ನಿಲ್ಲದ ಕಲಾಪ ಬಹಿಷ್ಕಾರ, ವಕೀಲರ ನಿಯೋಗಕ್ಕೆ ಸಿಎಂ, ಸಚಿವರ ಸ್ಪಂದನೆ
ಕ.ಪ್ರ. ವಾರ್ತೆ ಗುಲ್ಬರ್ಗ ಜು. 16
ಗುಲ್ಬರ್ಗ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಜಿಲ್ಲೆಗಳ ಹಂಚಿಕೆಯಲ್ಲಿ ಅನ್ಯಾಯವಾಗಿದ್ದು ಹೈ.ಕ. ಪ್ರಾಂತದ ಎಲ್ಲ ಸೌಲಭ್ಯ ಪಡೆಯುತ್ತಿರುವ ಕೊಪ್ಪಳ ಹಾಗೂ ಬಳ್ಳಾರಿಯನ್ನು ಗುಲ್ಬರ್ಗ ಪೀಠಕ್ಕೆ ಜೋಡಿಸಬೇಕು. ಕೆಎಟಿಯನ್ನು ಗುಲ್ಬರ್ಗದಲ್ಲೇ ಸ್ಥಾಪಿಸಬೇಕೆಂದು ಆಗ್ರಹಿಸಿ ಕಳೆದ ಮೂರು ದಿನಗಳಿಂದ ಕೋರ್ಟ್ ಕಲಾಪ ಬಹಿಷ್ಕರಿಸಿ ಹೋರಾಟಕ್ಕೆ ಮುಂದಾಗಿರುವ ವಕೀಲರು ನಗರದಲ್ಲಿ ಬುಧವಾರ ಬೈಕ್ ರ್ಯಾಲಿ ನಡೆಸಿದರು.
ಏತನ್ಮಧ್ಯೆ ನಿಯೋಗದಲ್ಲಿ ಬೆಂಗಳೂರಿಗೆ ತೆರಳಿರುವ ವಕೀಲರು ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜಯಚಂದ್ರ ಅವರಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಜಿಲ್ಲೆಗಳ ಹಂಚಿಕೆಯಲ್ಲಿನ ಅನ್ಯಾಯ ಸರಿಪಡಿಸಬೇಕು, ಕೆಎಟಿ ಗುಲ್ಬರ್ಗದಲ್ಲಿ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಿಎಂ, ಸಚಿವರ ಸ್ಪಂದನೆ: ನಿಯೋಗದಲ್ಲಿರುವ ಹಿರಿಯ ವಕೀಲರಾದ ಎಂ.ಎನ್. ಪಾಟೀಲ್ ಬೆಂಗಳೂರಿನಿಂದ ದೂರವಾಣಿಯಲ್ಲಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ್ದು ತಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾನೂನು ಸಚಿವ ಜಯಚಂದ್ರ ಇಬ್ಬರೂ ತುಂಬ ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಪೀಠಗಳು ಇದ್ದ ಕಡೆಗಳಲ್ಲೆಲ್ಲಾ ಕೆಎಟಿ ಸೇರಿದಂತೆ ಹಲವು ಪ್ರಾಧಿಕಾರಗಳನ್ನು ಸ್ಥಾಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯ ಈ ಸಂಬಂಧ ಆದೇಶವನ್ನೂ ಮಾಡಿದೆ ಎಂದು ವಕೀಲರ ನಿಯೋಗದವರು ಸಿಎಂ ಹಾಗೂ ಕಾನೂನು ಸಚಿವರಿಗೆ ಈ ಆದೇಶದ ಪ್ರತಿಯನ್ನು ಕೊಟ್ಟು ಗಮನ ಸೆಳೆದಿದ್ದಾರೆಂದು ಪಾಟೀಲ್ ಹೇಳಿದ್ದಾರೆ.
ಹೀಗೇಕೆ ಉಭಯ ಧೋರಣೆ?: ಬಳ್ಳಾರಿ ಹಾಗೂ ಕೊಪ್ಪಳ ಇತರೆಲ್ಲ ವಿಚಾರಗಳಲ್ಲಿ ಗುಲ್ಬರ್ಗ ಕಂದಾಯ ವಿಭಾಗದ ಜೊತೆಗಿದ್ದಾರೆ. ಆದರೆ ಹೈಕೋರ್ಟ್ ಪೀಠದ ವಿಷಯ ಬಂದಾಗ ಮಾತ್ರ ಧಾರವಾಡದತ್ತ ವಾಲುತ್ತಿದ್ದಾರೆ. ಇದು ಸರಿಯಾದ ಧೋರಣೆ ಅಲ್ಲ. ಈ ಎರಡೂ ಜಿಲ್ಲೆಗಳು ಹೈ.ಕ. ಭಾಗದಲ್ಲಿರುವುದರಿಂದ ತಕ್ಷಣ ಈ ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರ್ಪಡೆ ಮಾಡಲೇಬೇಕೆಂದೂ ವಕೀಲರ ನಿಯೋಗ ಸಿಎಂ ಹಾಗೂ ಕಾನೂನು ಸಚಿವರಿಗೆ ಮನವರಿಕೆ ಮಾಡಿದ್ದಾರೆ.
ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಭೀಮಳ್ಳಿ, ಉಪಾಧ್ಯಕ್ಷರಾದ ರಮೇಶ ದೊಡ್ಮನಿ, ಹಿರಿಯ ವಕೀಲರಾದ ಪಾಟೀಲ್ ಎಂ.ಎನ್ ಸೇರಿದಂತೆ 12ಕ್ಕೂ ಹೆಚ್ಚು ಸದಸ್ಯರು ನಿಯೋಗದಲ್ಲಿದ್ದಾರೆ.
3ನೇ ದಿನ ಬೈಕ್ ರ್ಯಾಲಿ
ಗುಲ್ಬರ್ಗದಲ್ಲಿರುವ ವಕೀಲರು ಕಲಾಪ ಬಹಿಷ್ಕಾರದ ಮೂರನೇ ದಿನವೂ ಬೈಕ್ ರ್ಯಾಲಿ ನಡೆಸಿ ಗಮನ ಸೆಲೆದಿದ್ದಾರೆ. ವಕೀಲರ ಸಂಘದ ಅನೇಕ ಸದಸ್ಯರು ರ್ಯಾಲಿಯಲ್ಲಿ ಮುಂಚೂಣಿಯಲ್ಲಿದ್ದರು. ಜಂಟಿ ಕಾರ್ಯದರ್ಶಿ ಪಿ.ಎನ್. ಕಪನೂರ ಸೇರಿದಂತೆ ಅನೇಕ ಯುವ ವಕೀಲರು ಇಂದಿನ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

