ರಾಯಚೂರು

ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಸಭೆ ಕರೆಯಲು ಉಪಾಧ್ಯಕ್ಷರಿಗೆ ಮೊರೆ

Published On :

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಜು. 4
ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರು ತಮ್ಮ ವಿರುದ್ಧ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿದ್ದ ಅರ್ಜಿಗೆ ಸಂಬಂಧಿಸಿ ಸಭೆ ಕರೆಯದ ಹಿನ್ನೆಲೆ ಕೂಡಲೇ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಉಪಾಧ್ಯಕ್ಷರನ್ನು ನಗರಸಭೆ ಸದಸ್ಯರು ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ನಗರಸಭೆ ಉಪಾಧ್ಯಕ್ಷೆ ಪದ್ಮಾವತಿ ಅವರನ್ನು ಭೇಟಿ ಮಾಡಿದ ನಗರಸಭೆಯ 30ಕ್ಕೂ ಹೆಚ್ಚಿನ ಸದಸ್ಯರು, ಜೂ.16ರಂದು ಜಿಲ್ಲಾಡಳಿತಕ್ಕೆ 30ಕ್ಕೆ ಹೆಚ್ಚಿನ ಸಂಖ್ಯೆಯ ಸದಸ್ಯರು ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರೂ ಅಧ್ಯಕ್ಷರು ಸಭೆ ಕರೆಯಲು ಮುಂದಾಗುತ್ತಿಲ್ಲ ಎಂದು ದೂರಿದರು.
ಕರ್ತವ್ಯ ನಿರ್ವಹಣೆಯಲ್ಲಿ ವಿಫಲ: ಅವಿಶ್ವಾಸ ಅರ್ಜಿ ಸಲ್ಲಿಸಿ 15 ದಿನಗಳೇ ಕಳೆದರೂ ಗೊತ್ತುವಳಿ ಮಂಡನೆಗೆ ಸಭೆ ಕರೆಯದಿರುವ ಹಿನ್ನೆಲೆಯಲ್ಲಿ ಉಪಾಧ್ಯಕ್ಷರು ವಿಶೇಷ ಮಹಾಸಭೆಯನ್ನು ಕರೆಯಬೇಕು. ಕೂಡಲೇ ಸಭೆಯ ದಿನಾಂಕವನ್ನು ಅಂತಿಮಗೊಳಿಸಿ ಸದಸ್ಯರಿಗೆ ಮಾಹಿತಿ ಒದಗಿಸುವಂತೆ ಆಗ್ರಹಿಸಿದರು.
ಹಾಲಿ ಅಧ್ಯಕ್ಷೆ ಮಹಾದೇವಿ ನಾಯಕ ಅವರು ತಮ್ಮ ಅಧಿಕಾರವಧಿಯ ಒಂದು ವರ್ಷದಲ್ಲಿ ಕೇವಲ ಎರಡು ಬಾರಿ ಮಾತ್ರ ಸಾಮಾನ್ಯ ಸಭೆ ಕರೆದಿದ್ದಾರೆ. ಪ್ರತಿ ತಿಂಗಳು ಸಾಮಾನ್ಯ ಸಭೆ ನಡೆಸಬೇಕೆಂದು ಕಾಯಿದೆಯಲ್ಲಿ ಹೇಳಲಾಗಿದೆ. ಆದರೂ ಸಭೆ ಕರೆಯುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಸಾಮಾನ್ಯ ಸಭೆಯನ್ನು ಕರೆಯುವುದು ಅಧ್ಯಕ್ಷರ ಹೊಣೆಯಾಗಿದ್ದು ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆಂದು ದೂರಿದರು.
ನಗರಸಭೆಯ ಕಚೇರಿ ಸಿಬ್ಬಂದಿಯು ಅಧ್ಯಕ್ಷರ ಆದೇಶಗಳಿಗೆ ಬೆಲೆ ಕೊಡುತ್ತಿಲ್ಲ. ಅದರಿಂದ ನಗರದ ಜನತೆಗೆ ತೊಂದರೆಯಾಗಿದೆ. ಈ ಮೂಲಕ ಆಡಳಿತ ಯಂತ್ರವನ್ನು ಹಿಡಿತದಲ್ಲಿರಿಸಿಕೊಳ್ಳುವಲ್ಲಿ ಅಧ್ಯಕ್ಷರು ವಿಫಲರಾಗಿದ್ದಾರೆ. ನಗರದ ಜನತೆಗೆ ಕಳೆದ ಅನೇಕ ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಜನತೆಗೆ ಸಮರ್ಪಕ ನೀರೊದಗಿಸುವ ಕಾರ್ಯದಲ್ಲಿ ಅಧ್ಯಕ್ಷೆ ಮಹಾದೇವಿ ನಾಯಕ ಅವರು ವಿಫಲರಾಗಿದ್ದಾರೆಂದು ಆರೋಪಿಸಿದರು.
ಕಸ ವಿಲೇವಾರಿ ಆಗಿಲ್ಲ: ನಗರಸಭೆಗೆ ಹಾಲಿ ಅಧ್ಯಕ್ಷರ ಅವಧಿಯಲ್ಲಿ ಆದಾಯ ಸಂಗ್ರಹಣೆಯಲ್ಲಿ ಹಿನ್ನಡೆಯಾಗಿದೆ. ಸಿಬ್ಬಂದಿ ನಗರಸಭೆಗೆ ಬರಬೇಕಾದ ತೆರಿಗೆ ಸಂಗ್ರಹಣೆಯಲ್ಲಿ ಅಸಡ್ಡೆ ಪ್ರದರ್ಶಿಸುತ್ತಿದ್ದಾರೆ. ನಗರದ ರಸ್ತೆ, ಚರಂಡಿ ಸೇರಿ ಮತ್ತಿತರ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿಲ್ಲ ಎಂದು ಆರೋಪಿಸಿದರು.
ನಗರಸಭೆಗೆ ಸರ್ಕಾರದಿಂದ ಕೋಟ್ಯಂತರ ರು. ಅನುದಾನ ದೊರೆಯುತ್ತಿದೆ. ಆದರೆ ಅದರ ಸಮರ್ಪಕ ಬಳಕೆ ಮಾಡಿಕೊಂಡು ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ಅಧ್ಯಕ್ಷೆ ವಿಫಲರಾಗಿದ್ದು, ನಗರದಲ್ಲಿ ದಿನದಿಂದ ದಿನಕ್ಕೆ ಘನತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಕಸದ ವಿಲೇವಾರಿಗೆ ಸಿಬ್ಬಂದಿಯಿಲ್ಲವಾಗಿದೆ. ಯಂತ್ರಗಳಿಂದಲೂ ಅನೇಕ ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗದೇ ಕಲುಷಿತ ಪರಿಸರ ನಿರ್ಮಾಣವಾಗಿದೆ. ಇದಕ್ಕೆ ಅಧ್ಯಕ್ಷರ ಕಾರ್ಯವೈಖರಿಯೇ ಕಾರಣ ಎಂದು ದೂರಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಯಣ್ಣ, ಮಾರೆಪ್ಪ, ನರಸಪ್ಪ ಯಕ್ಲಾಸಪುರ, ದೊಡ್ಡಮಲ್ಲೇಶ್, ಎಂ. ಪವನ್ ಕುಮಾರ್, ಹರೀಶ್ ನಾಡಗೌಡ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.