ಸುದ್ದಿ ಸಂಕ್ಷೇಪ
ಅಧಿಕಾರಿಗಳ ಗುಟ್ಟು ಆನ್ಲೈನ್ನಲ್ಲಿ ರಟ್ಟು
ಆಡಳಿತದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತರುವುದಾಗಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಂತೆ ಶೇ.50ಕ್ಕಿಂತ ಹೆಚ್ಚು ಕಡತಗಳು ಬಾಕಿ ಇರುವ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲು ಕೂಡ ನಿರ್ಧರಿಸಿದೆ. ಅದರಂತೆ ಕಾರ್ಯದರ್ಶಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಕಡತಗಳ ತ್ವರಿತ ವಿಲೇವಾರಿಗೆ ನಿರ್ದೇಶನ ಹೊರಡಿಸಿದ್ದಾರೆ. ಇದುವರೆಗೆ ಬೆಚ್ಚಗೆ ಕೂತು ಈಗ ಇದ್ದಕ್ಕಿದ್ದಂತೆ ಎದ್ದು ಕೆಲಸ ಮಾಡುವುದು ಕೆಲವರಿಗೆ ಕಷ್ಟವಾಗದೇ ಇರುತ್ತದೆಯೇ? ಆದರೂ ಕೆಲಸ ಆಗಿದೆ ಎಂದು ತೋರಿಸಲೇ ಬೇಕು. ಅದಕ್ಕೆ ಕೆಲವು ಜಿಲ್ಲೆಗಳ ಅಧಿಕಾರಿಗಳು ಏನೇನೋ ದಾರಿ ಹುಡುಕುತ್ತಿದ್ದಾರೆ. ಮೊನ್ನೆ ನಡೆದ ಅಧಿಕಾರಿಗಳ ಸಭೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಡುಕೊಂಡಿರುವ ಹೊಸ ದಾರಿಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಪತ್ತೆ ಮಾಡಿದರು. ಕಡತ ವಿಲೇವಾರಿ ಕುರಿತು ಅಧಿಕಾರಿಗಳು ಕೊಡುವ ಮಾಹಿತಿಗೂ ಆನ್ಲೈನ್ನಲ್ಲಿ ಲಭ್ಯವಿರುವ ಮಾಹಿತಿಗೂ ತಾಳೆಯಾಗುತ್ತಿರಲಿಲ್ಲ. ಅಧಿಕಾರಿಗಳು ಕೊಟ್ಟ ಪ್ರಮಾಣದಷ್ಟು ಕಡತ ವಿಲೇವಾರಿಯಾಗಿಲ್ಲ ಎಂಬುದನ್ನು ಆನ್ಲೈನ್ ಮಾಹಿತಿ ಹೇಳುತ್ತಿತ್ತು. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು. ಆಡಳಿತದಲ್ಲಿ ಆಗಿರುವ ಈ ಬದಲಾವಣೆಯಾದರೂ ಕಣ್ಣಿಗೆ ಕಂಡಿತಲ್ಲಾ ಎಂದು ಅವರು ಹೇಳಿದಾಗ ಜಿಲ್ಲಾ ಮಟ್ಟದ ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತರು.
ಟಚಿಂಗ್ ಸ್ಟಾರ್ ಈಸ್ ಮಿಸ್ಸಿಂಗ್
ಶಿವಮೊಗ್ಗದಲ್ಲಿ ಒಬ್ಬ ರಾಜಕೀಯ ನಾಯಕರಿದ್ದಾರೆ. ಅವರು ನಮ್ಮ ಪಕ್ಷದ ಮುಖಂಡರಲ್ಲವೇ ಅಲ್ಲ ಎಂದು 'ಕೈ' ಪಕ್ಷದ ಜಿಲ್ಲಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾಗಿದೆ. ಆದರೂ, ತಾವು ಕಾಂಗ್ರೆಸ್ ಮುಖಂಡ ಎಂದು ಓಡಾಡುವ ಇವರಿಗೆ 'ಟಚಿಂಗ್ ಸ್ಟಾರ್' ಎಂಬ ಅಡ್ಡ ಹೆಸರೂ ಇದೆ. ಏಕೆಂದ್ರೆ, ಸಾರ್ವಜನಿಕವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಇವರು ಕಾಣ ಸಿಗುತ್ತಾರೆ. ಆಹ್ವಾನವಿಲ್ಲದಿದ್ದರೂ ವೇದಿಕೆ ಏರುವ ಹಂಬಲ. ಶ್ವೇತವಸ್ತ್ರಧಾರಿಗಳಾಗಿ ತಿರುಗುವ ಈ ವ್ಯಕ್ತಿ ಅಕ್ಕಪಕ್ಕ ಇಬ್ಬರು ಹೊಗಳುಭಟ್ಟರೂ ಇರುತ್ತಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತಮ್ಮ ಸಫಾರಿ ವಾಹನ ಏರಿ ನಗರ ಸುತ್ತುವ ಈ ಸ್ಟಾರ್ ಪ್ರತಿಭಟನೆಗೂ ಹೋಗ್ತಾರೆ, ಶಾಲಾ ವಾರ್ಷಿಕೋತ್ಸವವನ್ನೂ ಬಿಡಲ್ಲ. ಮಾಧ್ಯಮದ ಕ್ಯಾಮೆರಾ ಎಲ್ಲೆಲ್ಲಿ ಕಾಣುತ್ತದೋ ಅಲ್ಲಿ ಈ ಮುಖ ಅರಳಿಸಿಕೊಳ್ಳುತ್ತಾರೆ. 'ನಾನು ಆ ಪ್ರೋಗ್ರಾಂ ಟಚ್ ಮಾಡಿ ಬಂದೆ ಸಾರ್. ಮತ್ತೊಂದು ಕಡೆ ಹೊರಟಿದ್ದೀನಿ' ಎಂದು ಬಡಬಡಿಸುತ್ತಲೇ ಇರುತ್ತಾರೆ. ಈ ಶಿಖಾಮಣಿ ಮುಂಬರುವ ಲೋಕಸಭಾ ಚುನಾವಣೆಗೆ 'ನಾನೇ ಅಭ್ಯರ್ಥಿ. ಹೈಕಮಾಂಡ್ ನನಗೇ ಟಿಕೆಟ್ ನೀಡಲು ಒಪ್ಪಿದೆ' ಎಂದೂ ಹೇಳಿಕೊಂಡು ತಿರುಗುತ್ತಿದ್ದಾರೆ. 'ಕೈ' ಕಾರ್ಯಕರ್ತರು, ಮುಖಂಡರು ಮಾತ್ರ ಇವರ ಟಚಿಂಗ್ 'ಡೈಲಾಗ್' ಕೇಳಿ ಮುಸಿಮುಸಿ ನಗುತ್ತಾರೆ. ಸದ್ಯ ನಾಪತ್ತೆಯಾಗಿರುವ ಇವರು ಲೋಕಸಭೆ ಟಿಕೆಟ್ಗಾಗಿ ಹೈಕಮಾಂಡ್ ಅನ್ನು ಟಚ್ ಮಾಡಲು ಹೋಗಿರಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ವ್ಯಂಗ್ಯವಾಡಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ರಾಯಚೂರು: ಒಂದನೇ ತರಗತಿಯಿಂದ ಹತ್ತನೇ ವರ್ಗದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗಾಗಿ 2013-14ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಕರೆಯಲಾಗಿದೆ. ಆನ್ಲೈನ್ ಮೂಲಕ ನೋಂದಣಿ ಮಾಡಲು ವಿದ್ಯಾರ್ಥಿಗಳಿಗೆ ಜ.31 ಕಡೆಯ ದಿನವಾಗಿದ್ದು, ಇಲಾಖೆಯ ವೆಬ್ ಸೈಟ್ ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಇಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. 2012-13ನೇ ಸಾಲಿನಲ್ಲಿ ಪೋಷಕರ ಹೆಸರಿನಲ್ಲಿ ಖಾತೆ ಹೊಂದಿರುವರು ಸಹ ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿರಬೇಕು. ಈ ರೀತಿ ತೆರೆದ ಖಾತೆಯ ವಿವರಗಳನ್ನು ಶಾಲೆಯ ಮುಖ್ಯ ಗುರುಗಳು ಜ.25 ರೊಳಗೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳನ್ನು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ರಾಯಚೂರು ಇವರಿಂದ ಪಡೆಯಬಹುದು ಎಂದು ತಿಳಿಸಲಾಗಿದೆ.
ಡಿಕ್ಕಿ: ಬೈಕ್ ಸವಾರ ಸಾವು
ರಾಯಚೂರು: ಸಿಂಧನೂರು- ಸಿರುಗುಪ್ಪ ರಸ್ತೆಯ ಅಲಬನೂರು ಕ್ರಾಸ್ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಹಿಂಬದಿಯ ಸವಾರ ಸಾವಿಗೀಡಾಗಿದ್ದಾನೆ. ಮೃತನನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ. ಈತ ಬೈಕ್ನ ಹಿಂಬದಿ ಸೀಟಿನಲ್ಲಿ ಕುಳಿತು ಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಲಾರಿಯ ಚಾಲಕನ ನಿರ್ಲಕ್ಷ್ಯದಿಂದ ವೇಗ ನಿಯಂತ್ರಿಸಲಾಗದೇ ಬೈಕ್ಗೆ ಡಿಕ್ಕಿಯಾಗಿದ್ದರಿಂದ ಕೆಳಗೆ ಬಿದ್ದ ಸಿದ್ದಪ್ಪನ ತಲೆ ಮೇಲೆ ಲಾರಿಯ ಚಕ್ರ ಸಾಗಿದ್ದರಿಂದ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಸ್ಕಿಯಲ್ಲಿ ಶಾಸಕ ಪಾಟೀಲ್ ಚಾಲನೆ
ಮಸ್ಕಿ: ಪಟ್ಟಣದ ಗ್ರಾಪಂ ಕಚೇರಿಯ ಆವರಣದಲ್ಲಿ ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕುವುದರ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು. ಪಟ್ಟಣದಲ್ಲಿ ವಿವಿಧೆಡೆ 16 ಪೋಲಿಯೋ ಬೂತ್, ಒಂದು ಸಂಚಾರ ಕೇಂದ್ರ, ಹಳೆ ಬಸ್ನಿಲ್ದಾಣದಲ್ಲಿ ತೆರೆಯಲಾಗಿದೆ. ವಿವಿಧೆಡೆಯ ಪ್ರಾಥಮಿಕ ಶಾಲೆಗಳಲ್ಲಿಯೂ ಲಸಿಕೆ ಕೇಂದ್ರ ತೆರೆಯಲಾಗಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು ಎಂದು ಈ ವೇಳೆ ಮಾತನಾಡಿದ ಮಸ್ಕಿ ವೈದ್ಯಾಧಿಕಾರಿ ಡಾ. ಬಸೀತ್ ಲತೀಫ್ ಹೇಳಿದರು. ಗ್ರಾಪಂ ಅಧ್ಯಕ್ಷ ಎಂ. ಅಮರೇಶ, ತಾಪಂ ಸದಸ್ಯ ಹನುಮಂತಪ್ಪ ಮೋಚಿ, ಪಿಡಿಒ ಹನುಮೇಶ ಕುಲಕರ್ಣಿ, ಜಿ. ವೆಂಕಟೇಶ, ಗ್ರಾಪಂ ಸದಸ್ಯ ಶಂಕರಪ್ಪ, ಶಿಕ್ಷಕ ಎಸ್. ಕುಂಬಾರ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

