'ಚಿಂತನೆಗೆ ಸ್ಪಷ್ಟತೆಯಿಲ್ಲದಿದ್ದರೆ ಮೌಢ್ಯಕ್ಕೆ ದಾರಿ'
ಕನ್ನಡಪ್ರಭ ವಾರ್ತೆ, ರಾಯಚೂರು, ಜ.30
ಸಮಾಜದ ಪ್ರತಿಯೊಬ್ಬರ ಚಿಂತನೆ-ಆಲೋಚನೆಗಳಿಗೆ ಸ್ಪಷ್ಟತೆಯಿಲ್ಲದಿದ್ದಲ್ಲಿ ಅದು ಮೌಢ್ಯತೆಗೆ ದಾರಿ ಮಾಡುತ್ತದೆ. ಅರಿವಿನಿಂದ ಮಾತ್ರ ಭಾರತೀಯ ಪರಂಪರೆಯ ಹೋರಾಟ ಹಾಗೂ ತತ್ವಗಳು ದಾರಿ ದೀಪವಾಗಬಲ್ಲವು ಎಂದು ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ)ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ಅವರು ನಗರದಲ್ಲಿ ಈಚೆಗೆ ಜಿಲ್ಲಾ ದಸಂಸ ದಿಂದ ಆಯೋಜಿಸಿದ್ದ ಮೂಢ ನಂಬಿಕೆ ವಿರೋಧಿ ಅರಿವಿನ ಆಂದೋಲನ ಕುರಿತ ವಿಚಾರ ಸಂಕಿರಣ ಹಾಗೂ ಸಂಘಟನೆಯ ಒಡನಾಟಿ ದಿ.ಹುಲಿಗೆಪ್ಪ ಹುಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮೌಢ್ಯತೆ ನಿವಾರಣೆಗೆ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಕೊನೆಹಾಡಲು ಎಲ್ಲರೂ ಮುಂದಾಗಬೇಕಿದೆ. ಜನರ ಮುಗ್ಧತೆಯನ್ನು ಬಂಡವಾಳ ಮಾಡಿ ಮೂಢನಂಬಿಕೆಗಳನ್ನು ಜನರಲ್ಲಿ ಬಿತ್ತುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳನ್ನು ದೂರವಿರಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ವಿಚಾರಧಾರೆ: ಸಮಾಜದಲ್ಲಿ ಮೇಲ್ಜಾತಿಯವರು ಎಂದು ಬಿಂಬಿಸಿಕೊಳ್ಳುತ್ತಿರುವವರು ಧರ್ಮದ ಹೆಸರಲ್ಲಿ ತತ್ವಗಳ ಹೈಜಾಕ್ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಎಚ್ಚರದಿಂದಿರಬೇಕಿದೆ. ಬಸವಣ್ಣ ಎಂದರೇ ಎತ್ತುಗಳು ಎಂದು ಜನರನ್ನು ನಂಬಿಸುವ ವರ್ಗ ಇದ್ದು, ಅವರನ್ನು ಪೂಜೆ ಮಾಡಲು ಮುಂದಾದ ಜನ ಅವರ ವಿಚಾರಧಾರೆಗಳನ್ನು ಅರಿಯದೆ ಇರುವುದು ಖೇದದ ಸಂಗತಿ ಎಂದರು.
ಸರ್ಕಾರ ತರಲು ಹೊರಟಿರುವ ಮೂಢನಂಬಿಕೆಗಳ ಪ್ರತಿಬಂಧಕ ಕಾಯಿದೆ ವಿರುದ್ಧ ಜನ ಸಾಮನ್ಯರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಕಾರ್ಯವನ್ನು ಯಥಾಸ್ಥಿತಿವಾದಿಗಳು ಮಾಡಿದ್ದಾರೆ. ಈ ವಿಚಾರದಲ್ಲಿ ಅಂಥ ಅಪಪ್ರಚಾರಕ್ಕೆ ಗಮನನೀಡದೆ ಮುಂದುವರಿಯುವುದು ಆಗಬೇಕಿದೆ ಎಂದು ತಿಳಿ ಹೇಳಿದರು.
ಪ್ರತಿಬಂಧಕ ಕಾಯ್ದೆ: ಹೋರಾಟಗಾರರು ಅಧ್ಯಯನಶೀಲರಾಗಬೇಕು. ಆಗ ಮಾತ್ರ ವೈಚಾರಿಕತೆ ಹಾಗೂ ಬದ್ಧತೆಯ ಹೋರಾಟ, ತಿಳಿವಳಿಕೆ ಸಾಧ್ಯ. ರಾಜ್ಯ ಸರ್ಕಾರದ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾತ್ಯತೀತವಾಗಿದೆ ಎನ್ನುವುದನ್ನು ಜನರಿಗೆ ತಿಳಿ ಹೇಳಲು ಕರೆ ನೀಡಿದರು.
ಪ್ರಾಚಾರ್ಯ ವಿ.ಟಿ. ಮಾಸ್ತೆ, ಸಂಘಟನೆ ರಾಜ್ಯ ಸಮಿತಿ ಸಂಚಾಲಕ ನಾಗತಿಹಳ್ಳಿ ನಾಗರಾಜ್ ಮಾತನಾಡಿ, ಸರ್ಕಾರ ಮೂಢನಂಬಿಕೆ ತಡೆಗೆ ಕಾನೂನು ಜಾರಿಗೆ ತರಲು ಮುಂದಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಅಲ್ಪ ಹಿನ್ನಡೆಯಾದರೂ ಮುಂದೊಂದು ದಿನ ಅದಕ್ಕೆ ಮನ್ನಣೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಮೃತ ದಸಂಸದ ಒಡನಾಡಿ ದಿ. ಹುಲಿಗೆಪ್ಪ ಹುಲಿ ಅವರ ಕುಟುಂಬಕ್ಕೆ ಸಂಘದಿಂದ ರು. 75 ಸಾವಿರ ನೆರವು ನೀಡಲಾಗುತ್ತದೆ ಎಂದು ಸಮಾರಂಭದಲ್ಲಿ ಪ್ರಕಟಿಸಲಾಯಿತು. ಅಧ್ಯಕ್ಷತೆಯನ್ನು ನಾಗಣ್ಣ ಬಡಿಗೇರ್ ವಹಿಸಿದ್ದರು. ಲಾಲ್ ಹುಸೇನ್ ಕಂದಗಲ್, ಗುಲ್ಬರ್ಗ ವಿಭಾಗೀಯ ಸಂಚಾಲಕ ಅರ್ಜುನ ಗಬ್ಬೂರು, ಚಿನ್ನಪ್ಪ ಯಡಗಿಬಾಳ, ನಿವೃತ್ತ ಶಿಕ್ಷಕ ಬಾಬು ಭಂಡಾರಿಗಲ್ ಹಾಗೂ ದಸಂಸ ಕಾರ್ಯರ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

