ರಾಯಚೂರು

ದನಗಳು ಸಾಯುತ್ತಿದ್ದರೂ ಚಿಕಿತ್ಸೆಯತ್ತ ಗಮನ ಹರಿಸದ ಸಿಬ್ಬಂದಿ: ಆರೋಪ

Published On :

ಕ.ಪ್ರ. ವಾರ್ತೆ   ರಾಯಚೂರು   ಜ.17
ಮಲಿಯಾಬಾದ್‌ನ ಗೋಶಾಲೆಯಲ್ಲಿ ದನಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಅವುಗಳ ಸಾವಿಗೆ ಮೇವು, ನೀರು ನೀಡದಿರುವುದೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಗೋಶಾಲೆಯ ಆಡಳಿತದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜಿಲ್ಲಾ ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ಒತ್ತಾಯಿಸಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದನಕರುಗಳು ಆಹಾರ ಸೇವಿಸದೇ ಸಾವನ್ನಪ್ಪಿವೆ ಎಂದು ಗೋಶಾಲೆಯ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಅವುಗಳು ಸೂಕ್ತ ಪಾಲನೆಯ ಕೊರತೆಯಿಂದಾಗಿಯೇ ಸಾವನ್ನಪ್ಪಿವೆ ಎಂದು ಆರೋಪಿಸಿದರು.
ಮಲಿಯಾಬಾದನಲ್ಲಿರುವ ಸರ್ಕಾರಿ ಗೋಮಾಳ ಜಾಗದಲ್ಲಿ ಗೋಶಾಲೆ ನಿರ್ವಹಿಸಲಾಗುತ್ತಿದೆ. ನಗರದಲ್ಲಿನ ಬಿಡಾಡಿ ದನಗಳನ್ನು ನಗರಸಭೆಯು ಈಚೆಗೆ ಕಾರ್ಯಾಚರಣೆ ನಡೆಸಿ ಅವುಗಳನ್ನು ಕೊಂಡೊಯ್ದು ಗೋಶಾಲೆಯಲ್ಲಿ ಬಿಟ್ಟಿದ್ದು, ಕಳೆದೊಂದು ತಿಂಗಳಿನಿಂದ ದನಗಳು ಸಾಯುತ್ತಿದ್ದರೂ, ಗೋಶಾಲೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿದರು.
ಅನುಮಾನ: ಗೋಶಾಲೆಯ ಸಿಬ್ಬಂದಿಗಳು ಸಾವಿಗೀಡಾದ ದನಗಳು ಮೇವು ತಿನ್ನುತ್ತಿರಲಿಲ್ಲ ಎಂದು ಹೇಳಿದ್ದು, ಅವುಗಳ ಸಾವು ಸಂಭವಿಸಿದರೂ ಪಶುವೈದ್ಯರಿಗೆ ಕರೆತರುವ ಇಲ್ಲವೇ ನಗರಸಭೆ ಆಡಳಿತದ ಗಮನಕ್ಕೆ ತರುವ ಕಾರ್ಯ ಮಾಡಿಲ್ಲ ಎಂಬುದು ಅನುಮಾನಕ್ಕೆ ಎಡೆ ಮಾಡಿದೆ ಎಂದು ದೂರಿದರು.
ನಗರಸಭೆ ಆಡಳಿತ ಸಹ ಈ ವಿಚಾರದಲ್ಲಿ ದಿವ್ಯ ಅಸಡ್ಡೆ ಪ್ರದರ್ಶಿಸಿದ್ದು, ಬಿಡಾಡಿ ದನಗಳನ್ನು ಗೋಶಾಲೆಯಲ್ಲಿ ಬಿಟ್ಟ ನಂತರ ಅವುಗಳ ಪರಿಸ್ಥಿತಿ ಅರಿಯುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು. ಗೋಶಾಲೆಯ ಆಡಳಿತವನ್ನು ವಿಚಾರಿಸದೇ ಕೈಚೆಲ್ಲಿದ್ದು, ದನಗಳ ಸಾವಿನ ನಂತರದಲ್ಲಿ ಪಶು ವೈದ್ಯರು ಗೋಶಾಲೆಗೆ ಭೇಟಿ ನೀಡಿ ಪರೀಕ್ಷಿಸಿದಾಗ ಕೆಲ ದನಗಳು ಆಹಾರ, ನೀರಿನ ಕೊರತೆಯಿಂದ ಸಾವನ್ನಪ್ಪಿದ್ದು ಪತ್ತೆಯಾಗಿದೆ ಎಂದು ಹೇಳಿದರು.
ನಿರ್ಲಕ್ಷ್ಯ: ಗೋಶಾಲೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಗೋಶಾಲೆ ಆಡಳಿತ ಹಾಗೂ ನಗರಸಭೆ ವಿರುದ್ಧ ಜಿಲ್ಲಾಧಿಕಾರಿ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಗೋಶಾಲೆ ಮುಚ್ಚಿಸಬೇಕು. ತಪ್ಪಿದಲ್ಲಿ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ನಗರಸಭೆ ಸದಸ್ಯರಾದ ನರಸಪ್ಪ ಎಕ್ಲಾಸಪುರ, ಆಂಜಿನೇಯ ಎಕ್ಲಾಸಪುರ, ತಿಮ್ಮಯ್ಯ, ರಾಮಚಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.