ನೇಗಿಲಯೋಗಿ ಆತ್ಮರೂಪ ಘನಮಠಶ್ರೀ
ಮುದಗಲ್/ಲಿಂಗಸ್ಗೂರು: ಸುಮಾರು 175 ವರ್ಷಗಳ ಹಿಂದೆಯೇ ಆಧುನಿಕ ಕೃಷಿ ಪದ್ಧತಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿದ ಸಂತೆಕೆಲ್ಲೂರಿನ ಲಿಂಗೈಕ್ಯ ಘನಮಠ ಶಿವಯೋಗಿಗಳ 134ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಜ.4ರಂದು ಅದ್ಧೂರಿಯಾಗಿ ಜರುಗಲಿದೆ.
ಬಸವ ತತ್ವಗಳನ್ನು ಅನ್ವಯಿಸಿಕೊಂಡ ಶ್ರೀ ನಾಗಭೂಷಣ ಘನಮಠ ಶಿವಯೋಗಿ. 19ನೇ ಶತಮಾನದಲ್ಲಿ ಬಾಳಿ ಬೆಳಗಿದ ವಿಭೂತಿ ಪುರುಷ ಮದ್ವೇರಾಗ್ಯ ಮಹೋದ್ಧಾಮ ಪ್ರಭುಗಳು ಬಸವನಾಮವನ್ನೇ ಉಸಿರಾಗಿಸಿಕೊಂಡು ಭಕ್ತರಲ್ಲಿಯ ಮೂಢನಂಬಿಕೆಯನ್ನು ಹೊಡೆದೊಡಿಸಿ ಸರಳ ಸಾತ್ವಿಕ ವ್ಯಕ್ತಿಯಾಗಿ ಕೃಷಿ- ಋಷಿಯಾಗಿ ಮುಂದೆ ವೈರಾಗ್ಯ ಚಕ್ರವರ್ತಿಯಾಗಿ ಕಾಯಕ ತಪಸ್ವಿ ಎನಿಸಿಕೊಂಡವರು. ಗುರು- ವಿರಕ್ತರನ್ನೂ, ಧರ್ಮಾಧಿಕಾರಿಗಳನ್ನೂ, ಸಮಾಜ ಮುಖಂಡರನ್ನು ಶಿವಾನುಭವದ ಸವಿಯ ಮೂಲಕ ನೇರ-ನಿರ್ಭಿಡೆಯಿಂದ ಅವರನ್ನು ಯೋಗ್ಯ ಮಾರ್ಗದಲ್ಲಿ ನಡೆಯುವಂತೆ ಮಾಡಿದ ಮಹಾನ್ ಪುರುಷ, ನುಡಿದಂತೆ ನಡೆದು ತೋರಿಸಿದ ವೈರಾಗ್ಯ ಮೂರ್ತಿಗಳು ಈ ಶಿವಯೋಗಿ.
ಪವಾಡ ಪುರುಷ: ಆಂಧ್ರಪ್ರದೇಶದ ಪಡ್ಲೂರು ತಾಲೂಕಿನ ದಾರೂರು(ದೋರ್ವಾಡ) ಹಳ್ಳಿಯಲ್ಲಿ ಮಾಹೇಶ್ವರ ದಂಪತಿಯಾದ ವೀರಯ್ಯ- ವೀರಮ್ಮ ಎಂಬ ಒಡಲಲ್ಲಿ ಜನಿಸಿದರು. ತಾರುಣ್ಯಾವಸ್ಥೆಗೆ ಸಂಗಮ್ಮ ಎಂಬ ಸಂಗಾತಿಯಾದಳು. ಸಂಸಾರದಲ್ಲಿ ಜಿಗುಪ್ಸೆ ಹುಟ್ಟಿ ಮಾತಾ-ಪಿತರು, ಸತಿ-ಸುತ, ಬಂಧು ಬಾಂಧವರೆಲ್ಲರನ್ನು ತೊರೆದು ವೈರಾಗ್ಯ ಹೊಂದಿ ಗುರುಗಳ ಅನುಗ್ರಹದಿಂದ ಲೌಕಿಕ ವ್ಯಾಮೋಹದ ಕಂಬಿಯನ್ನು ಕಿತ್ತೊಗೆದು ಮುನ್ನಡೆದರು. ಆಂಧ್ರಪ್ರದೇಶವ ಬಿಟ್ಟು ಕರ್ನಾಟಕವನ್ನು ಚರಿಸಿ ಕನ್ನಡವನ್ನು ಯಲಗೋಡ ಗ್ರಾಮದ ಹಿರೇಮಠ ರೇವಣಸಿದ್ದಯ್ಯನವರಲ್ಲಿ ಕಲಿತರು.
ವರಕವಿ ಶಿವಯೋಗಿ: 'ವರಕವಿ'ಗಳಂತೆ ಪೂರ್ವ ಪರಿಚಯವಿಲ್ಲದೆ ಮಧ್ಯ ವಯಸ್ಸಿನಲ್ಲಿ ಕನ್ನಡ ಕಲಿತು ಉತ್ತಮೊತ್ತವನ್ನು ತತ್ವಪದಗಳನ್ನು, ನೀತಿ ಕವನಗಳನ್ನು ಕಟ್ಟಿ ಹಾಡುತ್ತಿದ್ದರು. ಹೀಗೆ, 'ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ'ಯಂತೆ ಇಡೀ ಕರ್ನಾಟಕವನ್ನು ಸಂಚಾರ ಮಾಡುತ್ತಾ ಜೀವನದುದ್ದಕ್ಕೂ ಅಂತರಂಗ-ಬಹಿರಂಗ ಕೃಷಿಯ ಪರಿಯನ್ನು ತತ್ವಗಳ ಮೂಲಕ ಭಕ್ತರ ಅಂತರಾಳದಲ್ಲಿ ಭಿತ್ತಿದರು. ಈ ನಾಡಿನಲ್ಲಿ ಅಷ್ಟೇ ಅಲ್ಲ ಇಡೀ ಏಷ್ಯಾ ಖಂಡದಲ್ಲಿಯೇ ಪ್ರಥಮ ಕೃಷಿ ಸಂಶೋಧಕನಾಗಿ, ಕೃಷಿಕರ ಬಾಳಿನ ಸ್ನೇಹಮೂರ್ತಿಯಾದರು. ನೇಗಿಲಯೋಗಿಗೆ ಬೆಳಕಿನ ಕನ್ನಡಿ ರೂಪದಲ್ಲಿ 'ಕೃಷಿ ಜ್ಞಾನ ಪ್ರದೀಪಿಕೆ' ಎಂಬ ಗ್ರಂಥವನ್ನು ನೀಡಿದ ಜಗತ್ತಿನ ಮೊದಲ ಕೃಷಿ-ಋಷಿಗಳಿವರು.
ಈ ಗ್ರಂಥವನ್ನು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಸಮೀಪದ ಕುಂಟೋಜಿ ಎಂಬ ಗ್ರಾಮದಲ್ಲಿ ವಾಸ್ತವ್ಯವಿದ್ದಾಗ ಅಲ್ಲಿಗೆ ಬಂದ ಬೆಕ್ಕಿನಹಾಳ ಸಿದ್ದರಾಮಪ್ಪನು ಶಿವಯೋಗಿಗಳ ಸಲಹೆ- ಸೂಚನೆಗಳಿಂದ ಬರೆದರು. ನ್ಯಾಯ ನಿಷ್ಠುರಿ, ದಿಟ್ಟ, ನೇರ ನುಡಿಗಳಿಂದ ಮೂಢ ರೂಢಿಗಳನ್ನು ಸಾಂದರ್ಭಿಕವಾಗಿ ನಾಡಿನಲ್ಲಿ ಅನೇಕ ಪವಾಡ ಗೈದಿಹರು. ಶಿಷ್ಟ ಸಂಪ್ರದಾಯಗಳನ್ನು ಧಿಕ್ಕರಿಸಿ ಭಕ್ತರ ಹೃದಯ ವಾಸಿಯಾದರು. ಘನಮಠೇಶರು ಸೊನ್ನಲಾಪುರ(ಸೊಲ್ಲಾಪುರ)ದ ಸಿದ್ದರಾಮೇಶ್ವರನ ದರ್ಶನದಲ್ಲಿಯೂ ಪವಾಡವೆಸಗಿದ್ದಾರೆ. ಗುಲ್ಬರ್ಗ, ರಾಯಚೂರು, ಬಿಜಾಪುರಗಳಲ್ಲಿ ಬಸವನ ಭಕ್ತಿಯನ್ನು ಸಾರಿ ಹೇಳಿದ್ದಾರೆ. ಕ್ರಿ.ಶ. 1801ರಲ್ಲಿ ಸಂತೆಕೆಲ್ಲೂರಿನಲ್ಲಿ ಲಿಂಗೈಕ್ಯರಾದರು.
ವಸತಿ ಶಾಲೆ ನನಸಾಗಲಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈ ಗ್ರಂಥದ ಮರುಮುದ್ರಣ ಮಾಡುವ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಇಂದಿಗೂ ಅವರ ಗದ್ದುಗೆ ಈ ಗ್ರಾಮದಲ್ಲಿದೆ. ಇವರ ನಂತರ(1979ರಲ್ಲಿ) ಸಿದ್ಧಲಿಂಗ ಮಹಾಸ್ವಾಮಿ ಮಠದ ಪಟ್ಟಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಇವರ ಕಾಲದಲ್ಲಿ ಮಠ ಅನೇಕ ಧಾರ್ಮಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿತು. ಈ ಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆ ತೆಗೆಯಬೇಕು ಎಂಬ ಇವರ ಆಸೆ ಇನ್ನೂ ನನಸಾಗಬೇಕಾಗಿದೆ. 1997ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧಲಿಂಗ ಮಹಾಸ್ವಾಮಿ ಲಿಂಗೈಕ್ಯರಾದರು. ನಂತರ ಇವರ ಉತ್ತರಾಧಿಕಾರಿಯಾಗಿ ಮುದ್ದೇಬಿಹಾಳ ತಾಲೂಕಿನ ಸೊನ್ನ ಗ್ರಾಮದ ಗುರುಬಸವ ಸ್ವಾಮಿ ಮಠದ ಭಕ್ತರು ನೇಮಕ ಮಾಡಿದರು. ನಾಡಿನ ಅನೇಕ ಮಠಗಳ ಸ್ವಾಮೀಜಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅಯ್ಯಚಾರ, ರಥೋತ್ಸವ, ಸಾಮೂಹಿಕ ವಿವಾಹಗಳು ಇದೇ ಸಂದರ್ಭದಲ್ಲಿ ನಡೆಯಲಿವೆ.
ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿಯಲ್ಲಿ ಶ್ರೀ ಘನಮಠ ಶಿವಯೋಗಿಗಳವರು 'ಬಸವ ಪಾಕ' ತಯಾರಿಸುತ್ತಿದ್ದ ಒರಳು ಕುರುಹುವಾಗಿ ಇಂದಿಗೂ ಉಳಿದುಕೊಂಡಿದೆ. ಸಂಚಾರಿ ವೇಳೆಯಲ್ಲಿ ಕೆಲಕಾಲ ಕವಡಿಮಟ್ಟಿ ಗ್ರಾಮದ ಕವಲು ಹಳ್ಳಗಳ ನಡುವೆ ವಾಸವಾಗಿದ್ದರು. ಪುಣ್ಯರಾಧನೆಯನ್ನು ಕವಡಿಮಟ್ಟಿಯ ಶ್ರೀಗಳ ತಪೋಭೂಮಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

