ರಾಯಚೂರು

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಬಲವರ್ಧನೆ ಅವಶ್ಯ

Published On :

ರಾಯಚೂರು: ಸಹಕಾರ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತಷ್ಟು ಕಾರ್ಯಕ್ರಮಗಳ ಜಾರಿಗೆ ಮುಂದಾಗಬೇಕಿದೆ ಎಂದು ಟಾಗೋರ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪಾಟೀಲ್ ದರೂರು ಹೇಳಿದರು.
ನಗರದ ರಂಗಮಂದಿರದ ಹಿಂಭಾಗದಲ್ಲಿರುವ ಜೆಸಿಐ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟದಿಂದ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಇಒಗಳಿಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಆರ್ಥಿಕ ಪ್ರಗತಿ: 1970-80ರ ದಶಕದಲ್ಲಿ ಸಹಕಾರ ಕ್ಷೇತ್ರವು ಉತ್ತುಂಗದಲ್ಲಿತ್ತು. ಆದರೆ ಆನಂತರದಲ್ಲಿ ಸಹಕಾರ ಕ್ಷೇತ್ರದ ನಿರ್ವಹಣೆಯಲ್ಲಿ ಆಡಳಿತ ಮಂಡಳಿಗಳ ವೈಫಲ್ಯದಿಂದ ಸೋಲಾಯಿತು. ಅದರಿಂದ ಸಹಕಾರ ಕ್ಷೇತ್ರವು ಹಿನ್ನಡೆಯತ್ತ ಹೆಜ್ಜೆ ಹಾಕಿತು ಎಂದು ಹೇಳಿದರು.
ಸಹಕಾರ ಕ್ಷೇತ್ರದ ಕಾರ್ಯ ಚಟುವಟಿಕೆ, ಆಶಯಗಳು, ಧ್ಯೇಯೋದ್ದೇಶಗಳ ಬಗ್ಗೆ ಎಲ್ಲರಿಗೆ ತಿಳಿಯಪಡಿಸುವ ಅವಶ್ಯಕತೆಯಿದೆ. ಅದರಲ್ಲೂ ಇಂದಿನ ಯುವಪೀಳಿಗೆಗೆ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘಗಳ ಕಾರ್ಯನಿರ್ವಹಣೆ, ಚಟುವಟಿಕೆಗಳು ಮತ್ತು ಗ್ರಾಮೀಣ ಭಾಗದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿಗಳ ಕೊಡುಗೆಯ ಬಗ್ಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆಯಿದೆ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಪಿ. ಕುಮಾರ್ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿರುವ ಸಂಸ್ಥೆಗಳ ಸರ್ವತೋಮುಖ ಪ್ರಗತಿಗೆ ರಾಜ್ಯ ಸಹಕಾರ ಮಹಾಮಂಡಳಿಯು ಅನೇಕ ತರಬೇತಿ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಿದೆ ಎಂದು ತಿಳಿಸಿದರು.
ಪಾರದರ್ಶಕತೆ ತೀರಾ ಅಗತ್ಯ: ಸಹಕಾರ ಕ್ಷೇತ್ರದ ಉದ್ದೇಶ, ಗುರಿಗಳು, ಕಾರ್ಯವೈಖರಿಯ ಬಗ್ಗೆ ಸಮಾಜದಲ್ಲಿನ ಎಲ್ಲರೂ ಅರಿಯುವ ಅವಶ್ಯಕತೆಯಿದೆ. ಸಹಕಾರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ಸಹಕಾರಿ ಸಂಘದ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸಬೇಕು. ಆಗ ಮಾತ್ರ ಸಹಕಾರ ಸಂಘಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿರಲು ಸಾಧ್ಯ ಎಂದರು.
ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಿಗೆ ಸಮರ್ಪಕ ದೃಷ್ಟಿಕೋನ, ನಿರ್ದಿಷ್ಟ ಗುರಿ ತಲುಪುವ ಛಲವಿರಬೇಕು. ಆಗ ಮಾತ್ರ ಸಂಘಗಳು ಪ್ರಗತಿ ಸಾಧಿಸಲು ಸಾಧ್ಯ. ಹಾಗೆಯೇ ಸಹಕಾರ ಸಂಘಗಳು ನಿಯಮಿತವಾಗಿ ಲೆಕ್ಕ ಪರಿಶೋಧನೆಗೊಳಪಡಬೇಕು. ವಾರ್ಷಿಕ ಮಹಾಸಭೆಗಳನ್ನು ನಡೆಸಬೇಕು. ಲೆಕ್ಕ ಪರಿಶೋಧನೆ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುವುದು ತೀರಾ ಅಗತ್ಯ ಎಂದು ಹೇಳಿದರು.
ಲೆಕ್ಕ ಪರಿಶೋಧನೆಯ ವೇಳೆಯೂ ಏರುಪೇರು: ಸಹಕಾರ ಸಂಘಗಳು ಅನೇಕ ಸಂದರ್ಭದಲ್ಲಿ ಅವುಗಳ ಅಧ್ಯಕ್ಷರು ಹಾಗೂ ಸಿಬ್ಬಂದಿ ಎಸಗುವ ಅಕ್ರಮ, ಅವ್ಯವಹಾರಗಳಿಂದಾಗಿ ಲೆಕ್ಕ ಪರಿಶೋಧನೆಯ ವೇಳೆಯೂ ಏರುಪೇರುಗಳಾಗಲು ದಾರಿ ಮಾಡುತ್ತವೆ. ಅನೇಕ ಬಾರಿ ಅಧ್ಯಕ್ಷರು ಲೆಕ್ಕ ಪರಿಶೋಧನೆಯನ್ನೇ ತಡೆಯಲು ಪ್ರಯತ್ನಿಸುವಂಥ ಕಾರ್ಯವೂ ನಡೆದಿರುವುದು ಕಂಡುಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖರಾದ ವಿಜಯಕುಮಾರ್ ಪಾಟೀಲ್, ರವೀಂದ್ರನಾಥ್, ಕಲ್ಲಯ್ಯ ಸ್ವಾಮಿ, ಭೀಮರೆಡ್ಡಿ, ಪೂರ್ಣಿಮಾ ಮತ್ತಿತರರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಹಕಾರ ಸಂಘಗಳ ನಿರ್ದೇಶಕರು, ಅಧ್ಯಕ್ಷರು ಹಾಗೂ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.