ರಾಯಚೂರು

ಕನ್ನಡ ಉಳಿವಿಗೆ ಹೋರಾಟ; ದುರ್ದೈವ

Published On :

ಕ.ಪ್ರ. ವಾರ್ತೆ  ಸಿಂಧನೂರು   ಫೆ.23
ಕನ್ನಡಿಗರು ಮಾತೃ ಭಾಷೆ ಉಳಿವಿಗೇ ಹೋರಾಟ ಮಾಡಬೇಕಾಗಿ ಬಂದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ನಗರದ ಸತ್ಯಾ ಗಾರ್ಡನ್‌ನಲ್ಲಿ ಶನಿವಾರ ರಾತ್ರಿ ನಡೆದ ಸಿಂಧನೂರು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲದ ರಕ್ಷಣೆಗಾಗಿಯೇ ಇಂದಿಗೂ ವಿವಿಧ ಮಾದರಿಯ ಹೋರಾಟ ನಡೆಯುತ್ತಿದ್ದು ಇದು ಸಲ್ಲದು ಎಂದರು.
ಕನ್ನಡ ಮನಸ್ಸುಗಳು ಒಗ್ಗೂಡಲಿ: ಭಾಷೆಯ ಅಭಿಮಾನ ಕನ್ನಡಿಗರಲ್ಲಿ ಜಾಗೃತಿಯಾಗಬೇಕು. ಇಂತಹ ಸಮ್ಮೇಳನಗಳು ಎರಡು ವರ್ಷಕ್ಕೊಮ್ಮೆ ಆದರೂ ನಡೆಯಬೇಕು. ಇಲ್ಲದಿದ್ದರೆ ಅನೇಕ ಕವಿ, ಸಾಹಿತಿ, ಬರಹಗಾರರು ಬೆಳೆಯುವುದಿಲ್ಲ. ಯುವ ಬರಹಗಾರರಿಗೆ ಕವಿ ಕಲಾವಿದರಿಗೆ ಪ್ರೋತ್ಸಾಹ ನೀಡಲು ಸಮ್ಮೇಳನಗಳು ನಡೆಯಲಿ. ಕನ್ನಡ ಮನಸ್ಸುಗಳು ಒಂದುಗೂಡಲು ಇದೊಂದು ಸದಾವಕಾಶವಾಗುತ್ತದೆ. ಅದಕ್ಕೆ ತಮ್ಮ ಸಹಕಾರ ಯಾವಾಗಲೂ ಇರುತ್ತದೆ ಎಂದರು.
ಕನ್ನಡಿಗರ ಹೃದಯ ವೈಶಾಲ್ಯತೆ: ಅಧ್ಯಕ್ಷತೆ ವಹಿಸಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಜಿ.ವಿ. ಶರ್ಮಾ, ಕನ್ನಡ ಪ್ರಾಚೀನ ಭಾಷೆ. ಪ್ರತಿಯೊಬ್ಬರೂ ಇದನ್ನು ಗೌರವಿಸಬೇಕು. ಪ್ರೀತಿ ಇರಬೇಕು. ಆಂಧ್ರ ಮೂಲದವನಾದ ತಮ್ಮನ್ನು ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಕನ್ನಡಿಗರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿದೆ. ತಾಲೂಕಿನ ಕನ್ನಡಿಗರ ಋಣ ತೀರಿಸಲು ತಮಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.
ಸಮ್ಮೇಳನಾಧ್ಯಕ್ಷರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕಮ್ಮವಾರಿ ಸಂಘ, ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆ, ವಿಜಯ ಕಲರ್ ಲ್ಯಾಬ್‌ನ ವಿಶ್ವನಾಥ ಚೌದರಿ, ಫೋಟೋಗ್ರಾಫರ್ ಸಂಘದ ಅಧ್ಯಕ್ಷ ವೆಂಕಟೇಶ ಕೆಂಗಲ್ ಮತ್ತಿತರ ್ಮತ್ತಿತರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸಾಧಕರಿಗೆ ಸನ್ಮಾನ: ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಸೈಯ್ಯದ ಜಾಫರ ಜಾಗೀರದಾರ, ಎಸ್‌ಜೆಎಸ್‌ಆರ್‌ವೈ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ತಾಲೂಕು ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ದೇವೆಂದ್ರಗೌಡ, ತಾಲೂಕು ಗೌರವ ಕಾರ್ಯದರ್ಶಿಗಳಾದ ಶ್ರೀಶೈಲ ಕೌದಿ, ವೀರೇಶ ಗೋನವಾರ, ಬೀರಪ್ಪ ಶಂಭೋಜಿ, ಪಂಪಯ್ಯಸ್ವಾಮಿ ಸಾಲಿಮಠ, ಅಮರೇಶ ಅಲಬನೂರು, ಶಿವಲೀಲಾ ಹಿರೇಮಠ, ನಾಗರತ್ನಮ್ಮ ಬಂಗಾರಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.  ದುರುಗಪ್ಪ ಹಸಮಕಲ್, ಸಿದ್ದೇಶ್ವರಿ ನಿರೂಪಿಸಿದರು. ನಂತರ ಚುಟುಕು ಕವಿಗೋಷ್ಠಿ, ಕವನ, ಗಾಯನ, ಕುಂಚ, ನೃತ್ಯ, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಜನಪದ ನಾರಾಯಣಪ್ಪ ಮಾಡಸಿರವಾರ ತತ್ವಪದ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.