ರಾಯಚೂರು

ಖಮರುಲ್ ನೆರವಿನ ಹಸ್ತಕ್ಕೆ ಸಂಸದ ಧರಂಸಿಂಗ್ ಕಕ್ಕಾಬಿಕ್ಕಿ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.13
ಇಲ್ಲಿನ ಸುಲ್ತಾನಪುರ ರೇಲ್ವೆ ನಿಲ್ದಾಣ, ಗೂಡ್ಸ್ ಶೆಡ್ ನಿರ್ಮಾಣ ಅಡಿಗಲ್ಲು ಸಮಾರಂಭ ಹಲವು ನಗೆ ಪ್ರಸಂಗಗಳಿಗೆ ಕಾರಣವಾಯ್ತು. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಒಂದು ಗಂಟೆ ವಿಳಂಬವಾಗಿ ವೇದಿಕೆಗೆ ಬಂದಾಗಿನಿಂದ ಆರಂಭವಾದ ನಗುವು ಸಮಾರಂಭ ಮುಗಿಯುವವರೆಗೂ ಮುಂದುವರಿದದ್ದು ವಿಶೇಷ.
ಗಾಡಿ ಲೇಟ್ ಅದರಿ..: ನಿಲ್ದಾಣಕ್ಕೆ ಹೋದವರು, ಅಲ್ಲಿಗೆ ಹೋಗಲು ಸಿದ್ಧರಾದವರು ರೇಲ್ವೆ ಯಾವಾಗದ ಕೇಳ್ರಿ... ಎಂದು ವಿಚಾರಿಸೋದು ಸಾಮಾನ್ಯ. ರೈಲು ನಿಗದಿತ ಅವಧಿಗಿಂತ ವಿಳಂಬವಾಗಿ ಚಲಿಸೋದು ನಿತ್ಯದ ನೋಟ. ಆದರೆ ಸೋಮವಾರದ ಸುಲ್ತಾನಪುರ ನಿಲ್ದಾಣ ಕಟ್ಟಡ ಅಡಿಗಲ್ಲು ಸಮಾರಂಭಕ್ಕೆ ಆಗಮಿಸಬೇಕಿದ್ದ ರೇಲ್ವೆ ಸಚಿವ ಖರ್ಗೆ ಅವರೇ ನಿಗದಿತ ಸಮಯಕ್ಕಿಂತ ಒಂದು ಗಂಟೆ ವಿಳಂಬವಾಗಿ ಬಂದಾಗ ಜನರು 'ಗಾಡಿ ಲೇಟ್...' ಎಂದು ಪರಸ್ಪರ ಲೇವಡಿ ಮಾಡಿ ನಗಾಡಿದರು. ಆಗ ವೇದಿಕೆಗೆ ಬಂದ ಖರ್ಗೆ, ಸಿದ್ಧರಾಮೇಶ್ವರ ಜಯಂತಿಯಲ್ಲಿ ಭಾಗವಹಿಸಲು ಹೋಗಿ ಒಂದು ಗಂಟೆ ವಿಳಂಬವಾಯ್ತು ಎಂದು ತಿಳಿಸಿದರು.
ನೆರವಿಗೆ ಖಮರ್ ಬಂದ್ರು, ಧರಂ ಪರೇಶಾನ್: ತಮ್ಮ ಭಾಷಣದ ಸರದಿ ಬಂದಾಗ ನಿಧಾನವಾಗಿ ಎದ್ದು ಇನ್ನೇನು ಮೈಕಿನ ಬಳಿ ಸಾಗಬೇಕೆಂದು ಮಾಜಿ ಸಿಎಂ ಧರಂಸಿಂಗ್ ಹೆಜ್ಜೆ ಹಾಕುವಷ್ಟರಲ್ಲೇ ತಮ್ಮ ಮಾತು ಮುಗಿಸಿ ಕುಳಿತುಕೊಳ್ಳಬೇಕು ಎಂದು ಸಿದ್ಧವಾಗಿದ್ದ ಸಚಿವ ಖಮರುಲ್ ಇಸ್ಲಾಂ, ತಕ್ಷಣ ಧರಂಸಿಂಗ್ ಅವರತ್ತ ಧಾವಿಸಿ ನೆರವಿನ ಹಸ್ತ ಚಾಚಿದರು.
ತಾವು ಕಲ್ಪಿಸಿಕೊಳ್ಳದ ಈ ಸಂದರ್ಭ ದಿಢೀರನೆ ಇದಿರಾದಾಗ ಧರಂಸಿಂಗ್ ಪರೇಶಾನ್! ಅಷ್ಟೇ ಅಲ್ಲ, ಕ್ಷಣಕಾಲ ಹೆಜ್ಜೆ ಹಾಕದೆ ನಿಂತಲ್ಲೇ ನಿಂತು ಖಮರುಲ್ ಅವರ ಮುಖ ದುರುಗುಟ್ಟಿಕೊಂಡು ನೋಡಿದರು. ಇದನ್ನು ಕಂಡ ಜನತೆ ಗೊಳ್ಳೆಂದು ನಕ್ಕುಬ್ಬಿಟ್ಟರು.
ಆದರಿಲ್ಲಿ ಧರಂ ಅಚ್ಚರಿಗೆ ಖಮರುಲ್ ಇಸ್ಲಾಂ ಹೇಗೆ ನೆರವಿಗೆ ನಿಂತರು ಎಂಬಂಶ ಕಾರಣವಾಗಿರಲಿಲ್ಲ, ಬದಲಾಗಿ ತಮಗಿಂತ ಹೆಚ್ಚು ಆರೋಗ್ಯ ತೊಂದರೆ ಎದುರಿಸುತ್ತಿರುವ ಖಮರುಲ್ ಅವರು ಅದ್ಹೇಗೆ ತಮ್ಮ ಕೈ ಹಿಡಿಯಲು ಮುಂದಾದರೋ... ಎಂದೂ ಅವಾಕ್ಕಾಗಿರಲು ಸಾಕು.
ಎಲ್ರೂ ಟೀಕಾಕಾರರೇ ಆದ್ರೆ ಹ್ಯಾಂಗ್ರಿ?: ತಾವು ರೇಲ್ವೆ ಸಚಿವರಾದ ನಂತರ ತುಂಬ ಮುತುವರ್ಜಿ ತೋರಿ ರೇಲ್ವೆ ಸೌಕರ್ಯ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದರೂ ಯಾಕೆ ಕೆಲವರು ಸಲ್ಲದ ಮಾತುಗಳನ್ನಾಡುತ್ತಾರೋ.. ಎಂದ ಖರ್ಗೆ, ನಾನು ಇಡೀ ರಾಜ್ಯದ ರೇಲ್ವೆ ಸೌಕರ್ಯ ಪ್ರಗತಿಗೆ ಬಡಿದಾಡುತ್ತಿದ್ದರೂ ಅನೇಕರು ಖರ್ಗೆ ಕೇವಲ ಗುಲ್ಬರ್ಗ, ಹೈ- ಕ ಭಾಗದ ರೇಲ್ವೆ ಕೆಲಸಗಳನ್ನೇ ಮಾಡುತ್ತಿದ್ದಾರೆಂದು ಮಾತನಾಡುತ್ತಿದ್ದಾರೆ. ಇದು ತುಂಬ ನೋವು ನೀಡಿದ ಸಂಗತಿ. ಯಾಕೆ ಹೀಗೆ, ಎಲ್ಲರೂ ಆಗುತ್ತಿರುವ ಕೆಲಸಗಳ ಬಗ್ಗೆ ಉತ್ತಮ ಮಾತನಾಡದೆ ಯಾಕೆ ಹೀಗೆ ಉತ್ಸಾಹ ಕುಂದಿಸುವ ಮಾತು ಹೇಳುತ್ತಾರೋ.. ಎಲ್ಲರೂ ಟೀಕಾಕಾರರಾದರೆ ಹ್ಯಾಗೆ ಎಂದು ಪ್ರಶ್ನಿಸಿದರು.
ಡಾ. ಜವಳಿ ಮ್ಯಾಲೆ ಬರ್ರೀ..: ಖರ್ಗೆ ರೇಲ್ವೆ ಸಚಿವರಾದ ನಂತರ ಹತ್ತಾರು ಸಮಾರಂಭಗಳು ಭವ್ಯ ವೇದಿಕೆಗಳಲ್ಲೇ ಆಗಿವೆ, ಆಗುತ್ತಲೂ ಇವೆ. ಬಹುತೇಕ ಸಂದರ್ಭಗಳಲ್ಲಿ ಇವರ ಭವ್ಯ ವೇದಿಕೆ ಹಿಗ್ಗಿದ್ದೇ ಅಧಿಕ. ಆಹ್ವಾನ ಪತ್ರದಲ್ಲಿ ಹೆಸರಿಲ್ಲದವರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖ ಕಾರ್ಯಕರ್ತರೆಲ್ಲರಿಗೂ ಖರ್ಗೆ ಜೊತೆ ವೇದಿಕೆ ಹಂಚಿಕೊಳ್ಳುವ ಭಾಗ್ಯ ಇದೀಗ ಸುಲಭವಾಗುತ್ತಿದೆ.
ಸುಲ್ತಾನಪುರದಲ್ಲೂ ಹೀಗೆ ಆಯ್ತು. ಪ್ರೋಟೋಕಾಲ್ನಂತೆ ಸ್ಥಳೀಯ ಶಾಸಕರು, ಎಂಎಲ್ಸಿಗಳು, ರಾಜ್ಯಸಬಾ ಸದಸ್ಯರು ಹೀಗೆ ಎಲ್ಲರನ್ನು ಗಮನದಲ್ಲಿಟ್ಟುಕೊಂಡು ಭವ್ಯ ವೇದಿಕೆ ಹಾಕಲಾಗಿತ್ತು. ಅದರಂತೆಯೇ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆಹ್ವಾನಿತರಲ್ಲಿ ಅನೇಕ ಶಾಸಕರು ಬಂದಿರಲಿಲ್ಲ. ಸಭಿಕರ ಸಾಲಿನಲ್ಲಿ ಮಾಜಿ ಎಂಪಿ ಡಾ. ಬಿ.ಜಿ. ಜವಳಿ ಕುಳಿತಿದ್ದರು. ಖರ್ಗೆಯವರೇ ಸನ್ನೆ ಮಾಡಿ ಅವರನ್ನು ವೇದಿಕೆಗೆ ಆಹ್ವಾನಿಸಿದರು.
ಅದಾಗಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಕೆಲವು ಕಾರ್ಯಕರ್ತರು ವೇದಿಕೆಯಲ್ಲಿ ಖಾಲಿ ಇದ್ದಂತಹ ಕುರ್ಚಿಗಳನ್ನು ಅಲಂಕರಿಸಿಯಾಗಿತ್ತು. ಖರ್ಗೆ ಅವರ ಆಹ್ವಾನಕ್ಕೆ ಎದಿರಾಡದೆ ಡಾ. ಜವಳಿ ವೇದಿಕೆ ಹತ್ತಿದರೆನ್ನಿ.
ಧರಂಸಿಂಗ್ ತಮ್ಮ ಮಾತುಗಳಲ್ಲಿ ಡಾ. ಜವಳಿ ಅದ್ಯಾಕೋ ವೇದಿಕೆ ಕೆಳಗಿದ್ದಾರೆ ಎಂದು ಹೇಳುತ್ತಿದ್ದಂತೆಯೇ, ಸಭಿಕರೇ ಅವರು ಅದಾಗಲೇ ವೇದಿಕೆ ಏರಿದ್ದಾಯ್ತು... ಎಂದು ಹೇಳುವ ಮೂಲಕ ಸಭೆಯಲ್ಲಿ ನಗೆಯ ಅಲೆಗೆ ಕಾರಣರಾದರು. ಖರ್ಗೆಯವರ ಸಮಾರಂಭದಲ್ಲಿ ಆಹ್ವಾನಿತರಿಗಿಂತ ಇತರರೇ ವೇದಿಕೆಯಲ್ಲಿ ಹೆಚ್ಚು ಕಾಣಿಸುವುದು ಎಂದು ಅನೇಕರು ಹೇಳಿಕೊಂಡು ಮುಸಿಮುಸಿ ನಕ್ಕರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.