ಹೈ.ಕ.ಅಭಿವೃದ್ಧಿ ಮಂಡಳಿ; ನೈಜ ತಜ್ಞರ ನೇಮಕಕ್ಕೆ ಆಗ್ರಹ
ರಾಯಚೂರು: ಹೈದ್ರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಲ್ಲಿ ತಜ್ಞರನ್ನು ನಾಮನಿರ್ದೇಶನ ಮಾಡುವಾಗ ಆಗಿರುವ ಲೋಪದೋಷ ಸರಿಪಡಿಸಬೇಕು. ನೈಜ ತಜ್ಞರನ್ನೇ ಅಭಿವೃದ್ಧಿ ಮಂಡಳಿಗೆ ನೇಮಿಸುವಂತೆ ಹೈ.ಕ. ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್, ಹೈದ್ರಾಬಾದ್- ಕರ್ನಾಟಕಕ್ಕೆ ಸಂವಿಧಾನದ 371ನೇ(ಜೆ) ಕಲಂ ಅಡಿ ರಾಜ್ಯ ಸರ್ಕಾರ ಹೈ.ಕ. ಪ್ರದೇಶಾಭಿವೃದ್ಧಿಮಂಡಳಿ ಸ್ಥಾಪನೆಗೆ ಆದೇಶಿಸಿ ಅಧಿಸೂಚನೆ ಹೊರಡಿಸಿದೆ. ಅದರನ್ವಯ ಅಭಿವೃದ್ಧಿ ಮಂಡಳಿಯನ್ನು ರಾಜ್ಯಪಾಲರು ರಚಿಸಿದ್ದು, ಆದೇಶದಲ್ಲಿನ ಲೋಪ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.
ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿಗೆ ಐವರು ತಜ್ಞರನ್ನು ನಾಮನಿರ್ದೇಶನ ಮಾಡುವ ಅಧಿಕಾರ ರಾಜ್ಯಪಾಲರಿಗಿದೆ. ಸದರಿ ಕಾಯಿದೆಯಂತೆ ರಾಜ್ಯದ ಯೋಜನಾ ಕಾರ್ಯ ವಿಧಾನ, ರಾಜ್ಯದ ಹಣಕಾಸು ವಿಷಯಗಳು ಹಾಗೂ ಲೆಕ್ಕಪತ್ರಗಳು ನೀರಾವರಿ ಹಾಗೂ ಲೊಕೋಪಯೋಗಿ ಕಾಮಗಾರಿಗಳು, ಕೃಷಿ ಮತ್ತು ಕೈಗಾರಿಕೆ ಹಾಗೂ ಶಿಕ್ಷಣ ಮತ್ತು ಉದ್ಯೋಗ ಎಂದು ಐದು ಜನ ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರನ್ನು ನಾಮನಿರ್ದೇಶನ ಮಾಡಬೇಕೆಂಬುದು ಕಾಯ್ದೆಯ ಉದ್ದೇಶವಾಗಿದೆ.
ಆದರೆ ಸರ್ಕಾರ ಇತ್ತೀಚೆಗೆ ರಚಿಸಿದ ಮಂಡಳಿಗೆ ನೇಮಕಗೊಂಡವರು ಈ ಯಾವ ವಿಷಯದ ತಜ್ಞರಲ್ಲ ಎಂದು ದೂರಿರುವ ಅವರು, ಕೂಡಲೇ ಈಗಾಗಲೇ ಸರ್ಕಾರ ನೇಮಿಸಿದವರನ್ನು ಮಂಡಳಿಯಿಂದ ತೆಗೆದುಹಾಕಿ ಹೊಸ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕು. ಅರ್ಥಶಾಸ್ತ್ರ, ಸಮಾಜಶಾಸ್ತ್ರ ಪ್ರಾಧ್ಯಾಪಕರು, ನಿವೃತ್ತ ಐಎಎಸ್ ಅಧಿಕಾರಿ ತಜ್ಞರಾಗಲು ಸಾಧ್ಯವಿಲ್ಲ ಹಾಗೂ ಶೇಷಾದ್ರಿಯವರು ಹಿರಿಯರಾಗಿದ್ದು ಅವರ ಆರೋಗ್ಯ ಸರಿಯಿಲ್ಲ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಶೇಷಾದ್ರಿ ಅವರ ನಾಮನಿರ್ದೇಶನ ವಾಪಸ್ ಪಡೆಯಬೇಕು. ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿರುವ ತಜ್ಞರನ್ನು ನೇಮಿಸಬೇಕು. ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿಯು ಈ ಭಾಗದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗಿರಬೇಕೇ ವಿನಾ ಅದೊಂದು ಪುನರ್ವಸತಿ ಕೇಂದ್ರವಾಗದಂತೆ ಎಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

