ಬರಲಿವೆ ಭರಪೂರ ಬಸ್, ತಪ್ಪಲಿದೆ ಗೋಳು
ಕ.ಪ್ರ. ವಾರ್ತೆ ಗುಲ್ಬರ್ಗ ಜ.3
ಗುಲ್ಬರ್ಗ ಕೇಂದ್ರ ಹಾಗೂ ಬಿಜಾಪುರ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಶೀಘ್ರವೇ 105 ಕೋಟಿ ವೆಚ್ಚದಲ್ಲಿ 329 ನಗರ ಸಾರಿಗೆ ಮಿನಿ- ದೊಡ್ಡ ಬಸ್ಗಳು ಸೇರ್ಪಡೆಯಾಗಲಿವೆ.
ತಾಲೂಕು ಮತ್ತು ಹೋಬಳಿ, ದೊಡ್ಡ ಊರುಗಳ ನಡುವಿನ ಬಸ್ಗಳ ಬರ ನೀಗಿಸಲು ಬರುವ ದಿನಗಳಲ್ಲಿ ಹಂತ ಹಂತವಾಗಿ ಬಹುಕೋಟಿ ರುಪಾಯಿ ವೆಚ್ಚದಲ್ಲಿ 400ಕ್ಕೂ ಅಧಿಕ ಜಿಲ್ಲಾ ಸಾರಿಗೆ ಬಸ್ಗಳನ್ನು ನಿಯೋಜಿಸಲಾಗುತ್ತಿದೆ. ಅಲ್ಲದೆ, ಕಲಂ 371(ಜೆ) ನಿಯಮಗಳನ್ವಯ 2,200 ಚಾಲಕ- ನಿರ್ವಾಹಕರು ಸೇರಿದಂತೆ ತಂತ್ರಜ್ಞರು, ಭದ್ರತಾ ಸಿಬ್ಬಂದಿ ಸೇರಿದಂತೆ 4 ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಕಕ್ಕೂ ಭರದ ಸಿದ್ಧತೆಯಲ್ಲಿ ತೊಡಗಿದೆ.
ಕೇಂದ್ರದ ಮೆಚ್ಚುಗೆ: ಇದಲ್ಲದೆ ಕೇಂದ್ರ ಸರ್ಕಾರದ ಜೆ-ನರ್ಮ್ ಯೋಜನೆಯಡಿ ಈಶಾನ್ಯ ಸಾರಿಗೆಯ ನಗರ ಸಾರಿಗೆ ಸೇವೆಗೆ ಕೇಂದ್ರ ಸರ್ಕಾರ ದಿಲ್ಖುಷ್ ಆಗಿದೆ. ಗುಲ್ಬರ್ಗ, ಬಳ್ಳಾರಿ, ರಾಯಚೂರು ಹಾಗೂ ಬಿಜಾಪುರಗಳಲ್ಲಿ ಪ್ರತ್ಯೇಕ ನಗರ ಸಾರಿಗೆ ನಿರ್ವಹಣೆಯ ಘಟಕಗಳ ನಿರ್ಮಾಣಕ್ಕೆಂದು 18 ಕೋಟಿ ಹಣ ಬಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಶುಕ್ರವಾರ ಇಲ್ಲಿನ ಸಾರಿಗೆ ಸದನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ ಸಂಸ್ಥೆ ಸಾಗಿ ಬಂದ ದಾರಿ, ಸವಾಲುಗಳು, ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
3 ಕೋಟಿ ಲಾಭ: ಜೆ-ನರ್ಮ್ ಯೋಜನೆಯಡಿ ಈಶಾನ್ಯ ಸಾರಿಗೆ ಹೆಚ್ಚಿನ ಬಸ್ಗಳನ್ನು ಪಡೆದಿದೆ. ಈಗಾಗಲೇ ಗುಲ್ಬರ್ಗ, ಬೀದರ್, ಬಿಜಾಪುರ, ಯಾದಗಿರಿ, ಸೇಡಂ, ಬಳ್ಳಾರಿ, ಹೊಸಪೇಟೆ, ಕೊಪ್ಪಳ ಹಾಗೂ ರಾಯಚೂರು ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭಿಸಲಾಗಿದ್ದು ಕಳೆದೊಂದು ವರ್ಷದಲ್ಲಿ ಈ ಸೇವೆ ಜನರ ಮನ ಸೆಳೆದಿದೆ ಎಂಬುದಕ್ಕೆ ಅದು ಹೊಂದಿರುವ 3 ಕೋಟಿ ಲಾಭ, ಅದನ್ನು ನಿತ್ಯ ಬಳಸುತ್ತಿರುವ 3 ಲಕ್ಷ ಪ್ರಯಾಣಿಕರೇ ಸಾಕ್ಷಿ ಎಂದರು.
105 ಕೋಟಿ ಮೌಲ್ಯದ 329 ನಗರ ಸಾರಿಗೆ ಬಸ್ಗಳು ಶೀಘ್ರ ಸಂಸ್ಥೆಗೆ ಬರಲಿವೆ. ಇವುಗಳನ್ನು ಬೇಡಿಕೆಗೆ ಅನುಗುಣವಾಗಿ ನಗರ- ಪಟ್ಟಣಗಳಿಗೆ ಹಂಚಿಕೆ ಮಾಡಲಾಗುತ್ತದೆ. ಜೊತೆಗೇ ಕ್ಲಸ್ಟರ್ ಬಸ್ ಸೇವೆ ಎಂಬ ಹೊಸ ಯೋಜನೆ ರೂಪಿಸುತ್ತಿದ್ದು ಅದಕ್ಕೂ ಬಸ್ಸುಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.
ಹೊಸ 329 ಬಸ್ಗಳ ಸಂಚಾರ ಬರುವ ಮಾರ್ಚ್ ಒಳಗಾಗಿ ಎಲ್ಲೆಡೆ ಆರಂಭವಾಗಲಿದೆ ಎಂದ ಶಿವಮೂರ್ತಿ, ಆ ಬಸ್ಸುಗಳನ್ನು ಎಲ್ಲೆಲ್ಲಿ, ಎಷ್ಟೆಷ್ಟು ಬಳಸಲಾಗುತ್ತದೆ ಎಂಬುದರ ಅಂಕಿ- ಸಂಖ್ಯೆ ಮಾಹಿತಿ ನೀಡಿದರು.
ಚ ಗುಲ್ಬರ್ಗ- 75, ಚ ರಾಯಚೂರು- 35
ಚ ಕೊಪ್ಪಳ- 20, ಚ ಬಳ್ಳಾರಿ- 30
ಚ ಬೀದರ್- 20, ಚ ಬಿಜಾಪುರ- 35
ಚ ಗಂಗಾವತಿ- 25, ಚ ಹೊಸಪೇಟೆ- 30
ಇದಲ್ಲದೆ ಕಂಪ್ಲಿ- ಗಂಗಾವತಿ, ಸಿಂಧನೂರು- ಕಾರಟಗಿ ಹೀಗೆ ಸಮೀಪದ ಪಟ್ಟಣಗಳು, ಜನಸಂದಣಿ, ಜನಸಂಚಾರ ದಟ್ಟಣೆ ಹೆಚ್ಚಿರುವ ಪಟ್ಟಣಗಳನ್ನು ಆಯ್ದುಕೊಂಡು ಅಂತಹ ಕಡೆಗಳಲ್ಲಿ ಬರುವ ದಿನಗಳಲ್ಲಿ ಕ್ಲಸ್ಟರ್ ಬಸ್ ಸೇವೆ ಆರಂಭಿಸಲಾಗುತ್ತಿದೆ. ಸಂಸ್ಥೆಯ ವ್ಯಾಪ್ತಿಯ ಎಲ್ಲ 6 ಜಿಲ್ಲೆಗಳಲ್ಲಿಯೂ ಕ್ಲಸ್ಟರ್ ಸೇವೆ ಶುರು ಮಾಡಲಾಗುತ್ತದೆ. ಇದಕ್ಕಾಗಿ ಸಮೀಕ್ಷೆಯೂ ಸಾಗಿದೆ ಎಂದು ಶಿವಮೂರ್ತಿ ಹೇಳಿದರು.
ಸಂಸ್ಥೆಯ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ 107 ಹಳ್ಳಿಗಳಿಗೆ ಬಸ್ ಸೇವೆ ಇಲ್ಲ. ಇಲ್ಲಿ ಸಂಚಾರಕ್ಕೆ ರಸ್ತೆ ಸರಿ ಇಲ್ಲ. ಅದಕ್ಕಾಗಿ ಬಸ್ ಸೇವೆ ನೀಡಲಾಗಿಲ್ಲ. ಆದಾಗ್ಯೂ ಇಂತಹ ಹಳ್ಳಿಗಳಿಗೆ ಸಮೀಪದವರೆಗೂ ಬಸ್ಗಳನ್ನು ಓಡಿಸಿ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಸಿಬ್ಬಂದಿ ನೇಮಕ: ಸಂಸ್ಥೆಯಲ್ಲಿ ಮೊದಲಿರುವ ಬಸ್ಗಳಿಗೂ ಸಿಬ್ಬಂದಿ ಕೊರತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಬರುವ ದಿನಗಳಲ್ಲಿ ಈ ಕೆಳಗಿನ ಸಿಬ್ಬಂದಿ ನೇಮಕಕ್ಕೆ ಯೋಜನೆ ರೂಪಿಸಿದೆ.
1) 3 ಸಾವಿರ ಚಾಲಕ- ನಿರ್ವಾಹಕರು
2) 254 ಭದ್ರತಾ ಸಿಬ್ಬಂದಿ
3) 500 ಮೆಕ್ಯಾನಿಕ್ಗಳು
4) 34 ಟ್ರಾಫಿಕ್ ಇನ್ಸ್ಪೆಕ್ಟರ್ಗಳು
5) 100 ಆಡಳಿತ ಸಿಬ್ಬಂದಿ
ಕಿರುಕುಳ ಕಂಡಲ್ಲಿ ಕ್ರಮ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಿವಮೂರ್ತಿ, ಯಾವುದೇ ಘಟಕದಲ್ಲಿ ಸಿಬ್ಬಂದಿಗೆ ಕಿರುಕುಳವಿದೆ ಎಂಬ ವಿಚಾರ ಗಮನಕ್ಕೆ ಬಂದರೆ ತಕ್ಷಣ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.
ಚಿಂಚೋಳಿ ಬಸ್ ಡೀಪೋದಲ್ಲಿ ಕಿಯೋಸ್ಕ್ನಿಂದ ರಜೆ ಪಡೆದರೂ ಸಿಬ್ಬಂದಿಗೆ ತಮ್ಮ ರುಜು ಹಾಕಿಸಿಕೊಂಡು ಹೋಗಲು ಅಲ್ಲಿನ ಅಧಿಕಾರಿ ಆಗ್ರಹಿಸುತ್ತಿರುವ ದೂರುಗಳು ಕೇಳಿ ಬಂದಿರುವ ಬಗ್ಗೆ ಗಮನ ಸೆಳೆದಾಗ, ಇಂತಹ ದೂರುಗಳನ್ನು ಖುದ್ದು ಗಮನಿಸಿ ಸತ್ಯವೆಂದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತೆಲಂಗಾಣಾ ಮುಷ್ಕರದಿಂದ 9 ಕೋಟಿ ನಷ್ಟ: ತೆಲಂಗಾಣ ಮುಷ್ಕರದ ಹಿನ್ನೆಲೆಯಲ್ಲಿ ವಾರ್ಷಿಕ 9 ಕೋಟಿ ನಷ್ಟ ಅನುಭವಿಸುವಂತಾಯ್ತು. ಕಳೆದ ವರ್ಷ 20 ಕೋಟಿ ನಷ್ಟದಲ್ಲಿ ಬಂದದ್ದಕ್ಕೆ ಮುಖ್ಯವಾಗಿ ಈ ಅಂಶವೇ ಕಾರಣ. ಈ ಬಾರಿ ಆಂಧ್ರದಲ್ಲಿ ಇನ್ನೂ ಹೆಚ್ಚಿನ ಬಸ್ ಓಡಿಸಲು ಪರವಾನಗಿ ಪಡೆದಿದೆ ಎಂದರು. ಪಕ್ಕದ ಮಹಾರಾಷ್ಟ್ರದಲ್ಲಿ ಸಂಸ್ಥೆ 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್ ಓಡಿಸುತ್ತಿದೆ. ಅಲ್ಲಿನ ಇಲಾಖೆಯ ಸಿಬ್ಬಂದಿಯಿಂದ ನಮ್ಮ ಸಿಬ್ಬಂದಿ ಕಿರುಕುಳ ಎದುರಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಶೀಘ್ರ ಆ ರಾಜ್ಯದ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಹುಡುಕಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

