ಶೈತ್ಯಾಗಾರದ ಮೇಲೆ 'ಸಿಸಿ' ಕಣ್ಣು
ಶಶಿಧರ ಮೇಟಿ
ಕ.ಪ್ರ. ವಾರ್ತೆ ಬಳ್ಳಾರಿ ಜ.18
ರೈತರು ಶೈತ್ಯಾಗಾರಗಳಲ್ಲಿ ಸಂಗ್ರಹಿಸುವ ದವಸ, ಧಾನ್ಯಗಳಿಗೆ ಬೆಂಕಿ ಬೀಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೆ ಪ್ರಥಮ ಬಾರಿಗೆ ಬಳ್ಳಾರಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಅಗ್ನಿಶಾಮಕ ಪ್ರಾದೇಶಿಕ ಇಲಾಖೆ ಮುಂದಾಗಿದೆ.
ಇದರಿಂದಾಗಿ ಅಗ್ನಿ ಆಕಸ್ಮಿಕದ ನೈಜ ಕಾರಣ ಹಾಗೂ ಹಾನಿಯಾದ ಪ್ರಮಾಣವನ್ನು ಕಂಡುಹಿಡಿಯಲು ಸಹಕಾರಿಯಗಲಿದೆ. ಏಳೆಂಟು ತಿಂಗಳ ಅವಧಿಯಲ್ಲಿ ಬಳ್ಳಾರಿಯಲ್ಲಿ ಎರಡು ಶೈತ್ಯಾಗಾರಗಳಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡು ಕೋಟ್ಯಂತರ ರು. ಮೌಲ್ಯದ ರೈತರ ಧಾನ್ಯಗಳು ಸುಟ್ಟು ಕರಕಲಾಗಿವೆ. ಜೂ. 2, 2013ರಲ್ಲಿ ಬಳ್ಳಾರಿಯ ಕೈಗಾರಿಕಾ ಪ್ರದೇಶದ ಶ್ರೀ ಸಾಯಿ ಬಾಲಾಜಿ ಶೈತ್ಯಾಗಾರದಲ್ಲಿ ಬೆಂಕಿ ಹೊತ್ತಿಕೊಂಡು ಕೋಟಿ ರು. ಹಾನಿಯಾಗಿತ್ತು. ಈ ಘಟನೆ ಮಾಸುವ ಮುನ್ನವೆ 3-4 ದಿನಗಳ ಹಿಂದೆ ಕೈಗಾರಿಕಾ ಪ್ರದೇಶದಲ್ಲಿನ ಶ್ರೀದೇವಿ ಶೈತ್ಯಾಗಾರದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿತ್ತು.
ಈ ಹಿಂದೆಯೆ ಸೂಚಿಸಿದ್ದರು: ಮೇಲಿಂದ ಮೇಲೆ ಬೆಂಕಿ ಕಾಣಿಸಿಕೊಳ್ಳುತ್ತಿರುವ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಅಗ್ನಿಶಾಮಕ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಬಳ್ಳಾರಿಯ 11 ಶೈತ್ಯಾಗಾರಗಳಿಗೆ ನೋಟಿಸ್ ನೀಡಿ, ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೂ ಬಹುತೇಕ ಸ್ಟೋರೇಜ್ಗಳು ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬುದನ್ನು ಅಗ್ನಿಶಾಮಕ ದಳದ ಅಧಿಕಾರಿಗಳೆ ಒಪ್ಪಿಕೊಂಡಿದ್ದರು. ಇದರಿಂದಾಗಿ ಎಲ್ಲ ಶೈತ್ಯಾಗಾರಗಳಲ್ಲಿ ಅವಘಡ ತಡೆಯಲು ಹಾಗೂ ಅಗ್ನಿ ಅವಘಡಗಳಿಗೆ ನೈಜ ಕಾರಣ ಕಂಡುಹಿಡಿಯುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
3 ಜಿಲ್ಲೆಗಳಲ್ಲಿ 20 ಶೈತ್ಯಾಗಾರ: ಬಳ್ಳಾರಿ ಅಗ್ನಿಶಾಮಕ ದಳದ ಪ್ರಾದೇಶಿಕ ಕಚೇರಿ ಹೊಂದಿದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು ಕಚೇರಿಯ ವ್ಯಾಪ್ತಿಯಲ್ಲಿ ಬರುತ್ತಿವೆ. 3 ಜಿಲ್ಲೆಗಳಲ್ಲಿ ಸುಮಾರು 20 ಶೈತ್ಯಾಗಾರ ಇವೆ. ಇವುಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆ ನಡೆಸಿದ್ದು, ಶನಿವಾರ ಸಂಜೆ ಬಳ್ಳಾರಿಯ ವಿಘ್ನೇಶ್ವರ ಶೈತ್ಯಾಗಾರದಲ್ಲಿ ಪ್ರಾಯೋಗಿಕವಾಗಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲ ಶೈತ್ಯಾಗಾರಗಳಿಗೆ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆ ಮುಂದಾಗಿದೆ. ಇದರಿಂದಾಗಿ ಶೈತ್ಯಾಗಾರಗಳ ಮೇಲೆ ಸಾಕಷ್ಟು ಹಿಡಿತ ಸಾಧಿಸಲು ಹಾನಿಯ ಪ್ರಮಾಣ ಲೆಕ್ಕ ಹಾಕುವ ಉದ್ದೇಶದಿಂದ ಇಂತಹ ಕಾರ್ಯಕ್ಕೆ ಮುಂದಾಗಿದೆ. ಜ.21ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶೈತ್ಯಾಗಾರಗಳ ಮಾಲೀಕರ ಸಭೆ ಕರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧೂಳುಮುಕ್ತ ಪಟ್ಟಣ ನಿರ್ಮಾಣಕ್ಕೆ ಆಗ್ರಹ
ಮುದಗಲ್: ಪಟ್ಟಣದಲ್ಲಿನ ಟಾರ್ ರಸ್ತೆಗಳು ಮಾಯವಾಗಿ ಮಣ್ಣು ಮಿಶ್ರಿತಗೊಂಡ ರಸ್ತೆಗಳಿಂದ ಧೂಳಿನ ಪ್ರಮಾಣ ಹೆಚ್ಚಾಗಿದೆ. ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ತೊಂದರೆಯಾಗಿರುವುದನ್ನು ವಿರೋಧಿಸಿ ಪಟ್ಟಣದ ವ್ಯಾಪಾರಸ್ಥರು ಪ.ಪಂ. ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪೊಲೀಸ್ ಠಾಣೆಯಿಂದ ಮಸ್ಕಿ ಕ್ರಾಸ್ಗೆ ಸಂಪರ್ಕ ಕಲ್ಪಿಸುವ ರಸ್ತೆ, ಚಾಚಡಿಯಿಂದ ಹಳೆಪೇಟೆಗೆ ಹೋಗುವ ರಸ್ತೆ, ಗಣೇಶ ಕೆಫೆ ರಸ್ತೆಗಳು ಸೇರಿದಂತೆ ಪಟ್ಟಣದ ಹಲವು ರಸ್ತೆಗಳಲ್ಲಿ ಡಾಂಬರ್ ಮಾಯವಾಗಿ ಮಣ್ಣು ತುಂಬಿಹೋಗಿವೆ. ದಿನಕ್ಕೆ ಎರಡು ಬಾರಿ ರಸ್ತೆಗೆ ಟ್ಯಾಂಕರ್ ನೀರು ಹಾಕಿಸಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ಪ್ರತಿಭಟನಾಕಾರರು ತಾಕೀತು ಮಾಡಿದರು. ಇಲ್ಲವಾದಲ್ಲಿ ಪ.ಪಂ. ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ವ್ಯಾಪಾರಸ್ಥರಾದ ಮಲ್ಲಯ್ಯ ಜೀಡಿ, ಶ್ರಿಧರ ಜೀಡಿ, ಸಂಜೀವ್ ಸೇಠ್, ವೀರಯ್ಯ ಶೆಟ್ಟಿ, ರಜ್ಜಬ್ ಅಲಿ, ಕರಿಯಪ್ಪ, ವಿಶಾಲ್ ಜೈನ್, ವೆಂಕಟೇಶ ಆಲೂರ್, ನಾರಾಯಣ ಎಚ್ಚರಿಸಿದ್ದಾರೆ. ಮನವಿ ಸ್ವೀಕರಿಸಿದ ಪ.ಪಂ. ಮುಖ್ಯಾಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಈಗಾಗಲೇ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಒಂದು ತಿಂಗಳಲ್ಲೇ ರಸ್ತೆಕಾಮಗಾರಿ ಆರಂಭವಾಗಲಿದೆ. ಸದ್ಯಕ್ಕೆ ಬೆಳಗಿನ ಜಾವ ಮತ್ತು ಸಂಜೆ ಟ್ಯಾಂಕರ್ ನೀರು ಹಾಕಲು ಸೂಚಿಸುವುದಾಗಿ ಪ್ರತಿಭಟನಾಕಾರರಿಗೆ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

