ಜಾಗತೀಕರಣದಿಂದ ಶ್ರೀಮಂತರಿಗೆ ಲಾಭ
ಕ.ಪ್ರ. ವಾರ್ತೆ ರಾಯಚೂರು ಫೆ.24
ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣದಿಂದಾಗಿ ದೇಶದ ನಿವಾಸಿಗಳ ಮಧ್ಯೆ ಆರ್ಥಿಕ ಸಮಾನತೆ ಮೂಡಿಸಲು ಸಾಧ್ಯವಾಗಿಲ್ಲ. ಎರಡು ದಶಕಗಳ ಜಾಗತೀಕರಣದ ಫಲವಾಗಿ ಶ್ರೀಮಂತರು ಮತ್ತು ಬಡವರ ಮಧ್ಯೆ ಕಂದಕ ವಿಸ್ತಾರವಾಗುತ್ತಲೇ ಸಾಗಿದೆ ಎಂದು ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ಕಳವಳ ವ್ಯಕ್ತಪಡಿಸಿದರು.
ಅವರು ಈಚೆಗೆ ನಗರದ ಎಲ್. ವಿ.ಡಿ. ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಹಾಗೂ ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ ಜಾಗತೀಕರಣ ನಂತರದ ಭಾರತ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ಪ್ರಾಶಸ್ತ್ಯ: ಬಡವರ ಬದುಕನ್ನು ಹಸನಗೊಳಿಸುವುದು, ವರ್ಗರಹಿತವಾದ ಸಮಾನತೆ ಸಮಾಜವನ್ನು ನಿರ್ಮಿಸುವುದು ಇದುವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ಆಶಯವಾಗಿತ್ತು. ಹಾಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಪ್ರಾರಂಭದಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡಲಾಯಿತು.
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರು ಸಾರ್ವಜನಿಕ ಉದ್ಯಮಗಳನ್ನು ಆಧುನಿಕ ದೇವಾಲಯಗಳು ಎಂದು ಬಣ್ಣಿಸಿದ್ದು, ಅಷ್ಟೇ ಔಚಿತ್ಯಪೂರ್ಣವಾಗಿತ್ತು. ಆದರೆ ಹೊಸ ಆರ್ಥಿಕ ನೀತಿಯ ಜಾರಿ ನಂತರದಲ್ಲಿ ಉದ್ಯಮಗಳಿಂದ ಬಡವರಿಗೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ ಎಂದರು.
ಆರ್ಥಿಕ ನೀತಿ: ದೇಶವನ್ನು ಆಳುವವರು ಶ್ರೀಮಂತ ದೇಶಗಳಿಂದ ಸೂಚಿಸಿದ ಹೊಸ ಆರ್ಥಿಕ ನೀತಿ ಜಾರಿಗೆ ತಂದರು. ಜಾಗತೀಕರಣದಿಂದ ಭಾರತಕ್ಕೆ ಹರಿದು ಬರುವ ಬಂಡವಾಳ, ಸರಕು-ಸೇವೆಗಳ ಮೇಲಿನ ನಿರ್ಬಂಧ ಸಡಿಲಗೊಂಡವು. ಆದರೆ ಅದರಿಂದ ಶ್ರೀಮಂತರಿಗೇ ಹೆಚ್ಚು ಪ್ರಯೋಜನವಾಯಿತೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಂ.ಖೇಣೆದ್, ಪ್ರತಿಯೊಬ್ಬ ಭಾರತೀಯನೂ ತನ್ನ ದೇಶದ ಬಗ್ಗೆ ಅಭಿಮಾನವಿಟ್ಟುಕೊಂಡು ಆರ್ಥಿಕ ನೀತಿಗಳನ್ನು ಅನುಸರಿಸಿದಾಗ ಮಾತ್ರ ದೇಶ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯ ಎಂದರು.
ವೇದಿಕೆಯಲ್ಲಿ ಉಪಪ್ರಾಚಾರ್ಯ ಎ. ಅಮರೇಗೌಡ, ಪಂಡಿತ ತಾರಾನಾಥ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶರಣಪ್ಪ ಉದ್ಬಾಳ್, ಸಮಾಜ ವಿಜ್ಞಾನ ವೇದಿಕೆಯ ಸಂಚಾಲಕ ಬಿ.ದೇವರಡ್ಡಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್. ಅಮರೇಗೌಡ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

