ಪುರಸಭೆ ಸಾಮಾನ್ಯ ಸಭೆಗೆ ಬಹಿಷ್ಕಾರ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಫೆ.26
ಸ್ಥಳೀಯ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಡಾ. ಅಂಬೇಡ್ಕರ್ ಯುವಕ ಮಂಡಳಿ ಹಾಗೂ ಇತರೆ ದಲಿತ ಮುಖಂಡರು ಏಕಾಏಕಿ ಸಭೆಗೆ ಮುತ್ತಿಗೆ ಹಾಕಿ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಪುರಸಭೆ ಸದಸ್ಯರು ಸಭೆಯಿಂದ ಹೊರ ನಡೆದ ಘಟನೆ ಬುಧವಾರ ಜರುಗಿತು.
ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಹಿಂದಿನ ಸಭೆಯ ನಡವಳಿಕೆ ಹಾಗೂ ನವೆಂಬರ್ನಿಂದ ಜನವರಿವರೆಗಿನ ಒಟ್ಟು ಜಮಾ ಮತ್ತು ಖರ್ಚಿನ ವಿವರ ಹಾಗೂ ಕಾಯ್ದಿರಿಸಿದ ಮೊತ್ತದಲ್ಲಿನ ವ್ಯಯದ ಬಗ್ಗೆ ವಿವರಿಸುತ್ತಿದ್ದರು.
ಮೂಲ ಸೌಕರ್ಯಕ್ಕೆ ಒತ್ತಾಯ: ಈ ವೇಳೆ ಡಾ. ಅಂಬೇಡ್ಕರ್ ಯುವಕ ಮಂಡಳಿ ಪದಾಧಿಕಾರಿಗಳು ಹಾಗೂ ಇತರೆ ದಲಿತ ಮುಖಂಡರು ಸಭೆಗೆ ಮುತ್ತಿಗೆ ಹಾಕಿ ಹೈಟೆಕ್ ಶೌಚಾಲಯ ಉದ್ಘಾಟನೆ, ಮೂಲ ಸೌಕರ್ಯ ಕಲ್ಪಿಸುವುದು, ಫಲಾನುಭವಿಗಳ ಅಡಿಪಾಯ ಆದ ಮನೆಗಳಿಗೆ ಜಿಪಿಎಸ್ ಮಾಡಬೇಕು. ವಿವಿಧ ವಾರ್ಡುಗಳಲ್ಲಿ ಸಿಸಿ ರಸ್ತೆ ಕಳಪೆಯಾಗಿದ್ದು, ಕ್ರಮ ಕೈಗೊಳ್ಳಬೇಕು. ಕರಡಕಲ್ ಆಶ್ರಯ ಕಾಲೋನಿಯಲ್ಲಿ ಪೈಪ್ಲೈನ್ ಹಾಗೂ ವಿದ್ಯುತ್ ಕಂಬ ಹಾಕಿಸಬೇಕು. ಕುಡಿವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಹಾಗೂ ಮುಖ್ಯಾಧಿಕಾರಿ ಈರಣ್ಣ ಬಿರಾದಾರ್ ಅವರಿಗೆ ಒತ್ತಾಯಿಸಿದರು.
ಸಭೆಯಿಂದ ಹೊರಕ್ಕೆ: ಈ ವೇಳೆ ಪುರಸಭೆ ಸದಸ್ಯರು, ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಏಕಾಏಕಿ ಸಭೆಗೆ ನುಗ್ಗುವುದು ಸರಿಯಲ್ಲ. ಸಭೆ ಮುಗಿದ ನಂತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.
ಏತನ್ಮಧ್ಯೆ ದಲಿತ ಮುಖಂಡರ ಹಾಗೂ ಮುಖ್ಯಾಧಿಕಾರಿಗಳ ಮಧ್ಯೆ ಕೆಲ ಕಾಲ ವಾಗ್ವಾದ ನಡೆಯಿತು. ಈ ವೇಳೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಮಧ್ಯೆ ಪ್ರವೇಶಿಸಿ ಸಮಾಧಾನಪಡಿಸಲು ಯತ್ನಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಛೊಟೀಮಾ, ಸದಸ್ಯರಾದ ಖಾದರಪಾಶಾ, ರುದ್ರಪ್ಪ ಬ್ಯಾಗಿ, ಶರಣಗೌಡ ಪಾಟೀಲ್, ಫಯಾಜ್ ಅಹ್ಮದ್, ಎಂ.ಡಿ. ರಫೀ, ಅನೀಸ್ ಪಾಶಾ, ಬಾಬುರೆಡ್ಡಿ, ವಿನಯ ಕುಮಾರ, ಗುಂಡೇರಾವ್ ದೇಸಾಯಿ, ಶಿವಪ್ರಸಾದ ಪಂಚಾಕ್ಷರಿಮಠ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

