ರಾಯಚೂರು

23ರೊಳಗೆ ಕಡಲೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಎಪಿಎಂಸಿಗೆ ಮುತ್ತಿಗೆ: ಅಮರಣ್ಣ ಗುಡಿಹಾಳ ಎಚ್ಚರಿಕೆ

Published On :

ಲಿಂಗಸ್ಗೂರು: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳು ಖರೀದಿಸಲು ಕರ್ನಾಟಕ ಸಹಕಾರ ಮಾರಾಟ ಮಂಡಳಿಯನ್ನು ನಾಫೇಡ್ ಪರವಾಗಿ ಖರೀದಿ ಏಜೆನ್ಸಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಫೆ.23 ಸೋಮವಾರದೊಳಗೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಎಪಿಎಂಸಿಗೆ ಮುತ್ತಿಗೆ ಹಾಕಲಾಗುವುದೆಂದು ರೈತಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, 2013-14ನೇ ಸಾಲಿನ ಹಿಂಗಾರಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಕಾಳನ್ನು ಪ್ರತಿ ಕ್ವಿಂ. 3100 ನಂತೆ ಖರೀದಿಸಲು ನಾಫೇಡ್ ಪರವಾಗಿ ಖರೀದಿ ಏಜೆನ್ಸಿಯಾಗಿ ನೇಮಿಸಿ ಆದೇಶ ಹೊರಡಿಸಿರುವುದು ರೈತರ ಹೋರಾಟಕ್ಕೆ ಸಂದ ಜಯ.
ಪರೀಕ್ಷಿಸಲು ತೊಂದರೆ: ಎಣ್ಣೆಬೀಜ ಉತ್ಪನ್ನಗಳಾದ ಶೇಂಗಾ ಮತ್ತು ಸೂರ್ಯಕಾಂತಿ ಖರೀದಿಸಲು ಪ್ರತಿ ಕ್ವಿಂ. 4000 ಹಾಗೂ 3700 ಬೆಂಬಲ ಬೆಲೆ ಕೇಂದ್ರ ಸರ್ಕಾರ ನಿಗದಿ ಪಡಿಸಿದೆ. ಲಿಂಗಸ್ಗೂರು ತಾಲೂಕಿನ ಲಿಂಗಸ್ಗೂರು, ಮೆದಿಕಿನಾಳ, ನಾಗರಹಾಳ, ಮಟ್ಟೂರು ಖರೀದಿ ಕೇಂದ್ರಗಳ ಮೂಲಕ ಖರೀದಿ ಆರಂಭಿಸಲಾಗಿದೆ. ಆದರೆ ನಾಫೇಡ್ ಅಧಿಕಾರಿಗಳ ಕೊರತೆಯಿಂದ ನಿಗದಿತ ಕೇಂದ್ರಗಳಲ್ಲಿ ಇರುವುದಿಲ್ಲ. ಇದರಿಂದ ರೈತರು ತಂದ ಉತ್ಪನ್ನಗಳನ್ನು ಪರೀಕ್ಷಿಸಲು ತೊಂದರೆಯಾಗಿ ಮರಳಿ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.
ಕೇಂದ್ರಕ್ಕೆ ತರಲು ಹಿಂದೇಟು: ಅಲ್ಲದೆ ನಾಫೇಡ್ ಮತ್ತು ಕರ್ನಾಟಕ ಆಯಿಲ್ ಫೆಡರೇಷನ್ ಅಧಿಕಾರಿಗಳು ಉತ್ಪನ್ನಗಳನ್ನು ಮೊದಲು ಮಾದರಿ ಪರೀಕ್ಷೆಗೆ ತೆಗೆದುಕೊಂಡು ಬನ್ನಿ, ಉತ್ತಮವಾಗಿದ್ದರೆ ಖರೀದಿಸುವುದಾಗಿ ಹೇಳುತ್ತಾರೆ. ಖಾಲಿ ಚೀಲ ಮತ್ತು ತೂಕ ಮಾಡಬೇಕಾದ ಅಧಿಕಾರಿಗಳು ರೈತರಿಗೆ ಖಾಲಿ ಚೀಲ ತಂದು ಮಾಲನ್ನು ತೂಕ ಮಾಡಿ ತೆಗೆದುಕೊಂಡು ಬರುವಂತೆ ಸೂಚಿಸುತ್ತಿದ್ದಾರೆ. ಈ ಸಮಸ್ಯೆಯಿಂದ ರೈತರು ಖರೀದಿ ಕೇಂದ್ರಕ್ಕೆ ತರಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪಿಸಿದರು.
ಕಡಲೆ ಕಾಳು ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲೆಯ ರೈತರು ಪ್ರಥಮವಾಗಿ ಹೋರಾಟ ನಡೆಸಿದ್ದು, ಆದರೆ ಬಾಗಲಕೋಟೆಯ ಹುನಗುಂದನಲ್ಲಿ ಖರೀದಿ ಕೇಂದ್ರ ಆರಂಭಿಸಿ ರಾಯಚೂರು ಜಿಲ್ಲೆ ಕಡೆಗಣಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತ ರೈತರ ಹೋರಾಟ ಗಂಭೀರವಾಗಿ ಪರಿಗಣಿಸಿಲ್ಲವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ. ಕೂಡಲೇ ರೈತರ ಬಗ್ಗೆ ಕಾಳಜಿವಹಿಸಿ ಸೋಮವಾರದೊಳಗೆ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದರೆ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ಸಿದ್ದಲಿಂಗೇಶ್ವರ ಪಾಟೀಲ್, ಅಮರೇಶ ಹೊರಪೇಟ, ಅಮರಯ್ಯಸ್ವಾಮಿ, ದೊಡ್ಡನಗೌಡ ನಾಡಗೌಡ, ಅಮರೇಗೌ ಗೋನವಾಟ್ಲ, ಹನುಮಂತ ಮಟ್ಟೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.