ಹಟ್ಟಿ ಗಣಿ ಕಾರ್ಮಿಕರ ಸಂಘದ ಚುನಾವಣೆ ವಿಳಂಬ; ದೂರಿಗೆ ನಿರ್ಧಾರ
ರಾಯಚೂರು: ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯು ಕಾರ್ಮಿಕರ ಸಂಘಕ್ಕೆ ಚುನಾವಣೆ ನಡೆಸುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಟಿಯುಸಿಐ ಸಂಘಟನೆಯ ಮುಖಂಡ ಆರ್. ಮಾನಸಯ್ಯ, ಈ ನಿಟ್ಟಿನಲ್ಲಿ ಅನಗತ್ಯ ವಿಳಂಬ ನೀತಿ ಮುಂದುವರಿಸಿದರೆ ಗುಲ್ಬರ್ಗದ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಶೀಘ್ರವೇ ದೂರು ಸಲ್ಲಿಸುವುದಾಗಿ ಎಚ್ಚರಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳು ಅಕ್ರಮ ನೇಮಕಾತಿ, ಗಣಿ ತ್ಯಾಜ್ಯ ಮಾರಾಟ ಸೇರಿದಂತೆ ವಿವಿಧ ಹಂತದಲ್ಲಿ ಅಕ್ರಮಗಳನ್ನು ಎಸಗುತ್ತಿದ್ದಾರೆ. ಇದಕ್ಕೆ ಕಾರ್ಮಿಕ ಸಂಘ ಕಡಿವಾಣ ಹಾಕುತ್ತದೆಂಬ ಆತಂಕದಿಂದಲೇ ಕಾರ್ಮಿಕರ ಸಂಘಕ್ಕೆ ಅವಧಿ ಮುಗಿದಿದ್ದರೂ ಚುನಾವಣೆ ನಡೆಸುತ್ತಿಲ್ಲ ಎಂದು ಟೀಕಿಸಿದರು.
ಕಾರ್ಮಿಕ ಆಯುಕ್ತರಿಗೆ ದೂರು: ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರಬೀಳಲಿದ್ದು, ಹಾಗೊಂದು ವೇಳೆ ನೀತಿ ಸಂಹಿತೆ ಜಾರಿಯಾಗಿ ಲೋಕಸಭೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತರೆ ಅದೇ ನೆಪವೊಡ್ಡಿ ಗಣಿ ಆಡಳಿತ ಮಂಡಳಿಯವರು ಕಾರ್ಮಿಕರ ಸಂಘದ ಚುನಾವಣೆ ಮತ್ತಷ್ಟು ವಿಳಂಬ ಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಗಣಿ ಕಂಪನಿಯ ಆಡಳಿತವು ಪ್ರಮುಖ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವ ಉದ್ದೇಶದಿಂದ ಹಾಗೂ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂದಲ್ಲಿ ಅದರಿಂದ ಎದುರಾಗಬಹುದಾದ ಪ್ರತಿರೋಧದಿಂದ ಪಾರಾಗಲು ಇಂಥ ತಂತ್ರಕ್ಕೆ ಮೊರೆ ಹೋಗಿದೆ. ಮಾರ್ಚ್ ಅಂತ್ಯದೊಳಗೆ ಕಾರ್ಮಿಕ ಸಂಘಕ್ಕೆ ಚುನಾವಣೆ ನಡೆಸದಿದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ಸಲ್ಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ನೇಮಕಾತಿ ಸೌಲಭ್ಯ ನೀಡಿ: ಕಾರ್ಮಿಕರ ಸಂಘಕ್ಕೆ ಚುನಾವಣೆಯನ್ನು ನಡೆಸದ ಆಡಳಿತ ಮಂಡಳಿಯು ಕಾರ್ಮಿಕರ ಕತ್ತು ಹಿಸುಕುವ ಕಾರ್ಯ ಮಾಡುತ್ತಿದೆ. ಗಣಿಯಲ್ಲಿ ಶೇ.23ರಷ್ಟು ಚಿನ್ನದ ಉತ್ಪಾದನೆ ಕುಸಿದಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಾಣುತ್ತಿದ್ದರೂ ಗಣಿ ನಷ್ಟದತ್ತ ಸಾಗುತ್ತಿದೆ ಎಂದು ಬಿಂಬಿಸುವ ಕಾರ್ಯ ಆಡಳಿತ ಮಾಡುತ್ತಿದೆ. ಆ ಮೂಲಕ ಖಾಸಗೀಕರಣದ ಹುನ್ನಾರ ಮಾಡುತ್ತಿದೆ ಎಂದು ಟೀಕಿಸಿದರು.
ಗಣಿ ಆಡಳಿತ ಮಂಡಳಿಯು ಕಳೆದ 16 ತಿಂಗಳಿನಲ್ಲಿ 114 ಜನ ಸಿಬ್ಬಂದಿಯ ಅನಾರೋಗ್ಯದ ಹಿನ್ನೆಲೆ ಅವರ ಮಕ್ಕಳಿಗೆ ಉದ್ಯೋಗ ನೀಡಿದೆ. ಇದರಲ್ಲಿ ಬಹುಪಾಲು ಆಡಳಿತ ನಿರ್ವಹಣೆ ಹುದ್ದೆಗಳು ಸೇರಿವೆ. ಅನೇಕ ಕೆಳಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ 800 ಜನ ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದು ಅಂಥವರಿಗೂ ಅನುಕಂಪದ ಆಧಾರದ ನೇಮಕಾತಿ ಸೌಲಭ್ಯ ದೊರಕಿಸಬೇಕೆಂದು ಆಗ್ರಹಿಸಿದರು.
ತ್ಯಾಜ್ಯ ವಿಲೇವಾರಿಯಲ್ಲಿಯೂ ನಿರ್ಲಕ್ಷ್ಯ: ಈಗಲೂ ಗಣಿ ಕಂಪನಿಯಲ್ಲಿ 1130 ವಿವಿಧ ಹುದ್ದೆಗಳು ಖಾಲಿಯಿವೆ. ಭರ್ತಿ ಮಾಡುವ ಗೋಜಿಗೆ ಆಡಳಿತ ಹೋಗಿಲ್ಲ. ಕಾರ್ಮಿಕರಿಗೆ ಗಣಿಯೊಳಗೆ ಕಾರ್ಯನಿರ್ವಹಿಸುವ ವೇಳೆ ಸುರಕ್ಷತಾ ಸೌಲಭ್ಯಗಳಿಲ್ಲ ಎಂದು ಆರೋಪಿಸಿದ ಅವರು, ಗಣಿಗಾರಿಕೆಯಿಂದ ಉತ್ಪನ್ನವಾಗುವ ಸೈನೈಡ್ಯುಕ್ತ ತ್ಯಾಜ್ಯ ವಿಲೇವಾರಿಯಲ್ಲಿಯೂ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದರು.
ಗಣಿ ಕಂಪನಿಯ ಆಸ್ಪತ್ರೆಯ ಖಾಸಗೀಕರಣಕ್ಕೆ ಆಡಳಿತ ಆಲೋಚಿಸಿದ್ದು, ಅಪೋಲೋ ಆಸ್ಪತ್ರೆಯ ವಶಕ್ಕೆ ನೀಡುವ ಹುನ್ನಾರ ನಡೆಸಿದೆ. ಈಗಾಗಲೇ ಸಣ್ಣಪುಟ್ಟ ಕಾಯಿಲೆಗಳಿಗೂ ಕಾರ್ಮಿಕರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಕಳಿಸಲಾಗುತ್ತಿದೆ ಎಂದು ದೂರಿದರು.
ಗಣಿ ಕಂಪನಿಯಲ್ಲಿ ನಡೆಯುತ್ತಿರುವ ಅಕ್ರಮ ವಿರೋಧಿಸಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ. ಉತ್ಪಾದನೆ ಹಾಗೂ ಲಾಭಕ್ಕೆ ತಕ್ಕಂತೆ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ನೀಡಬೇಕು. ಅನಾರೋಗ್ಯದಿಂದ ಬಳಲುತ್ತಿರುವ 800 ಜನ ಕಾರ್ಮಿಕರ ಕುಟುಂಬದವರಿಗೆ ಅನುಕಂಪದ ಆಧಾರದ ಉದ್ಯೋಗ ನೀಡಬೇಕು. ಮುಂಬಡ್ತಿ ಹಾಗೂ ಗ್ರೇಡಿಂಗ್ನಲ್ಲಿ ನಡೆದಿರುವ ಅಕ್ರಮದ ವಿರುದ್ಧ ಹೋರಾಟ ಸೇರಿದಂತೆ ವಿವಿಧ ಬೇಡಿಕೆಗಳ ವಿರುದ್ಧ ನಿರಂತರ ಹೋರಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಂಘಟನೆಯ ಪ್ರಮುಖರಾದ ಶಿವಕುಮಾರ ಮಠ್, ಬಾಬು ಭೂಪುರ ಸೇರಿದಂತೆ ಅನೇಕರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

