ಕೃಷಿ ಕ್ಷೇತ್ರದಲ್ಲಿನ ದುಡಿಮೆಯೇ ನಮ್ಮ ಸಂಸ್ಕೃತಿ: ಸಂಸದ ಸೇಡಂ
ಕ.ಪ್ರ. ವಾರ್ತೆ, ರಾಯಚೂರು, ಜ.5
ಕೃಷಿ ಕ್ಷೇತ್ರದಲ್ಲಿನ ದುಡಿಮೆ ನಮ್ಮ ಸಂಸ್ಕೃತಿಯಾಗಿದೆ. ಅಂಥ ಮಹಾನ್ ಸಂಸ್ಕೃತಿ ಮರೆತು ಶ್ರೀಮಂತಿಕೆಯ ಬೆನ್ನು ಬಿದ್ದಿದ್ದೇವೆ. ಆಲಸ್ಯದ ಶ್ರೀಮಂತಿಕೆಗೆ ಮಾರು ಹೋಗಿದ್ದು, ನಮ್ಮ ಶ್ರೀಮಂತಿಕೆಯು ಕೃಷಿಯಲ್ಲಿ ಅಡಗಿದೆ ಎಂಬುದರ ಅರಿವಾಗದಿರುವುದು ಸಮಗ್ರ ಪ್ರಗತಿಗೆ ಹಿನ್ನಡೆಯುಂಟು ಮಾಡಿದೆ ಎಂದು ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ಕಳವಳ ವ್ಯಕ್ತಪಡಿಸಿದರು.
ನಗರದ ರಾಯಚೂರು ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಭಾನುವಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಭಾಗೀಯ ಸಮ್ಮೇಳನದ 2ನೇ ದಿನ ಹೈ.ಕ. ಪ್ರದೇಶದಲ್ಲಿ ಕೃಷಿ ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಹೈ.ಕ. ಪ್ರದೇಶದ ಹಿಂದುಳಿದಿದೆ ಎಂದು ಹೇಳಿಕೊಳ್ಳುತ್ತಲೇ ಕಾಲಕಳೆಯಲಾಗುತ್ತಿದೆ. ಹೈ.ಕ.ಭಾಗದಲ್ಲಿನ ಮಾನವ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ನಿಟ್ಟಿನಲ್ಲಿ ಆಲೋಚನೆಗಳಾಗಿಲ್ಲ. ಈ ಭಾಗದ ಜನಸಂಖ್ಯೆಗೆ ಅನುಗುಣವಾಗಿ ಬೇಕು ಬೇಡಗಳ ಪಟ್ಟಿ ತಯಾರಿಲ್ಲ. ಪರಿಣಾಮ ಅವಶ್ಯಕತೆಗಳ ಈಡೇರಿಕೆಗೆ ಪ್ರಯತ್ನ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಯಶಸ್ಸು ಕಂಡಿಲ್ಲ: ಲಭ್ಯವಿರುವ ಕೃಷಿ ಪ್ರದೇಶದಲ್ಲಿ ನೀರು ಮತ್ತು ಮಣ್ಣಿನ ಫಲವತ್ತತೆಯ ಸದ್ಬಳಕೆ ಮೂಲಕ ಕೃಷಿಯಲ್ಲಿ ಯಶಸ್ಸು ಕಾಣುವ ಮಾರ್ಗೋಪಾಯಗಳ ಕುರಿತು ಚಿಂತನೆ ನಡೆಯಬೇಕಿದೆ. ಹೈ.ಕ. ಪ್ರದೇಶದಲ್ಲಿ ಕೃಷ್ಣಾ, ತುಂಗಭದ್ರಾ ಮತ್ತಿತರೆ ನದಿಗಳು ಹರಿಯುತ್ತಿದ್ದರೂ ಬೌದ್ಧಿಕ ಬಡತನದಿಂದಾಗಿ ಕೃಷಿಯಲ್ಲಿ ರೈತರು ಯಶಸ್ಸು ಕಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ದಿನಮಾನದಲ್ಲಿ ಕೃಷಿಯಾಧಾರಿತ ವಿಕಾಸ ಅವಶ್ಯ. ಈ ನಿಟ್ಟಿನಲ್ಲಿ ಆಯ್ದ ಗ್ರಾಮಗಳಲ್ಲಿ ತಮ್ಮ ನೇತೃತ್ವದಲ್ಲಿ ವಿಕಾಸ ಸಾಕಾರಗೊಳಿಸುವ ಪದ್ಧತಿಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜಾರಿಯಲ್ಲಿದೆ. ರೈತರಿಗೆ ಉಪಯುಕ್ತ ಸಲಹೆ ನೀಡುವ ಮೂಲಕ ಸಮೃದ್ಧ ಬದುಕಿನ ಬೇಡಿಕೆ ಈಡೇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಆಡಳಿತರೂಢರ ನಿರಾಸಕ್ತಿ: ಹೈ.ಕ. ಭಾಗದಲ್ಲಿ ಸೌರಶಕ್ತಿ ಸೌಲಭ್ಯ ದೊರಕಿಸಲು ವಿಪುಲ ಅವಕಾಶಗಳಿದ್ದರೂ ಆಡಳಿತರೂಢರಿಗೆ ಅದರಲ್ಲಿ ಆಸಕ್ತಿಯಿಲ್ಲವಾಗಿದೆ. ಜನರಿಗೆ ಸೌರಶಕ್ತಿಯ ಉತ್ಪಾದನೆಗೆ ಪೂರಕ ಸಹಾಯಧನ ನೀಡಿಕೆಗೆ ಸರ್ಕಾರಗಳು ಮೀನಮೇಷ ಎಣಿಸುತ್ತಿದ್ದು, ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಅದರಿಂದ ಅಭಿವೃದ್ಧಿಗೂ ಪೆಟ್ಟು ಬಿದ್ದಿದೆ ಎಂದು ಹೇಳಿದರು.
ಬಹು ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಕೊಡುಕೊಳ್ಳುವಿಕೆಯ ವಹಿವಾಟಿನಲ್ಲಿ ಆಹಾರ ಧಾನ್ಯಗಳೇ ಬಳಕೆಯಾಗುತ್ತಿದ್ದವು. ಅದರಿಂದ ಆಯಾ ಗ್ರಾಮಗಳಲ್ಲಿ ಬೆಳೆದ ಆಹಾರ ಧಾನ್ಯ ಅಲ್ಲಿಯ ಜನರೇ ಬಳಸುತ್ತಿದ್ದರು. ಆದರೆ ಸದ್ಯ ಅಂಥ ಪದ್ಧತಿಯಿಲ್ಲ. ಎಲ್ಲ ಹಂತದಲ್ಲಿಯೂ ಹಣವೇ ಪ್ರಾಮುಖ್ಯತೆ ಪಡೆಯುತ್ತಿದೆ. ಅದರಿಂದಾಗಿ ಭೌತಿಕ ಶ್ರೀಮಂತಿಕೆಯತ್ತಲೇ ಎಲ್ಲರ ಗಮನ ನೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹುಬೆಳೆ ಪದ್ಧತಿ ಅನುಸರಿಸಿ: ರೈತರು ಕೃಷಿಯಲ್ಲಿ ಬಹುಮುಖಿ ಕೃಷಿ ಪದ್ಧತಿ ಅನುಸರಿಸುತ್ತಿಲ್ಲ. ಏಕಪದ್ಧತಿಯ ಬೆಳೆಗಳ ಬೆಳೆಯುವುದರಿಂದ ಮಣ್ಣಿನ ಮತ್ತು ನೀರಿನ ಅತೀಯಾದ ಬಳಕೆಯಾಗುತ್ತಿದೆ. ಬದುಕಿಗೂ ಭದ್ರತೆಯಿಲ್ಲವಾಗಿದೆ. ಕೃಷಿಯಲ್ಲಿ ರೈತರಿಗೆ ನಷ್ಟ ಖಚಿತ ಎಂಬಂಥ ಸ್ಥಿತಿಯಿದೆ. ರೈತರು ಬಹುಬೆಳೆ ಪದ್ಧತಿ ಅನುಸರಿಸುವ ಮೂಲಕ ಬದುಕಿನ ಭದ್ರತೆ ಕಾಣುವಂತೆ ಸಲಹೆ ನೀಡಿದರು.
ಕೃಷಿ ಕ್ಷೇತ್ರದಲ್ಲಿನ ಸವಾಲುಗಳು ಹೈ.ಕ. ಪ್ರದೇಶ, ಕರ್ನಾಟಕ ಹಾಗೂ ದೇಶಮಟ್ಟದಲ್ಲಿ ಒಂದೇ ರೀತಿಯಾಗಿದ್ದು, ಎಲ್ಲೆಡೆ ರೈತರು ಅಗತ್ಯತೆಗಳನ್ನು ಅವಲೋಕಿಸಿ ಉತ್ಪಾದಿಸುತ್ತಿಲ್ಲ. ಬದಲಿಗೆ ಲಭ್ಯವಿರುವುದನ್ನೇ ಬೆಳೆಯುವತ್ತ ಮುಂದಾಗುತ್ತಿದ್ದು ಅದರಿಂದಲೇ ರೈತರಿಗೆ ಹಾನಿಯಾಗುತ್ತಿದೆ ಎಂದು ಹೇಳಿದರು.
ದೇಶದಲ್ಲೇ ಅಗಾಧ ಸಂಪನ್ಮೂಲ: ಹೊರರಾಷ್ಟ್ರಗಳು ಭಾರತಕ್ಕೆ ಅಭಿವೃದ್ಧಿ ವಿಚಾರದಲ್ಲಿ ಮಾನದಂಡವಾಗಬಾರದು, ವಿದೇಶದಲ್ಲಿ ಜನಸಂಖ್ಯೆ ಕಡಿಮೆ. ಆದರೆ ಭಾರತದಲ್ಲಿ ಅಗಾಧವಾದಿ ಮಾನವ ಸಂಪನ್ಮೂಲ ಮತ್ತು ಫಲವತ್ತಾದ ಭೂಪ್ರದೇಶದವಿದೆ. ಆದರೆ ನಾವೆಲ್ಲರೂ ಇವುಗಳ ಸಮರ್ಪಕ ಬಳಕೆಯಲ್ಲಿ ಎಡವಿದ್ದೇವೆಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಕೃಷಿ ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

