ರಾಯಚೂರು

ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಜಿಲ್ಲಾ ಆಸ್ಪತ್ರೆ ಜಾಗ ಬೇಡ: ಒತ್ತಾಯ

Published On :

ಕ.ಪ್ರ. ವಾರ್ತೆ, ರಾಯಚೂರು, ಜ.4
ನಗರದ ಜಿಲ್ಲಾ ಆಸ್ಪತ್ರೆಯಿರುವ ಸ್ಥಳದಲ್ಲಿ ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ನಿರ್ಧರಿಸಿರುವ ಜಿಲ್ಲಾಡಳಿತದ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ತೀವ್ರವಾಗಿ ವಿರೋಧಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ವಿಷಯ ತಿಳಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಸಿ.ಎನ್. ಕುಲಕರ್ಣಿ, ಸದ್ಯದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೇವಲ ಆಸ್ಪತ್ರೆಯಲ್ಲ ಅದರ ಜತೆಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಡಳಿತದ ಹೊಸ ಯೋಜನೆಯ ಜಾರಿಯಿಂದ ಅಂಥ ಘಟಕಗಳ ಕಾರ್ಯನಿರ್ವಹಣೆಗೆ ಅಡಚಣೆಯಾಗಲಿದೆ ಎಂದು ದೂರಿದರು.
ಸ್ಥಳಾಂತರದಿಂದ ಜನತೆಗೆ ತೊಂದರೆ: ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಸದ್ಯದ ಜಿಲ್ಲಾ ಆಸ್ಪತ್ರೆ ಸೂಕ್ತ ಸ್ಥಳವಲ್ಲ. ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಪ್ರಯೋಗಾಲಯ, ಕ್ಷಯ ರೋಗ ಕೇಂದ್ರ, ಆರ್ಸೆನಿಕ್ ಯುಕ್ತ ನೀರಿನ ತಪಾಸಣೆ ಕೇಂದ್ರ ಸೇರಿ ಅನೇಕ ಆರೋಗ್ಯ ಇಲಾಖೆಯ ಕಚೇರಿಗಳಿವೆ. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿದಲ್ಲಿ ಜನತೆಗೆ ತೊಂದರೆಯಾಗಲಿದೆ ಎಂದು ದೂರಿದರು.
ಸರಿಯಾದ ನಿರ್ಧಾರವಲ್ಲ: ಈಗಾಗಲೇ ಸರ್ಕಾರ ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಸಿಐ ಮಾರ್ಗಸೂಚಿಯಂತೆ ಅನೇಕ ಕ್ರಮ ಕೈಗೊಂಡಿದೆ. ರಿಮ್ಸ್ ಕಾಲೇಜಿನ ಆವರಣದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಜಾಗದ ಕೊರತೆಯಿದೆ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಯ ಜಾಗವನ್ನು ಜಿಲ್ಲಾಡಳಿತ ಭವನ ಮತ್ತು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಾದ ನಿರ್ಧಾರವಲ್ಲ ಎಂದು ಟೀಕಿಸಿದರು.
ಜಿಲ್ಲಾಡಳಿತದ ನಿರ್ಧಾರ ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಅವರನ್ನು ಈಚೆಗೆ ನಗರದಲ್ಲಿ ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ. ಅವರು ಈ ಬೆಳವಣಿಗೆಯ ಕುರಿತು ತಮಗೆ ಮಾಹಿತಿಯಿಲ್ಲ. ಆದರೆ ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸುವ ಭರವಸೆ ನೀಡಿದ್ದಾರೆಂದರು.
ರೋಗಿಗಳಿಗೆ ಅನಾನುಕೂಲ: ಜಿಲ್ಲಾಸ್ಪತ್ರೆಯಿರುವ ಸ್ಥಳವು ಎಲ್ಲ ರೀತಿಯಿಂದಲೂ ಆರೋಗ್ಯ ಸಂಬಂಧಿ ಸೇವೆಗಳನ್ನೊದಗಿಸಲು ಅನುಕೂಲಕರವಾಗಿದೆ. ಬಡ ರೋಗಿಗಳ ಆಗಮನಕ್ಕೆ ಪೂರಕವಾಗಿದೆ. ಆಸ್ಪತ್ರೆಯ ಜಾಗೆಯಲ್ಲಿನ ಬೇರೆ ಬೇರೆ ಆರೋಗ್ಯ ಘಟಕಗಳನ್ನು ಸ್ಥಳಾಂತರಿಸಿ ಅಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಿದಲ್ಲಿ ರೋಗಿಗಳಿಗೆ ಅನಾನುಕೂಲವೇ ಹೆಚ್ಚಾಗಲಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸದ್ಯದ ಜಿಲ್ಲಾಸ್ಪತ್ರೆಯಿರುವ ಸ್ಥಳದಲ್ಲಿ ಯಾವುದೇ ಕಾರಣಕ್ಕೆ ಜಿಲ್ಲಾಡಳಿತ ಭವನ ಇಲ್ಲವೇ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಬಾರದು. ಜನತೆಗೆ ಹೆಚ್ಚೆಚ್ಚು ಆರೋಗ್ಯ ಸಂಬಂಧಿ ಸೇವೆಗಳನ್ನು ಒದಗಿಸಲು ಸದರಿ ಜಾಗೆ ಬಳಕೆಯಾಗಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಐಎಂಎ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಕಕ್ಕೇರಿ, ಪ್ರಮುಖರಾದ ಡಾ. ವಿ.ಎ. ಮಾಲಿ ಪಾಟೀಲ್, ಡಾ. ಮಹಾಲಿಂಗ, ಡಾ. ನರಸಿಂಹಲು ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.