ಅಸ್ಪೃಶ್ಯತೆ ನಿವಾರಣೆಗೆ ದಲಿತೇತರ ಪ್ರಗತಿಪರರ ಸಹಕಾರ ಪಡೆಯಬೇಕು: ಡಾ. ಸಿದ್ದಲಿಂಗಯ್ಯ
ಲಿಂಗಸ್ಗೂರು: ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದರೂ ಕೆಲವೆಡೆ ಅಸ್ಪೃಶ್ಯತೆ ಕಂಡು ಬರುತ್ತಿದ್ದು, ದಲಿತೇತರ ಪ್ರಗತಿಪರರ ಸಹಕಾರ ಪಡೆದು ಅಸ್ಪೃಶ್ಯತೆ ನಿವಾರಣೆಗೆ ಗಮನ ಹರಿಸಬೇಕೆಂದು ಬಂಡಾಯ ಸಾಹಿತಿ, ಅಂಬೇಡ್ಕರ್ ವಿವಿ ನಿರ್ದೇಶಕ ಡಾ. ಸಿದ್ದಲಿಂಗಯ್ಯ ಸಲಹೆ ನೀಡಿದರು.
ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಬೂಸಾ ಚಳವಳಿಯ 40 ವರ್ಷಗಳ ನೆನಪಿಗಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಭಾಗವಹಿಸಲು ತೆರಳುವ ಮಾರ್ಗ ಮಧ್ಯೆ ಲಿಂಗಸ್ಗೂರು ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಧೀಮಂತ ನಾಯಕರಾಗಿದ್ದ ಬಸವಲಿಂಗಪ್ಪನವರು, ಮಲಹೊರುವ ಪದ್ಧತಿ ನಿಷೇಧಿಸಿದ್ದರು. ನಂತರ ಕೇಂದ್ರ ಸರ್ಕಾರ ಕಾಯಿದೆ ಜಾರಿಗೊಳಿಸಿ ನಿಷೇಧ ಹೇರಲಾಯಿತು. ಬೂಸಾ ಚಳವಳಿ ಸಮಯದಲ್ಲಿ ಕನ್ನಡವನ್ನೇ 'ಬೂಸಾ' ಎಂದು ತಪ್ಪು ಗ್ರಹಿಕೆಯಿಂದ ದಲಿತರು ಮತ್ತು ದಲಿತೇತರರ ಮಧ್ಯೆ ಘರ್ಷಣೆಗೆ ದಾರಿಯಾದ ಸಮಯದಲ್ಲಿ ರಾಷ್ಟ್ರಕವಿ ಕುವೆಂಪು, ಯು.ಆರ್. ಅನಂತಮೂರ್ತಿ ಸೇರಿದಂತೆ ಅನೇಕ ಪ್ರಗತಿಪರ ಸಾಹಿತಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಅಸ್ಪೃಶ್ಯತೆ ಇರುವವರೆಗೆ ಸುಸಂಸ್ಕೃತ, ನಾಗರಿಕ ಸಮಾಜವಾಗಲು ಸಾಧ್ಯವಿಲ್ಲ. ದಲಿತರ ಮತ್ತು ಸವರ್ಣೀಯರ ಮಧ್ಯೆ ಘರ್ಷಣೆಯಾಗದಂತೆ ನೋಡಿಕೊಂಡು ಸೌಹಾರ್ದಯುತವಾಗಿ ಜೀವನ ಸಾಗಿಸುವುದು ಅಗತ್ಯ. ದಲಿತೇತರ ಪ್ರಗತಿಪರರು, ನಾಗರಿಕರು, ಸಮಾಜ ಸುಧಾರಕರ ಸಹಕಾರ ಪಡೆದು ಶಾಂತಿಯುತವಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದ ವ್ಯವಸ್ಥೆಯಲ್ಲಿ ವೈಚಾರಿಕತೆ ಇರಬೇಕು ಎಂದರು. ಈ ವೇಳೆ ಎಪಿಪಿ ಅಯ್ಯಾಳಪ್ಪ ಬಳಬಟ್ಟಿ, ಮುಖಂಡರಾದ ಪಾಮಯ್ಯ ಮುರಾರಿ, ಪ್ರಭುಲಿಂಗ ಮೇಗಳಮನಿ, ಶಿವಪುತ್ರಪ್ಪ ಬೀದರ್, ಜಂಗಮಮೂರ್ತಿ, ಮಹಾದೇವಯ್ಯಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

