'ಡಬ್ಬಿಂಗ್ ಹಾವಳಿಗೆ ಒಮ್ಮತ ಅವಶ್ಯ'
ರಾಯಚೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ಎದ್ದಿರುವ ಡಬ್ಬಿಂಗ್ ವಿವಾದಕ್ಕೆ ಸಂಬಂಧಿಸಿ ಚಿತ್ರರಂಗದಲ್ಲಿರುವ ಎಲ್ಲರೂ ಸೇರಿ ಒಮ್ಮತದ ನಿರ್ಣಯಕ್ಕೆ ಬರುವ ಅವಶ್ಯಕತೆಯಿದೆ. ಚಿತ್ರರಂಗ ಕೈಗೊಳ್ಳುವ ನಿರ್ಧಾರವು ಸರ್ವ ಸಮ್ಮತವಾಗಿದ್ದಲ್ಲಿ ಮಾತ್ರ ಅಂಥ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದು ಹಿರಿಯ ನಟಿ ಲೀಲಾವತಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರು, ತಂತ್ರಜ್ಞರು, ಹೆಸರಾಂತ ನಟರಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಚಿತ್ರಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಅವಶ್ಯಕತೆಯೇನಿಲ್ಲ. ಉತ್ತಮ ಕಥೆಗಳಿರುವ ಚಿತ್ರಗಳನ್ನು ತಯಾರಿಸಿದರೆ ಕನ್ನಡಿಗರು ನಿಶ್ಚಿತವಾಗಿಯೂ ಪ್ರೋತ್ಸಾಹಿಸುತ್ತಾರೆಂದು ಹೇಳಿದರು.
ಸಂದಿಗ್ಧ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ: ತಾವು ಮತ್ತು ತಮ್ಮ ಪುತ್ರ ವಿನೋದರಾಜ್ ಅವರು ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಉಳಿದಿದ್ದು, ಚಿತ್ರರಂಗದಲ್ಲಿನ ವಿದ್ಯಮಾನಗಳ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾಗಿ ತಿಳಿಸಿದ ಅವರು, ಡಾ. ರಾಜ್ಕುಮಾರರಂಥ ಮಹಾನ್ ನಟರಿದ್ದ ಕಾಲದಲ್ಲಿ ಚಿತ್ರರಂಗದ ಹಿರಿಯ ನಟರಿಗೆ ಗೌರವದಿಂದ ಕಾಣಲಾಗುತ್ತಿತ್ತು ಎಂದು ಹೇಳಿದರು.
ಪರಭಾಷೆ ಚಿತ್ರಗಳ ತಯಾರಿಕೆಗೆ ಅಲ್ಲಿನ ನಿರ್ಮಾಪಕರು ಕೋಟ್ಯಂತರ ರು. ಸುರಿಯುತ್ತಾರೆ. ನಮ್ಮಲ್ಲಿ ಮಾರುಕಟ್ಟೆ ವ್ಯಾಪ್ತಿ ಚಿಕ್ಕದಾಗಿದೆ. ಅಷ್ಟೊಂದು ಹಣ ಸುರಿದು ಚಿತ್ರ ತಯಾರಿಸುವುದು ಕಷ್ಟವಾಗುತ್ತದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗ ಸಿಲುಕಿದೆ ಎಂದು ಹೇಳಿದರು.
ಸರ್ಕಾರ ನಿರ್ಧರಿಸಲಿ: ಕನ್ನಡಿಗರಿಗೆ ಉತ್ತರಾಖಂಡ್ನ ಹರಿದ್ವಾರದಲ್ಲಿ ವಸತಿಗೆ ಅವಕಾಶ ನೀಡದಂತೆ ಮಾಡಿದ ಬಿಡದಿಯ ನಿತ್ಯಾನಂದನ ವರ್ತನೆಗೆ ಪ್ರತಿಕ್ರಿಯಿಸಿದ ಅವರು, ಹರಿದ್ವಾರ ಎಲ್ಲರ ಸ್ವತ್ತು. ಕನ್ನಡಿಗರಿಗೆ ಜಾಗ ನೀಡದಂತೆ ಹೇಳಲು ನಿತ್ಯಾನಂದಗೆ ಹಕ್ಕಿಲ್ಲ. ಕನ್ನಡಿಗರು ನಿತ್ಯಾನಂದನಂಥ ಕನ್ನಡ ವಿರೋಧಿಗಳಿಗೆ ತಕ್ಕಪಾಠ ಕಲಿಸಲಿದ್ದಾರೆಂದು ಹೇಳಿದರು.
ಹರಿದ್ವಾರದಂಥ ಪವಿತ್ರ ಧಾರ್ಮಿಕ ಸ್ಥಳಕ್ಕೆ ಕಾಲಿಡುವ ಮುನ್ನ ನಿತ್ಯಾನಂದನಂಥವರು ಮೊದಲು ಅಲ್ಲಿಗೆ ಅಂಥವರು ಹೋಗಬೇಕೇ ಎಂಬ ವಿಷಯದ ಬಗ್ಗೆ ಆಲೋಚಿಸಬೇಕಿದೆಯೇ ವಿನಾ ಕನ್ನಡಿಗರಿಗೆ ಅಲ್ಲಿ ತೊಂದರೆಯಾಗುವಂತೆ ಮಾಡುವುದಲ್ಲ ಎಂದ ಅವರು, ನಿತ್ಯಾನಂದನನ್ನು ರಾಜ್ಯದಲ್ಲಿಯೇ ಇರಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ಸರ್ಕಾರ ನಿರ್ಧರಿಸಬೇಕಿದೆ ಎಂದು ತಿಳಿಸಿದರು.
ಕಂಬನಿ: ಈ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಖ್ಯಾತ ಹಿರಿಯ ನಟಿ ಅಂಜಲಿ ದೇವಿ ಅವರ ನಿಧನದ ಸುದ್ದಿ ತಿಳಿದು ಕಂಬನಿ ಮಿಡಿದು ಅವರೊಬ್ಬ ಹೆಸರಾಂತ ನಟಿಯಾಗಿದ್ದು, ಸೀತಾದೇವಿ ಪಾತ್ರದಲ್ಲಿ ಮನೋಜ್ಞ ಅಭಿಯನ ನೀಡಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಟ ವಿನೋದರಾಜ್, ಕುರುಬ ಸಮಾಜದ ಪ್ರಮುಖ ಮಲ್ಲಿಕಾರ್ಜುನ ಏಗನೂರು ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

