ರಾಯಚೂರು

ಸುದ್ದಿ ಸಂಕ್ಷೇಪ

Published On :

'ಕುವೆಂಪು ಒಂದು ನೆನಪು' ಇಂದು
ಸಿಂಧನೂರು: ನಗರದ ಖದರಿಯಾ ಕಾಲೋನಿಯಲ್ಲಿರುವ ಕವಿ ಪಂಪಯ್ಯಸ್ವಾಮಿ ಸಾಲಿಮಠರ ಮನೆಯಲ್ಲಿ ಜ. 31ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಒಂದು ನೆನಪು ಹಾಗೂ ಸ್ವರಚಿತ ಕವನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ತಿಳಿಸಿದ್ದಾರೆ. ಕರಿಬಸವ ನಗರದ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಉದ್ಘಾಟಿಸುವರು. ರಾಷ್ಟ್ರಕವಿ ಕುವೆಂಪು ಕುರಿತು ಶ್ರೀರಾಮನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ವೈಜನಾಥ ಸಗರಮಠ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ ಬಹುಮಾನ ವಿತರಿಸುವರು. ದೂರದರ್ಶನ ಕಲಾವಿದ ವೀರೇಶ ಸಾಲಿಮಠ ಹಾಗೂ ಶಿಕ್ಷಕ ಪರಮೇಶ್ವರ ಕುವೆಂಪು ರಚಿತ ಭಾವಗೀತೆಗಳ ಗಾಯನ ನಡೆಸುವರು.
ಸೀಮಾಂಧ್ರ ಹೋರಾಟ:
ಬಸ್ ಸಂಚಾರ ಸ್ಥಗಿತ
ರಾಯಚೂರು: ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿಸಿ ಆಂಧ್ರದ ಸೀಮಾಂಧ್ರ ಭಾಗದಲ್ಲಿ ಗುರುವಾರ ಬಂದ್ ಕರೆ ನೀಡಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಸೀಮಾಂಧ್ರ ಪ್ರದೇಶದ ಶ್ರೀಶೈಲಂ, ಕರ್ನೂಲು, ಮಂತ್ರಾಲಯಗಳಿಗೆ ನಗರದ ಮೂಲಕ ತೆರಳುವ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರವನ್ನು ಬಂದ್ ಹಿನ್ನೆಲೆಯಲ್ಲಿ ಸಂಸ್ಥೆಯು ಹಿಂದಕ್ಕೆ ಪಡೆದಿದ್ದರಿಂದ ಪ್ರಯಾಣಿಕರು ಪರದಾಡಿದರು. ಮಂತ್ರಾಲಯಕ್ಕೆ ತೆರಳಲು ಭಕ್ತರಿಗೆ ಅನಾನುಕೂಲವಾಯಿತು. ಮಂತ್ರಾಲಯಕ್ಕೆ ತೆರಳಿದ ಎಲ್ಲ 60 ಬಸ್ಗಳೂ ರಾಯಚೂರು ತಾಲೂಕಿನ ಗಿಲ್ಲೆಸೂಗೂರು ವರೆಗೆ ಸಾಗಿ ಮರಳಿದವು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ತಿಳಿಸಿದೆ. ಅದೇ ರೀತಿ ಕನೂಲು, ಶ್ರೀಶೈಲಂಗೆ ತೆರಳಬೇಕಿದ್ದ ಬಸ್ಗಳು ನಗರದಿಂದ ಸಂಚರಿಸಲಿಲ್ಲ. ಸೀಮಾಂಧ್ರ ಬಂದ್ ಕಾರ್ಯಕ್ರಮದ ನಂತರ ಸಂಜೆ 4ಕ್ಕೆ ಮತ್ತೆ ಬಸ್ಗಳ ಸಂಚಾರ ಪುನಾರಂಭಗೊಂಡಿತು.
ವರ್ಧಿನಿ ಪಾಟೀಲ ರಾಜ್ಯಮಟ್ಟಕ್ಕೆ ಆಯ್ಕೆ
ಸಿಂಧನೂರು: ಲಿಂಗಸ್ಗೂರುನಲ್ಲಿ ನಡೆದ 2013-14ನೇ ಶೈಕ್ಷಣಿಕ ಸಾಲಿನ ರಾಯಚೂರು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನಗರದ ಆದರ್ಶ ವಿದ್ಯಾಲಯ (ಆರ್ಎಂಎಸ್ಎ) ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕು. ವರ್ಧಿನಿ ಪಾಟೀಲ ತಂದೆ ವಿಶ್ವನಾಥ ರೆಡ್ಡಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿನಿ ಜಿಲ್ಲಾ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ಶಾಲಾ ಮುಖೋಪಾಧ್ಯಾಯರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಅಭಿನಂದಿಸುತ್ತಾ, ಮುಂಬರುವ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಗೆಲವು ಸಾಧಿಸಲಿ ಎಂದು ಹಾರೈಸಿರುತ್ತಾರೆ.
ಇಂದಿನಿಂದ ಪ್ರವಚನ
ಮಸ್ಕಿ: ಪಟ್ಟಣದ ಶಂಕರಲಿಂಗ ದೇವಸ್ಥಾನದಲ್ಲಿ ಜ.31ರಿಂದ 4 ದಿನಗಳ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 6.30ಕ್ಕೆ ಶರಣ ಶಂಕರದಾಸಿಮಯ್ಯನವರ ಪುರಾಣ ಪ್ರವಚನ ನಡೆಯಲಿದ್ದು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಹಾಗೂ ಮಸ್ಕಿಯ ಗಚ್ಚಿನ ಹಿರೇಮಠದ ರುದ್ರಮುನಿ ಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಗಾನೂರಿನ ಪ್ರವಚನಕಾರ ಶರಣಯ್ಯಸ್ವಾಮಿ ಗಣಾಚಾರಿಮಠ ಪ್ರವಚನ ನೀಡಲಿದ್ದಾರೆ.
ಡೆಮೊ ರೈಲು ಸಮಯ ಬದಲಿಗೆ ಕರವೇ ಆಗ್ರಹ
ರಾಯಚೂರು: ರಾಯಚೂರಿನಿಂದ ಕಾಚಿಗುಡಾವರೆಗೆ ಗದ್ವಾಲ್ ಮೂಲಕ ಸಂಚರಿಸುತ್ತಿರುವ ಡೆಮೊ ರೈಲಿನ ಸಮಯ ಬದಲಾವಣೆ ಸೇರಿ ಮತ್ತಿತರೆ ಬೇಡಿಕೆಗಳ ಈಡೇರಿಕೆಗೆ ಕರವೇ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಗುರುವಾರ ರೇಲ್ವೆ ಇಲಾಖೆ ಗುಂತಕಲ್ ವಿಭಾಗದ ವ್ಯವಸ್ಥಾಪಕರ ಮೂಲಕ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ಮತ್ತಿತರರು ಮನವಿ ಸಲ್ಲಿಸಿದರು.
ರಾಯಚೂರಿನಿಂದ ಕಾಚಿಗೂಡವರೆಗೆ ಈಚೆಗೆ ನೂತನ ಮಾರ್ಗದಲ್ಲಿ ಡೆಮೊ ರೈಲು ಸಂಚಾರ ಆರಂಭಿಸಿದ್ದು, ಈ ರೈಲಿನ ಸಂಚಾರದ ಸಮಯ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ ಎಂದು ದೂರಿದರು.
ಅನುಕೂಲ ಕಲ್ಪಿಸಿ: ಸದ್ಯ ಈ ರೈಲು ಹೈದರಾಬಾದ್ನ ಕಾಚಿಗೂಡಾ ನಿಲ್ದಾಣದಿಂದ ಬೆಳಗ್ಗೆ ಹೊರಟು ನಗರಕ್ಕೆ ಮಧ್ಯಾಹ್ನ ಆಗಮಿಸುತ್ತಿದೆ. ಮತ್ತೆ ಸಂಜೆ ಮರಳುತ್ತಿದ್ದು, ಇದರಿಂದಾಗಿ ನಗರದಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿಲ್ಲ. ಕಾರಣ ಈ ರೈಲನ್ನು ಇನ್ನು ಮುಂದೆ ನಗರದಿಂದ ಬೆಳಗ್ಗೆ 5.30ಕ್ಕೆ ಬಿಟ್ಟು 10ಕ್ಕೆ ಹೈದರಾಬಾದ್ ತಲುಪುವಂತೆ ಹಾಗೆಯೇ ಹೈದರಾಬಾದ್ನಿಂದ ಸಂಜೆ 5.30ಕ್ಕೆ ಹೊರಟು ನಗರಕ್ಕೆ ಮರಳಿ ಪ್ರಯಾಣಿಸುವಂತೆ ಜನತೆಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
   ರೈಲು ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲು ಸಂಘಟನೆವರು ಒತ್ತಾಯಿಸಿದರು. ಸಂಘಟನೆಯ ಖಲೀಲ್ ಪಾಷಾ, ರಘುವೀರ ನಾಯಕ, ಹಾಜಿ ಮಸ್ತಾನ್, ಅರಾಫತ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.