17ರಿಂದ 44ನೇ ಜ್ಞಾನಸತ್ರ ಕಾರ್ಯಕ್ರಮ
ಕ.ಪ್ರ. ವಾರ್ತೆ ರಾಯಚೂರು ಜ.13
ನಗರದ ಕೋಟೆಯ ಶ್ರೀಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಜ.17ರಿಂದ 44ನೇ ವರ್ಷದ ಗೋಪಾಲದಾಸರ, ಪುರಂದರ ದಾಸರ ಪುಣ್ಯತಿಥಿ, ಮಧ್ವನವರಾತ್ರಿ ಉತ್ಸವ ಅಂಗವಾಗಿ 26 ದಿನಗಳ ಮಹಾನ್ ಜ್ಞಾನಸತ್ರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗುರುರಾಜ ಭಜನಾ ಮಂಡಳಿ ಸಂಚಾಲಕ ಮುರಳೀಧರ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶ್ರೀ ಗುರುರಾಜ ಭಜನಾ ಮಂಡಳಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಗುರುರಾಜ ಭಜನಾ ಮಂಡಳಿ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವು ಜ. 17ರಿಂದ ಫೆ.11ರ ವರೆಗೆ ನಡೆಯಲಿದೆ ಎಂದರು.
ಸಂಜೆ 7ರಿಂದ ಪ್ರವಚನ: ಪ್ರಸಕ್ತ ವರ್ಷದ ಮಹಾನ್ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ವಿವಿಧ ನಾಲ್ಕು ಮಠಗಳ ಮಠಾಧೀಶರು ಪಾಲ್ಗೊಳ್ಳುತ್ತಿರುವುದು ವಿಶೇಷ. ಪ್ರತಿ ದಿನ ಸಂಜೆ 7ಕ್ಕೆ ಪಂಡಿತರಿಂದ ವಿವಿಧ ವಿಷಯಗಳ ಕುರಿತು ಧಾರ್ಮಿಕ ಪ್ರವಚನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆ: ಜ.17ರಂದು ಸಂಜೆ 7ಕ್ಕೆ ನಗರದ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ಮಹಾನ್ ಜ್ಞಾನಸತ್ರವನ್ನು ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಸುಯತೀಂದ್ರತೀರ್ಥರು ಹಾಗೂ ಅವರ ಉತ್ತರಾಧಿಕಾರಿ ಸುಬುಧೇಂದ್ರತೀರ್ಥರು ಉದ್ಘಾಟಿಸಲಿದ್ದಾರೆಂದು ಹೇಳಿದರು.
ರಾಜ್ಯ ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ಡಾ. ಮುದ್ದುಮೋಹನ್ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜ.18, 19ರಂದು ಧಾರವಾಡದ ಗುಡೇಬಲ್ಲೂರು ವೆಂಕಟನರಸಿಂಹಾಚಾರ್ಯ ಅವರಿಂದ ಗಂಗಾಲಹರಿ ವಿಷಯ ಕುರಿತು ಪ್ರವಚನ ನಡೆಯಲಿದೆ. ಜ.20ರಿಂದ 24ರವರೆಗೆ ಉಡುಪಿಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರಿಂದ ತೀರ್ಥಪ್ರಭಂದ ವಿಷಯ ಕುರಿತು ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
24ರಂದು ಮೆರವಣಿಗೆ: ಜ.24ರಂದು ಶ್ರೀಗೋಪಾಲದಾಸರ ಪುಣ್ಯತಿಥಿ ಅಂಗವಾಗಿ ಬೆಳಗ್ಗೆ ಕೊಟೆಯಲ್ಲಿ ದಾಸರ ಭಾವಚಿತ್ರದ ಮೆರವಣಿಗೆ, ಧನ್ವಂತರಿ ಹೋಮ, ಪೂಜ್ಯರಿಂದ ಪ್ರವಚನ, ಸಂಸ್ಥಾನ ಪೂಜೆ ನಡೆಯಲಿದೆ. ಸಂಜೆ 7ಕ್ಕೆ ತೀರ್ಥಪ್ರಭಂದ ಪ್ರವಚನದ ಮಂಗಳ ಮಹೋತ್ಸವ ಜರುಗಲಿದೆ ಎಂದು ಹೇಳಿದರು.
ಜ.25ರಂದು ಸಂಜೆ 7ಕ್ಕೆ ಬೆಂಗಳೂರಿನ ದೀಪಿಕಾ ಪಾಂಡುರಂಗಿ ಅವರಿಂದ ದಾಸವಾಣಿ, ಜ.26ರಿಂದ 30ರವರೆಗೆ ಪಂಚಮುಖಿ ಪವಮಾನಾಚಾರ್ಯ ಅವರಿಂದ ಮಹಾಭಾರತದಲ್ಲಿನ ಮುಖ್ಯ ಪಾತ್ರಗಳ ಕುರಿತ ಪ್ರವಚನ, ಜ. 30ರಂದು ಪುರಂದರದಾಸರ ಪುಣ್ಯತಿಥಿ ಅಂಗವಾಗಿ ಬೆಳಗ್ಗೆ ಭಾವಚಿತ್ರದ ಮೆರವಣಿಗೆ, ರಥೋತ್ಸವ, ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಜ.30ರಂದು ಉಡುಪಿ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರಿಂದ ಸಂಸ್ಥಾನ ಪೂಜೆ, ಅನುಗ್ರಹ ಸಂದೇಶ, ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಲಾಗುತ್ತದೆ. ಜ.31ರಂದು ಸಂಜೆ 7ಕ್ಕೆ ರಮೇಶ ಕುಲಕರ್ಣಿ ಅವರಿಂದ ದಾಸವಾಣಿ, ಫೆ.1ರಿಂದ 8ರವರೆಗೆ ರಾತ್ರಿ 8ಕ್ಕೆ ಉತ್ತರಾದಿಮಠದ ಪೀಠಾಧಿಪತಿ ಶ್ರೀಸತ್ಯಾತ್ಮತೀರ್ಥರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಕುರಿತು ಉಪನ್ಯಾಸ ನಡೆಯಲಿದೆ ಎಂದು ಹೇಳಿದರು.
ಕೃಷ್ಣಚಾರಿತ್ರ್ಯ ಮಂಜರಿ ಪ್ರವಚನ: ಅದೇ ರೀತಿ ಫೆ.1ರಿಂದ 3ರವರೆಗೆ ಪ್ರತಿ ದಿನ ಸಂಜೆ 7ಕ್ಕೆ ಕೃಷ್ಣ ಚಾರಿತ್ರ್ಯ ಮಂಜರಿ ವಿಷಯ ಕುರಿತು ಬೆಂಗಳೂರಿನ ಆನಂದ ತೀರ್ಥಾಚಾರ್ಯ ನಾಗಸಂಪಿಗೆ ಅವರಿಂದ ಪ್ರವಚನ, ಫೆ.4ರಿಂದ 5ರವರೆಗೆ ಹುಬ್ಬಳ್ಳಿಯ ಪ್ರದ್ಯುಮ್ನಾಚಾರ್ಯ ಅವರಿಂದ ಆಚಾರ್ಯ ಮಧ್ವರ ಕುರಿತು ಪ್ರವಚನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಫೆ.6ರಿಂದ 8ರವರೆಗೆ ಶ್ರೀಮಧ್ವನಾಮ ಕುರಿತು ಶ್ರೀಕಾಂತಾಚಾರ್ಯ ಚಿಕ್ಕೆರೂರ್ ಅವರಿಂದ ಪ್ರವಚನ ನಡೆಯಲಿದ್ದು, ಮಧ್ವನವಮಿ ಅಂಗವಾಗಿ ಫೆ.8ರಂದು ಬೆಳಗ್ಗೆ ಮಧ್ವಾಚಾರ್ಯರ ಭಾವಚಿತ್ರದ ಮೆರವಣಿಗೆ, ರಥೋತ್ಸವ, ಪವಮಾನಹೋಮ ಜರುಗಲಿದೆ. ವಿವಿಧ ಪಂಡಿತರಿಂದ ಈ ವೇಳೆ ಉತ್ತರಾದಿಮಠಾಧೀಶರ ಸಾನ್ನಿಧ್ಯದಲ್ಲಿ ವಿದ್ವತ್ ಗೋಷ್ಠಿ, ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಲಾಗುತ್ತದೆ ಎಂದರು.
ಫೆ.9ರಂದು ಸಂಜೆ 7ಕ್ಕೆ ನಗರದ ಕೋಟೆಯ ಶ್ರೀಕೃಷ್ಣ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ದಾಸವಾಣಿ, 10ರಂದು ಸಂಜೆ 7ಕ್ಕೆ ಖ್ಯಾತ ಗಾಯಕ ಜಯತೀರ್ಥ ಮೇವುಂಡಿ ಅವರಿಂದ ದಾಸವಾಣಿ, ರಫಿಖಾನ್ ಸಿತಾರವಾದನ, 11ರಂದು ಶೇಷಗಿರಿದಾಸ ರಾಯಚೂರು ಅವರಿಂದ ದಾಸವಾಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭ ಭಜನಾ ಮಂಡಳಿಯ ಪ್ರಮುಖರಾದ ಗುರುರಾಜರಾವ್, ನರಸಿಂಗರಾವ್, ಅಪ್ಪಾರಾವ್, ನರಸಿಂಹಾಚಾರ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

