ಸುದ್ದಿ ಸಂಕ್ಷೇಪ
ಸಮಾಲೋಚನಾ ಸಭೆ ಇಂದು
ರಾಯಚೂರು: ಸಾಮಾಜಿಕ ಪರಿವರ್ತನಾ ಜನಾಂದೋಲನ ಸಂಘಟನೆಯ ಜಿಲ್ಲಾ ಸಮಿತಿಯಿಂದ 64ನೇ ಭಾರತದ ಸಂವಿಧಾನ ಛದಿನಾಚರಣೆ ಪ್ರಯುಕ್ತ ಮಕ್ಕಳ ಹಕ್ಕುಗಳಿಗೆ ಮೊದಲಾದ್ಯತೆ ನೀಡಲು ಆಗ್ರಹಿಸಿ ಸಮಾಲೋಚನಾ ಸಭೆ ಜ.24ರಂದು ನಡೆಯಲಿದೆ. ನಗರದ ಪತ್ರಿಕಾ ಭವನದಲ್ಲಿ ಜ.24ರಂದು ಬೆಳಗ್ಗೆ 11ಕ್ಕೆ ಬಹುಜನ ಚಿಂತಕ ಡಾ.ಬಾಬು ಜಗಜೀವನರಾಂ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಘಟನೆಯ ರಾಜ್ಯ ಮುಖಂಡ ಜೆ.ಬಿ. ರಾಜು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಶ್ರೀನಿವಾಸ್, ವೆಂಕಟೇಶ ಬೇವಿನಬೆಂಚಿ, ಎಂ.ಆರ್. ಭೇರಿ, ಮರಿಸ್ವಾಮಿ, ವಿದ್ಯಾಪಾಟೀಲ್, ಅಂಬಣ್ಣ ಅರೋಲಿಕರ್, ಕೆ.ಪಿ. ಅನಿಲಕುಮಾರ್ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
28ರಂದು ಉದ್ಘಾಟನೆ
ರಾಯಚೂರು: ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನಲ್ಲಿ ಜ.28ರಂದು ಆಯೋಜಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಜ.28ರಂದು ಬೆಳಗ್ಗೆ 10.30ಕ್ಕೆ ಮಾಜಿ ಸಚಿವ ಎಚ್.ಎಂ. ರೇವಣ್ಣ ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ಕೂಡಲಸಂಗಮದ ಬಸವ ಗುರುಪೀಠದ ಮಾತೆ ಮಹಾದೇವಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಸುಶೀಲಮ್ಮ, ಮುಖ್ಯ ಅತಿಥಿಗಳಾಗಿ ಹಿರಿಯ ಪೊಲೀಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ, ಮೇಜರ್ ಮದ್ದೇಗೌಡ, ಜಯದೇವಪ್ಪ ಜೈನಕೇರಿ, ರತ್ನಾನಾಗರಾಜ್, ಯು.ಎನ್. ಸಂಗನಾಳಮಠ್ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಸಾಧನೆ ಮೆರೆದ ಕ್ರೀಡಾಳುಗಳು
ರಾಯಚೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಳುಗಳು ಉತ್ತಮ ಸಾಧನೆ ಮೆರೆದಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಶು ಸಂಗೋಪನಾ ಇಲಾಖೆಯ ನರಸಿಂಹಲು 60 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ದೇಹದಾರ್ಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಶಿಕ್ಷಕ ಶ್ಯಾಮಸುಂದರ ಯಾದವ್ ಅವರು 70 ಕೆ.ಜಿ. ಹಾಗೂ 60 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರೆ, ಮತ್ತೊಬ್ಬ ಶಿಕ್ಷಕ ವೆಂಕಟೇಶ ನವಲಿ ಹಿಂದೂಸ್ಥಾನಿ ಲಘು ಸಂಗೀತ(ಸಾಂಸ್ಕೃತಿಕ) ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸತತ ನಾಲ್ಕನೇ ಬಾರಿಗೆ ಈ ಸಾಧನೆ ಮೆರೆದಿದ್ದಾರೆ. ಜಾಲಿಬೆಂಚಿ ಶಾಲೆಯ ಸಹ ಶಿಕ್ಷಕಿ ಭುವನೇಶ್ವರಿ ಅವರು ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಸಂಯೋಜಕ ಸೋಮಲಿಂಗಪ್ಪ 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದರೆ, ಶಿಕ್ಷಕ ನರಸಪ್ಪ ಭಾರ ಎತ್ತುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮುಖ್ಯಗುರು ರಂಗನಾಥ ದೇಹದಾರ್ಢ್ಯ ಸ್ಪರ್ಧೆಯ 70 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ 4 ಬೈ 100 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಸೈಯದ್ ಇರ್ಫಾನ್, ದುರ್ಗಪ್ಪ, ಸುಧಾಕರ ಹಾಗೂ ಮಹ್ಮದ್ ಜಫ್ರುಲ್ಲಾ ಅವರಿದ್ದ ತಂಡ ಮೂರನೇ ಸ್ಥಾನ ಗಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
44ನೇ ಜ್ಞಾನಸತ್ರ ಕಾರ್ಯಕ್ರಮ
ರಾಯಚೂರು: ಭಗವಂತನ ಸ್ಮರಣೆಗೆ ದೇಶ, ಕಾಲದ ಮಿತಿಯಿಲ್ಲ. ನಿರಂತರ ಭಗವಂತನ ನಾಮಸ್ಮರಣೆಯಿಂದ ಪುನರ್ಜನ್ಮರಹಿತವಾದ ಜೀವನವನ್ನು ಸಾರ್ಥಕಗೊಳಿಸುವುದು ಸಾಧ್ಯ. ಈ ನಿಟ್ಟಿನಲ್ಲಿ ಜನತೆ ಪರಮಾತ್ಮನ ಆರಾಧನೆಗೆ ಮುಂದಾಗುವಂತೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಕಿರಿಯ ಸುಬುಧೇಂದ್ರ ತೀರ್ಥರು ಕರೆ ನೀಡಿದರು.
ಅವರು ನಗರದಲ್ಲಿ ಭಾನುವಾರ ರಾತ್ರಿ ಕೋಟೆಯ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ನಡೆಯುತ್ತಿರುವ 44ನೇ ವರ್ಷದ ಮಹಾನ್ ಜ್ಞಾನಸತ್ರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಲು ಜ್ಞಾನಸತ್ರ ಕಾರ್ಯ ಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಪ್ರವಚನ ಆಲಿಸಬೇಕು. ಧಾರ್ಮಿಕತೆ ಬೆಳೆಸಿಕೊಂಡು ಬದುಕಿನಲ್ಲಿ ಸಾರ್ಥಕತೆ ಪಡೆಯುವಂತೆ ಸಲಹೆ ನೀಡಿದರು. ಭಗವದ್ಗೀತೆಯಲ್ಲಿ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಅದನ್ನು ಅಧ್ಯಯನ ಮಾಡುವತ್ತ ಎಲ್ಲರೂ ಗಮನಹರಿಸಬೇಕಿದೆ ಎಂದು ಹೇಳಿದರು. ಶ್ರೀಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

