ರಾಜ್ಯದ ರೈತರಿಗಿಲ್ಲ ನೀರಿನ ಭರವಸೆ
ಕ.ಪ್ರ. ವಾರ್ತೆ, ರಾಯಚೂರು, ಜ.7
ರಾಜಕೀಯ ಮೇಲಾಟ, ಕಾಲುವೆಯ ಮೇಲ್ಭಾಗದ ರೈತರ ಪ್ರಭಾವದಿಂದ ರಾಜ್ಯದ ರೈತರಿಗೆ ಸೇರಿದ ಅಪಾರ ನೀರು ಆಂಧ್ರದ ಪಾಲು. ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಎಡದಂಡೆಯ ಕಡೆಯ ಭಾಗದ ರೈತರಿಗೆ ನೀರಿಲ್ಲದಂಥ ಸ್ಥಿತಿ. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ವೈಫಲ್ಯ. ಮೊದಲ ಹಂಗಾಮಿನ ಕೊನೆಗೇ ನೀರಿಗೆ ಪರದಾಟ. ಎರಡನೇ ಹಂಗಾಮಿಗೆ ತೊಡಗಲು ಅಚ್ಚುಕಟ್ಟು ಪ್ರದೇಶದ ಕಡೆಯ ಭಾಗದ ರೈತರಲ್ಲಿ ಧೈರ್ಯವಿಲ್ಲ.
- ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ ನಂತರದಲ್ಲಿನ ಸದ್ಯದ ರೈತರ ದುಸ್ಥಿತಿಯಿದು.
ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ರೈತರ ಬೆಳೆಗೆ ನೀರಿಗಾಗಿ ಹೋರಾಟ ಕಂಡುಬರುವುದು ಸಾಮಾನ್ಯ ಸಂಗತಿ. ಆದರೆ ಪ್ರಸಕ್ತ ವರ್ಷ ರೈತರು ಬೆಳೆದ ಮೊದಲ ಹಂಗಾಮಿನ ಬೆಳೆ ಕಟಾವು ಹಂತದಲ್ಲಿರುವಾಗಲೇ ಕೊನೆಯ ಹಂತದಲ್ಲಿ ನೀರಿಲ್ಲದಂಥ ಪರಿಸ್ಥಿತಿಯಿದ್ದು ರೈತರು ಸಂಘರ್ಷದ ಹಾದಿ ಹಿಡಿಯುವಂತಾಗಿದೆ.
ನಷ್ಟದ ಭೀತಿ: ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದಲ್ಲಿ ರೈತರು ಒಟ್ಟು 1.20 ಲಕ್ಷ ಎಕರೆ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿದೆ. ಆದರೆ ನೀರಾವರಿಯಾಗಿರುವುದು ದಾಖಲೆಗಳಲ್ಲಿ ಮಾತ್ರ. ವಾಸ್ತವದಲ್ಲಿ ನೀರು ದೊರೆಯುವುದು ವಿರಳ. ಮೊದಲ ಹಂಗಾಮಿಗೆ ಆಗೊಮ್ಮೆ ಈಗೊಮ್ಮೆ ದೊರೆಯುವ ನೀರಿನಲ್ಲೇ ರೈತರು ಪ್ರಸಕ್ತ ವರ್ಷ 10 ಸಾವಿರ ಎಕರೆಯಲ್ಲಿ ಬತ್ತ ಇನ್ನುಳಿದಂತೆ ಮೆಣಸಿನಕಾಯಿ, ಹತ್ತಿ, ಜೋಳ ಬೆಳೆದಿದ್ದಾರೆ. ಬತ್ತ ಹೊರತುಪಡಿಸಿ ಇನ್ನುಳಿದ ಬೆಳೆಗೀಗ ನೀರಿನ ಅವಶ್ಯಕತೆಯಿದೆ. ಆದರೆ ಒಂದು ತಿಂಗಳಿನಿಂದ ನೀರು ದೊರೆತಿಲ್ಲ.
ಆಂಧ್ರದ ಪಾಲು: ಎಡದಂಡೆ ಕಾಲುವೆಯ ಮೇಲ್ಭಾಗದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ರೈತರು ಅಗತ್ಯಕ್ಕಿಂತ ಹೆಚ್ಚಿನ ನೀರು ಪಡೆದು ಬಳಕೆ ಮಾಡದೇ ಹಳ್ಳಗಳಿಗೆ ಹರಿಬಿಡುತ್ತಿದ್ದು, ನೀರು ಮುಂದೆ ನದಿಯ ಮೂಲಕ ಆಂಧ್ರದ ಪಾಲಾಗುತ್ತಿದೆ. ಅದರಿಂದಾಗಿ ಕರ್ನಾಟಕದ ರೈತರಿಗೆ ಸೇರಿದ ಸಾವಿರಾರು ಕ್ಯುಸೆಕ್ ನೀರು ಆಂಧ್ರಕ್ಕೆ ಸೇರುತ್ತಿದೆ. ಗಂಗಾವತಿ ತಾಲೂಕು ಮತ್ತು ಸಿಂಧನೂರು ತಾಲೂಕಿನ ವ್ಯಾಪ್ತಿಯ ಕೆಲವೆಡೆ ಎಡದಂಡೆಯಿಂದ ನೀರು ಅನಗತ್ಯ ಹಳ್ಳ ಸೇರುತ್ತಿದೆ. ಕಾಲುವೆಯ ಕಡೆಯ ಭಾಗದಲ್ಲಿ ನೀರಿಲ್ಲವಾಗಿದೆ.
ಮೇಲ್ಭಾಗದಿಂದ ವ್ಯರ್ಥ ಹರಿವ ನೀರು ಆಂಧ್ರಕ್ಕೆ ಸಾಗುವ ಮಾರ್ಗದಲ್ಲಿ ಮಾನವಿ ತಾಲೂಕಿನ ಆಂಧ್ರದ ಗಡಿಯ ರಾಜೋಳಿ ಬಂಡಾ ತಿರುವು ಯೋಜನೆ ಅಣೆಕಟ್ಟೆಯಲ್ಲಿ ಉಕ್ಕಿ ಹರಿಯುತ್ತಿದೆ. ಅದು ಕರ್ನಾಟಕದ ಪಾಲಿನ ಪೋಲಾಗುತ್ತಿರುವ ನೀರು ಎಂದು ಬೇರೆ ಹೇಳಬೇಕಿಲ್ಲ.
ವೈಫಲ್ಯ: ಎಡದಂಡೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳ ವೈಫಲ್ಯ ಸಾಕಷ್ಟಿದೆ. ಸದ್ಯ ಎಡದಂಡೆ ಕಾಲುವೆಯ 47ನೇ ಮೈಲ್ನಲ್ಲಿ 11.10 ಅಡಿ ನೀರಿದೆ. ಮೈಲ್ 60ರಲ್ಲಿ 10 ಅಡಿ, ಮೈಲ್ 69ರಲ್ಲಿ 8.25 ಅಡಿ, ಮೈಲ್ 90ರಲ್ಲಿ 6.20 ಅಡಿ ನೀರಿನ ಮಟ್ಟವಿದ್ದರೆ ಮೈಲ್ 104ರಲ್ಲಿ 2 ಅಡಿ ನೀರಿದೆ.
ನೀರಿನ ಅನಗತ್ಯ ಪೋಲು ಮಾಡುವಲ್ಲಿ ಕಾಲುವೆಯ ಮೇಲ್ಭಾಗದವರ ಕೊಡುಗೆಯಿದೆ. ಅದಕ್ಕೆ ಬೆಂಬಲವಾಗಿ ಅಲ್ಲಿನ ರಾಜಕೀಯ ನಾಯಕರೂ ನಿಲ್ಲುತ್ತಿರುವುದು ಮತ್ತೊಂದು ದುರಂತ. ಹಾಗಾಗಿ ಮಾನವಿ ತಾಲೂಕಿನ ಕೊನೆಯ ಭಾಗದಲ್ಲಿ ತಳಕಚ್ಚುತ್ತಿದೆ. ರಾಜಕೀಯ ಪ್ರಭಾವ, ಸಿಬ್ಬಂದಿ ಕೊರತೆ, ರೈತರ ಒತ್ತಡಕ್ಕೆ ಸಿಲುಕಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ನಿಗದಿತ ನೀರಿನ ಮಟ್ಟ ಕಾಯ್ದುಕೊಳ್ಳುವುದರಿಂದ ಜಾರಿಕೊಳ್ಳುತ್ತಿದ್ದಾರೆ.
ನಿರ್ಣಯಕ್ಕಿಲ್ಲ ಬೆಲೆ: ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಜ.1ರಿಂದ 3200 ಕ್ಯುಸೆಕ್ ನೀರು ಹರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಇದುವರೆಗೆ ಈ ನಿರ್ಧಾರ ಜಾರಿಯಾಗಿಲ್ಲ. ಕೇವಲ 2900 ಕ್ಯುಸೆಕ್ ನೀರು ಹೊರಹರಿಸಲಾಗುತ್ತಿದೆ. ಮೇಲ್ಭಾಗದಲ್ಲಿ ಕಾಲುವೆಯುದ್ದಕ್ಕೂ ಎರಡೂ ಬದಿಗೆ ಕೈಗೊಳ್ಳುವ ಅಕ್ರಮ ನೀರಾವರಿಯಿಂದಾಗಿ ಹಾಗೂ ಹಳ್ಳಗಳಿಗೆ ವ್ಯರ್ಥ ನೀರು ಹರಿದು ಹೋಗುವುದರಿಂದ ಕಾಲುವೆಯ ಕಡೆಯ ಭಾಗದ 104ನೇ ಮೈಲ್ನಲ್ಲಿ ನೀರು ತಳಕಚ್ಚಿ ರೈತರನ್ನು ಕಂಗೆಡಿಸಿದೆ.
ಶೀಘ್ರವೇ ಹೋರಾಟಕ್ಕೆ ನಿರ್ಧಾರ: ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ರೈತರ ಹೋರಾಟ ಸಮಿತಿ ಮುಖಂಡ ಹಾಗೂ ಜಿಪಂ ಉಪಾಧ್ಯಕ್ಷ ಕೆ.ಶರಣಪ್ಪ, 'ಕಳೆದೊಂದು ತಿಂಗಳಿನಿಂದ ಕಾಲುವೆಯಿಂದ ನೀರು ದೊರೆಯುತ್ತಿಲ್ಲ. ಹೋರಾಟ ಅನಿವಾರ್ಯವಾಗಿದೆ. ಶೀಘ್ರದಲ್ಲಿಯೇ ರೈತರ ಸಭೆ ಕರೆದು ಹೋರಾಟದ ಬಗ್ಗೆ ನಿರ್ಧರಿಸಲಾಗುತ್ತದೆ' ಎಂದಿದ್ದಾರೆ.
ಒಂದೆಡೆ ಆಂಧ್ರಕ್ಕೆ ತುಂಗಭದ್ರಾ ನೀರು ಭೋರ್ಗರೆಯುತ್ತಾ ಹರಿಯುತ್ತಿದ್ದರೆ ಮತ್ತೊಂದೆಡೆ ಕರ್ನಾಟಕದ ರೈತರಿಗೆ ನೀರಿಲ್ಲದ ಸ್ಥಿತಿ. ಮೊದಲ ಹಂಗಾಮಿನ ಕೊನೆಗೇ ನೀರಿಲ್ಲ. ಹಾಗೆಯೇ ಮುಂದಿನ ಹಂಗಾಮಿನ ಆಲೋಚನೆಯೇ ರೈತರಲ್ಲಿ ನಡುಕ ಹುಟ್ಟಿಸಿದೆ.
-ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

