ರಾಯಚೂರು

ಕ್ಲೈಮ್ಯಾಕ್ಸ್‌ಗೆ ನಗರಸಭೆ ರಾಜಕೀಯ

Published On :

ಜಗನ್ನಾಥ ಆರ್. ದೇಸಾಯಿ
ರಾಯಚೂರು: ನಗರಸಭೆಯ ಅಧ್ಯಕ್ಷರ ವಿರುದ್ಧದ ಅವಿಶ್ವಾಸದ ಗೊಂದಲ ಕೊನೆಗೂ ಅಂತಿಮ ಹಂತಕ್ಕೆ ಬಂದು ತಲುಪಿದೆ. ಜು.14ರಂದು ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಸದಸ್ಯರು ಪ್ರಸ್ತಾಪಿಸಿದ ಅವಿಶ್ವಾಸ ಸಭೆ ನಡೆಯಲಿದ್ದು, ಈ ಮೂಲಕ ಹೊಸದಾಗಿ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ.
ಇಲ್ಲಿನ ನಗರಸಭೆ ಅಧ್ಯಕ್ಷೆ ಮಹಾದೇವಿ ನಾಯಕ ಅವರ ವಿರುದ್ಧ ಕಳೆದ ತಿಂಗಳು ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಅವಿಶ್ವಾಸ ಸಭೆ ಕರೆಯಲೂ ಒತ್ತಾಯಿಸಿದ್ದರು. ಅಂದಿನಿಂದ ಆರಂಭಗೊಂಡಿದ್ದ ಗೊಂದಲಕ್ಕೆ ಜು.14ರಂದು ತೆರೆ ಬೀಳಲಿದೆ. ಹಾಗೆಯೇ ಸರ್ಕಾರದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೇರಿದ್ದವರು ಅವಿಶ್ವಾಸದಿಂದ ಹುದ್ದೆ ಕಳೆದುಕೊಂಡಲ್ಲಿ ಮುಂದೇನು ಎಂಬ ಹೊಸ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯೂ ದಟ್ಟವಾಗಿದೆ.
ಇಲ್ಲಿನ ನಗರಸಭೆಯಲ್ಲಿ ಸದ್ಯಕ್ಕೆ ವಿರೋಧ ಪಕ್ಷ ಎಂಬುದೇ ಇಲ್ಲವಾಗಿದೆ. ಎಲ್ಲರೂ ಅಧ್ಯಕ್ಷರ ವಿರುದ್ಧದ ಅವಿಶ್ವಾಸದಲ್ಲಿ ಒಗ್ಗೂಡಿರುವುದು ನಗರಸಭೆಯ ಆಡಳಿತದಲ್ಲಿ ಗೊಂದಲಕ್ಕೆ ದಾರಿ ಮಾಡಿದೆ. ಕೆಲವೇ ಕೆಲ ಸದಸ್ಯರು ಅಧ್ಯಕ್ಷರ ಬೆಂಬಲಕ್ಕಿದ್ದು, ಜು.14ರಂದು ನಡೆಯಲಿರುವ ಅವಿಶ್ವಾಸ ಸಭೆಯು ಭಾರೀ ಮಹತ್ವ ಪಡೆದುಕೊಂಡಿದೆ.
ಮೀಸಲಾತಿಯೇ ಗದ್ದುಗೆ ನೀಡಿತ್ತು: ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧ್ಯಕ್ಷೆ ಮಹಾದೇವಿ ಅವರು ಸರ್ಕಾರ ನಿಗದಿ ಮಾಡಿದ ಮೀಸಲಾತಿಯಂತೆ ಯಾವೊಬ್ಬ ಸದಸ್ಯರ ಬೆಂಬಲವಿಲ್ಲದೇ ಅಧಿಕಾರಕ್ಕೆ ಬಂದಿದ್ದರು. ಈಗ ಮೀಸಲಾತಿಯ ವಿರುದ್ಧವೇ ಸದಸ್ಯರು ಮುಂದಾಗಿರುವುದು ಕೆಲ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಾಗೆಯೇ ಅಭಿವೃದ್ಧಿ ಹಾಗೂ ನಗರಸಭೆಯ ಆಡಳಿತ ನಿರ್ವಹಣೆಯಲ್ಲಿನ ವೈಫಲ್ಯಗಳೂ ಅವಿಶ್ವಾಸ ವ್ಯಕ್ತಪಡಿಸಿದ ಸದಸ್ಯರಿಗೆ ನೆರವಾಗಿವೆ.
ಹೀಗಾಗಿ ಜು.14ರಂದು ನಡೆಯಲಿರುವ ನಗರಸಭೆ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಸಭೆಯತ್ತಲೇ ಎಲ್ಲರ ಗಮನ ನೆಟ್ಟಿದೆ. ನಗರದ ಜನತೆ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವಿಶ್ವಾಸಕ್ಕೆ ಗೆಲುವಾದಲ್ಲಿ ಹೊಸದಾಗಿ ಬಿಕ್ಕಟ್ಟು ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ ಎಂಬ ಮಾತು ಕೇಳಿಬಂದಿದೆ.

ಸಚಿವರ ಭೇಟಿ ವಿಫಲ?
ಅವಿಶ್ವಾಸದ ವಿರುದ್ಧ ಅಧ್ಯಕ್ಷೆ ಮಹಾದೇವಿ ನಾಯಕ ಅವರು ಪೌರಾಡಳಿತ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಪ್ರಯತ್ನ ಫಲ ಕಂಡಿಲ್ಲ ಎಂದು ಹೇಳಲಾಗುತ್ತಿದೆ. ಅವರು ಜಿಲ್ಲಾಧಿಕಾರಿಗಳ ಕಚೇರಿಗೆ ನಡೆಸಿದ ಮೌನ ಮೆರವಣಿಗೆಯೂ ನಿಷ್ಪ್ರಯೋಜಕವಾಗಿದೆ. ಪರಿಣಾಮ ಅವಿಶ್ವಾಸ ವ್ಯಕ್ತಪಡಿಸಿದ ಸದಸ್ಯರ ಕೈ ಮೇಲಾಗಿದೆ ಎಂದೇ ಹೇಳಬಹುದು.
ಪ್ರವಾಸದಲ್ಲಿ ಸದಸ್ಯರು
ಅವಿಶ್ವಾಸ ವ್ಯಕ್ತಪಡಿಸಿದ ಸದಸ್ಯರೆಲ್ಲರೂ ಪ್ರವಾಸಕ್ಕೆ ತೆರಳಿದ್ದು, ಜು.14ರಂದೇ ನಗರಕ್ಕೆ ಮರಳಲಿದ್ದಾರೆ. ಅಂತೆಯೇ ತೆರೆಮರೆಯಲ್ಲಿ ರಾಜಕೀಯ ಚುರುಕುಗೊಂಡಿದೆ. ಅಧ್ಯಕ್ಷೆ ಮಹಾದೇವಿ ನಾಯಕ ಅವರು ಅವಿಶ್ವಾಸ ಸಭೆ ಕರೆಯಲು ಆಸಕ್ತಿ ತೋರದ್ದರಿಂದ ಉಪಾಧ್ಯಕ್ಷರು ಅವಿಶ್ವಾಸ ಸಭೆಯ ದಿನಾಂಕ ನಿಗದಿ ಮಾಡಿದ್ದು, ಸಭೆಯು ತೀವ್ರ ಕುತೂಲಹ ಕೆರಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.