ರಾಯಚೂರು

ಲೋಕಸಭೆ ಚುನಾವಣೆ ಕಾರ್ಯಕ್ಕೆ ಸನ್ನದ್ಧರಾಗಿ: ಜಿಲ್ಲಾಧಿಕಾರಿ ಸೂಚನೆ

Published On :

ಕ.ಪ್ರ. ವಾರ್ತೆ, ರಾಯಚೂರು, ಜ.29
ಲೋಕಸಭೆಗೆ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್. ನಾಗರಾಜು ಕರೆ ನೀಡಿದರು.
ಅವರು ಇತ್ತೀಚೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಚುನಾವಣೆ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿ, ರಾಯಚೂರು ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ತಾಲೂಕುಗಳು ಸೇರಿವೆ. ಪೂರ್ವಸಿದ್ಧತೆ ಮೂಲಕ ಚುನಾವಣೆಯ ಎಲ್ಲ ಕಾರ್ಯ ಸರಾಗವಾಗಿ ಮಾಡಲು ಸಾಧ್ಯ ಎಂದರು.
ಚುನಾವಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ವದಾಗಿದೆ. ಹೆಚ್ಚಿನ ಶಿಕ್ಷಕರು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಳ್ಳುವುದರಿಂದ ಅಂಥ ಸಿಬ್ಬಂದಿಯ ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಿ ತುರ್ತಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಶಿಕ್ಷಕರ ಕುರಿತು ಸಮರ್ಪಕ ವಿಳಾಸ ಮತ್ತು ದೂರವಾಣಿ ಸಂಖ್ಯೆಯಿಲ್ಲದ್ದರಿಂದ ಮತದಾನ ಕಾರ್ಯದ ಆದೇಶ ತಲುಪಿಸಲು ತೊಂದರೆಯಾಗಿತ್ತು ಎಂದು ಸಭೆಗೆ ತಿಳಿಸಿದರು.
ಎಲ್ಲ ಇಲಾಖೆಗಳ ವಾಹನಗಳನ್ನು ಚುನಾವಣಾ ಕಾರ್ಯಕ್ಕೆ ಪಡೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನಗಳನ್ನು ಸುಸ್ಥಿತಿಯಲ್ಲಿರಿಸಲು ಹಾಗೂ ವಾಹನ ಕೋರಿಕೆ ಬಂದಾಗ ಅವುಗಳನ್ನು ಚುನಾವಣಾ ಕಾರ್ಯಕ್ಕೆ ವಾಹನ ಚಾಲಕರ ಸೇವೆ ಸಹಿತ ಒದಗಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ತಹಸೀಲ್ದಾರರು ಮತ ಕೇಂದ್ರಗಳ ಭೌತಿಕ ತಪಾಸಣೆ ಮತ್ತು ಮತದಾನ ಕೇಂದ್ರಗಳೆಂದು ಗುರುತಿಸಿರುವ ಕೋಣೆಗಳ ಕಿಡಕಿ, ಬಾಗಿಲು, ವಿದ್ಯುತ್ ಸಂಪರ್ಕ ಸೇರಿ ವಿವಿಧ ಅವಶ್ಯಕತೆಗಳ ಬಗ್ಗೆ ಈಗಲೇ ಗಮನಹರಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಮುಂದಿನ ತಿಂಗಳು ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಧಿಕಾರಿಗಳ ಪೂರ್ವಾನುಮತಿಯಿಲ್ಲದೆ ರಜೆ ಮೇಲೆ ತೆರಳದಂತೆ ಆದೇಶಿಸಲಾಯಿತು.
ಚುನಾವಣಾ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಪ್ಲೈಯಿಂಗ್ ಸ್ಕ್ವಾಡ್, ಸೆಕ್ಟೋರಲ್ ಆಫೀಸರ್ಸ್, ಸ್ಕಾಟಿಸ್ಟಿಕ್ ಸರ್ವೇಯಲನ್ಸ್, ವಿಡಿಯೋ ವೀವಿಂಗ್ ಟೀಂ, ಲೈನೇಜ್ ಅಧಿಕಾರಿಗಳು, ಆಡಿಟ್ ಎಂಸಿಸಿ, ತಂಡಗಳಿಗೆ  ಪ್ರಚಾರ ಕೆಲಸಗಳು, ಚುನಾವಣಾ ಪರಿವೀಕ್ಷಕರಿಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ಈ ವೇಳೆ ನೇಮಿಸಲಾಯಿತು.
ಸಭೆಯಲ್ಲಿ ಸಹಾಯಕ ಆಯುಕ್ತ ಟಿ. ಯೋಗೇಶ, ಪ್ರಭಾರಿ ಸಹಾಯಕ ಆಯುಕ್ತ ಉಮೇಶ್, ಜಿಲ್ಲಾ ಗಣಕ ಅಧಿಕಾರಿ ವಿಜಯಶಂಕರ, ತಹಸೀಲ್ದಾರ್ ಅಶೋಕ ಜೆ., ಮಾನವಿ ತಹಸೀಲ್ದಾರ್ ಶಹಾನೂರು, ಬಿಎಸ್ಸೆನ್ನೆಲ್ ಅಧಿಕಾರಿಗಳು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.