ರಾಯಚೂರು

ಮರಳು ಸಾಗಣೆ ನಿಯಂತ್ರಣಕ್ಕೆ ಶಾಸಕರಿಗೆ ಕುಷ್ಟಗಿ ಒತ್ತಾಯ

Published On :

ದೇವದುರ್ಗ: ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ನಡೆಯುತ್ತಿರುವ ಅನಧಿಕೃತ ಮತ್ತು ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಸ್ಥಳೀಯ ಶಾಸಕ ಎ. ವೆಂಕಟೇಶ ನಾಯಕ ಕೂಡಲೇ ಮುಂದಾಗಬೇಕಿದೆ ಎಂದು ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ರಾಘವೇಂದ್ರ ಕುಷ್ಟಗಿ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ರಮ ಮರಳು ಮಾರಾಟದಲ್ಲಿ ಕೆಲ ಅಧಿಕಾರಿಗಳು ಸ್ವಂತ ಲಾರಿಗಳನ್ನು ಅಕ್ರಮ ಮರಳು ಸಾಗಣೆಗೆ ತೊಡಗಿಸಿರುವ ಮಾಹಿತಿಯಿದೆ. ತಾಲೂಕು ಆಡಳಿತದ ಕೆಲಭಾಗವೇ ಅಕ್ರಮ ಮರಳು ಸಾಗಣೆ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಅತಿಯಾದ ಭ್ರಷ್ಟಾಚಾರ: ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ತಾಲೂಕಿನಲ್ಲಿ ಅತಿಯಾದ ಭ್ರಷ್ಟಾಚಾರ ನಡೆದಿದ್ದು, ಮಾಜಿ ಸಚಿವ ಕೆ. ಶಿವನಗೌಡ ನಾಯಕ ವಿರುದ್ಧ ಜನಸಂಗ್ರಾಮ ಪರಿಷತ್ ಕಳೆದ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿತ್ತು. ಅದರ ಫಲವಾಗಿಯೇ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆದ್ದಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಎಚ್ಚರಿಸಿದರು.
ಶಾಸಕ ವೆಂಕಟೇಶ ನಾಯಕ ಅಧಿಕಾರಕ್ಕೆ ಬಂದು 1 ವರ್ಷ ಕಳೆದಿದೆ. ಆದರೆ ಅವರು ಅಕ್ರಮವನ್ನು ಕಂಡೂ ಮೌನದಿಂದಿರುವುದು ಅನುಮಾನಕ್ಕೆ ದಾರಿ ಮಾಡಿದೆ. ಕಳೆದ ಅವಧಿಗೆ ತಾಲೂಕಿನಲ್ಲಿ ಸಾವಿರಾರು ಕೋಟಿ ರು. ಅವ್ಯವಹಾರ, ವಸತಿ ಯೋಜನೆಯಲ್ಲಿ ಹಣ ದುರ್ಬಳಕೆ ಕುರಿತು ಅಗತ್ಯ ದಾಖಲೆಗಳೊಂದಿಗೆ ಸಂಘಟನೆ ಹಗರಣ ಬಯಲುಗೊಳಿಸಿತ್ತು. ಆದರೆ ಅಂಥ ಅಕ್ರಮಗಳ ತನಿಖೆ ಬಗ್ಗೆ ಹಾಲಿ ಶಾಸಕರು ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.
ಅವ್ಯವಹಾರ ಪ್ರಕರಣಗಳು ಬೆಳಕಿಗೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸ್ಥಳೀಯವಾಗಿ ಸಂಸದರು, ಶಾಸಕರೂ ಕಾಂಗ್ರೆಸ್‌ನವರಾಗಿದ್ದರೂ ತಾಲೂಕಿನಲ್ಲಿ ಆಡಳಿತಾತ್ಮಕ ಬದಲಾವಣೆಗಳಾಗಿಲ್ಲ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿಯೇ ಹೆಚ್ಚು ಅವ್ಯವಹಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ ಜನಸಂಗ್ರಾಮ ಪರಿಷತ್ ಹೋರಾಟಕ್ಕೆ ಮುಂದಾಗಲಿದ್ದು, ತಾಲೂಕು ಘಟಕ ರಚಿಸಿ, ಸಮಾವೇಶಗಳನ್ನು ಆಯೋಜಿಸುವ ಮೂಲಕ ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗುತ್ತದೆ. ಮುಂದಿನ ಪೀಳಿಗಿಗೆ ನೈಸರ್ಗಿಕ ಸಂಪತ್ತನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಅವರು ಹೇಳಿದರು. ಜಿಲ್ಲಾ ಸಂಚಾಲಕ ಡಾ. ವಿ.ಎ. ಮಾಲೀಪಾಟೀಲ್, ಬಂದೆಪ್ಪಗೌಡ ಐರೆಡ್ಡಿ, ಭೀಮರಾಯ ಜರದಬಂಡಿ, ಜಿ. ಬಸವರಾಜ ನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.