ಕೃವಿವಿಗೆ ಘನಮಠಶ್ರೀ ನಾಮಕರಣಕ್ಕೆ ಶೀಘ್ರ ಪ್ರಸ್ತಾವ
ಕ.ಪ್ರ. ವಾರ್ತೆ, ಮುದಗಲ್, ಜ.5
ರೈತರಿಗೆ ಕೃಷಿ ಜ್ಞಾನ ಪ್ರದೀಪಿಕೆಯಂಥ ಮಹಾನ್ ಗ್ರಂಥವನ್ನು ನೀಡಿರುವ ಘನಮಠ ಶಿವಯೋಗಿಗಳ ಹೆಸರನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಲು ಶೀಘ್ರದಲ್ಲೇ ಕ್ಯಾಬಿನೆಟ್ನಲ್ಲಿಡುವುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ಸಂತೆಕೆಲ್ಲೂರು ಘನಮಠ ಶಿವಯೋಗಿಗಳ 134ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಇದಾಗಿದ್ದು, ಶಾಸಕರು, ಸಂಸದರು ಘನಮಠ ಶಿವಯೋಗಿ ಹೆಸರು ಇಡುವಂತೆ ಮನವಿ ಮಾಡಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಘನಮಠ ಶಿವಯೋಗಿಗಳ ಅಧ್ಯಯನ ಪೀಠ ಸ್ಥಾಪನೆ, ಸಂಶೋಧನಾ ಕೆಂದ್ರ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಭರವಸೆ: ರಾಯಚೂರು ಜಿಲ್ಲೆ ಬಿಸಿಲಿನ ನಾಡಾಗಿದ್ದು, ಜಿಲ್ಲೆಯನ್ನು ಸೋಲಾರ್ ವಿದ್ಯುತ್ ಯೋಜನೆಯಡಿ ಸೇರಿಸುವುದು, ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು, ಲಿಂಗಸ್ಗೂರು- ಸಿಂಧನೂರು ರಸ್ತೆ ಅಭಿವೃದ್ಧಿಗೆ ಈಗಾಗಲೇ 82 ಕೋಟಿ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಟೆಂಡರ್ ಕರೆದು ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಹೈ-ಕ ಭಾಗವನ್ನು 371(ಜೆ) ಅಡಿಯಲ್ಲಿ ಸೇರ್ಪಡೆ ಮಾಡಿದ್ದು ಈ ಭಾಗದ ಜನರಿಗೆ ಉದ್ಯೋಗ, ಸರ್ಕಾರದ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವಂತೆ ಮಾಡಿದೆ. ರಾಜ್ಯ ಸರ್ಕಾರ ನಿಯಮಾವಳಿಗಳನ್ನು ಸಿದ್ಧಪಡಿಸುತ್ತಿದೆ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಯತ್ನ: ರಾಜ್ಯದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನಡೆಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು ಆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಯಾವುದೇ ಭ್ರಷ್ಟಾಚಾರ ನಡೆಯದಂತೆ ತಡೆಯಲು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸತತ ಪ್ರಯತ್ನ ಮಾಡುವುದಾಗಿ ಹೇಳಿದರು.
ಕೊಪ್ಪಳ ಸಂಸದ ಶಿವರಾಮೇಗೌಡ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ದೇವದುರ್ಗ ಶಾಸಕ ವೆಂಕಟೇಶ ನಾಯಕ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಶಹಾಪುರ ಶಾಸಕ ಗುರು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ, ಶರಣಪ್ಪಗೌಡ ಜಾಡಲದಿನ್ನಿ, ಸೇರಿದಂತೆ ರಾಜಕೀಯ ಮುಖಂಡರು ಇದ್ದರು.
ಉತ್ತಮ ಸಂಸ್ಕೃತಿಯಿಂದಲೇ ಮೋಕ್ಷ: ನಂದವಾಡಗಿಶ್ರೀ
ಮುದಗಲ್: ಧರ್ಮ ಉತ್ತಮ ಸಂಸ್ಕೃತಿ ಮೈಗೂಡಿಸಿಕೊಂಡರೆ ಬದುಕು ಮುಕ್ತಿ ಹಾಗೂ ಮೋಕ್ಷಕ್ಕೆ ಕಾರಣವಾಗುತ್ತದೆ. ಕಾರಣ ನವ ದಂಪತಿ ಧರ್ಮ ಚಿತ್ತರಾಗಿ ಬಾಳುವಂತೆ ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು ಹೇಳಿದರು.
ಲಿಂಗಸ್ಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಘನಮಠೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ, ಸಭೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಿತ ಸಂತಾನ ಜೀವನಕ್ಕೆ ಸೋಪಾನ. ನವ ದಂಪತಿ ಶರಣರ ಸದ್ಗುಣ ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸುಸ್ಕೃತ ಮಕ್ಕಳನ್ನು ನೀಡಿ ಎಂದು ಶುಭ ಹಾರೈಸಿದರು.
ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿ, ಪ್ರೀತಿ, ಕರುಣೆ ಪರಸ್ಪರ ಸಾಮ್ಯತೆಯಿಂದ ಉತ್ತಮ ಬದುಕು ನಿಮ್ಮದಾಗಲಿ ಎಂದರು. ವಿರೇಶ ವಿರಕ್ತಮಠ ಹಾಗೂ ಸೂಗಯ್ಯ ಹಿರೇಮಠ ಮಂತ್ರ ಘೋಷದ ಮೂಲಕ ನಾಲ್ಕು ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಘನಮಠದ ಗುರುಬಸವ ಸ್ವಾಮೀಜಿ, ಗುಲ್ಬರ್ಗ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯರು, ಮಹಾಂತಿನ ಮಠದ ಮರಿಮಹಾಂತ ದೇವರು, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಮರಿಗೌಡ ಪಾಟೀಲ್, ವಿರೇಶ ವಿರಕ್ತಮಠ, ಮಹಾಂತಪ್ಪ ನಾವದಗಿ ಇದ್ದರು. ಮಸ್ಕಿ ಪಿಎಸ್ಐ ಗುರುರಾಜ ಕಟ್ಟಿಮನಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರಾದ ಬಸಮ್ಮ ತುರ್ವಿಹಾಳ, ಶಾಂತಾಬಾಯಿ, ಜೆಸ್ಕಾಂ ನಿವೃತ್ತ ಎಂಜಿನಿಯರ್ ಜಗದೀಶ್ವರಯ್ಯ ಅವರನ್ನು ಶ್ರೀಗಳು ಗೌರವಿಸಿದರು.
'ಸಂಸ್ಕೃತಿ, ಶೈಕ್ಷಣಿಕ ಪ್ರಗತಿಗೆ ಮಠಗಳ ಕೊಡುಗೆ ಅಪಾರ'
ಮುದಗಲ್: ನಮ್ಮ ದೇಶ ನಾನಾ ಭಾಷೆ, ಸಂಸ್ಕೃತಿಯ ತವರೂರು. ಸಂಸ್ಕೃತಿ ಮತ್ತು ಶೈಕ್ಷಣಿಕ ಪ್ರಗತಿಗೆ ಮಠ, ಮಾನ್ಯಗಳ ಕೊಡುಗೆ ಅಪಾರ ಎಂದು ಸಹಾಯಕ ಆಯುಕ್ತ ಟಿ. ಯೋಗೇಶ ಹೇಳಿದರು.
ಲಿಂಗಸ್ಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದ ಘನಮಠ ಶಿವಯೋಗಿಗಳ ತತ್ವ ದರ್ಶನ ಪ್ರವಚನ ಮುಕ್ತಾಯ ಸಭೆಯಲ್ಲಿ ಮಾತನಾಡಿ, ಉತ್ತಮ ಸಮಾಜ ಕಲುಷಿತಕ್ಕೆ ಆಸ್ಪದ ಬೇಡ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಏಳಿಗೆ ನಾಂದಿಯಾಗಿವೆ ಎಂದರು.
ಡಿವೈಎಸ್ಪಿ ಅನಿತಾ ಹದ್ದಣ್ಣನವರ್ ಮಾತನಾಡಿ, ಸಮಾಜದ ಅಂಕುಡೊಂಡು, ಮೂಢನಂಬಿಕೆ ತಿದ್ದುವ ಕಾರ್ಯ ಘನಮಠರು ಶತಮಾನದಿಂದೆಯೇ ಮಾಡಿದ್ದಾರೆ ಎಂದರು. ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮಾತನಾಡಿ, ಘನಮಠರು ನಾಡಿನ ರೈತ ಸಮೂಹಕ್ಕೆ 'ಕೃಷಿಜ್ಞಾನ ಪ್ರದೀಪಿಕೆ' ಮೂಲಕ ಉತ್ತಮ ಸಂದೇಶ ನೀಡಿದ್ದಾರೆ. ಇದು ಸರ್ಕಾರ ರೈತಪರ ಚಿಂತನೆ ಮಾಡದೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಸಂಕಷ್ಟಕ್ಕೆ ತಳ್ಳಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

