ ಮುಗಿಸಲು 6 ತಿಂಗಳು ಸಮಯಾವಕಾಶವಿದೆ. ಆದರೆ ನಾಗರಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ 3 ತಿಂಗಳಲ್ಲಿಯೇ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅವರು ಸಹ ಒಪ್ಪಿಕೊಂಡಿದ್ದಾರೆಂದು ವಿವರಿಸಿದರು.  ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಸದಸ್ಯರಾದ ಪ್ರಭುರಾಜ, ಚಂದ್ರಶೇಖರ ಮೈಲಾರ, ಶರಣಯ್ಯಸ್ವಾಮಿ ಹೊಕ್ರಾಣಿ, ನಬಿಸಾಬ, ನವಾಬಸಾಬ, ವೆಂಕಟೇಶ ಬಂಡಿವಕೀಲ, ನಾಗಪ್ಪ ಗಿರಿಜಾಲಿ, ಅಲಿಸಾಬ ಮೇಸ್ತ್ರಿ, ನನ್ನುಸಾಬ ಮೇಸ್ತ್ರಿ ಎ.ಕೆ.ಗೋಪಾಲನಗರ, ನಬಿಸಾಬ, ಮುಖಂಡರಾದ ಶಿವಕುಮಾರ ಜವಳಿ, ಮುರ್ತುಜಾ, ವೀರೇಶ ಮಾಡಶಿರಿವಾರ, ಹನುಮನಗೌಡ ಬೆಳಗುರ್ಕಿ, ತಾಹೀರ ಅಲಿ, ಎಚ್.ಎನ್. ಬಡಿಗೇರ, ವೆಂಕನಗೌಡ ಗದ್ರಟಗಿ ಇದ್ದರು.
ಹೋರಾಟಕ್ಕೆ ಸಂದ ಜಯ
ಕಳೆದ ಒಂದೂವರೆ ದಶಕದಿಂದ ನೆನೆಗುದಿಗೆ ಬಿದ್ದಿದ್ದ ಹಳೆ ಬಜಾರ್ ರಸ್ತೆ ದುರಸ್ತಿಗೆ ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿಯು ಕಳೆದ ಮೂರು ತಿಂಗಳಿಂದ ಮನವಿ ನೀಡುವುದರೊಂದಿಗೆ ಹಂತ ಹಂತವಾಗಿ ಹೋರಾಟ ನಡೆಸುತ್ತಾ ಬಂದಿತ್ತು. ಕೊನೆಗೆ ಹೋರಾಟಕ್ಕೆ ಮಣಿದು ನಗರಸಭೆ ಆಡಳಿತ ಮಂಡಳಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದೆ. ಈ ಹೋರಾಟದಲ್ಲಿ ಹಲವು ಪ್ರಗತಿಪರ ಸಂಘಟನೆಗಳು, ಹೋರಾಟಗಾರರು,ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೊನೆಗೂ ಹೋರಾಟ ಯಶಸ್ವಿಯಾಗಲು ಕಾರಣರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.