ಅಡವಿ ಕರ್ಚಿಕಾಯಿ ಬಡವರಿಗೆ ವರದಾನ
ಪಂಪಯ್ಯ ಮಠ
ಮುದಗಲ್: ಅಡವಿ ಕರ್ಚಿಕಾಯಿ ಈಗ ಬಡವರ ಪಾಲಿಗೆ ಸಿಹಿಯಾಗಿದೆ. ದುಡಿಯಲು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದ ಕೂಲಿಕಾರರಿಗೆ, ಕಡುಬಡವರಿಗೆ ಕೈತುಂಬ ಕೆಲಸ ನೀಡುತ್ತಿದೆ. ಜೊತೆಗೆ ಹೊಟ್ಟೆಯನ್ನೂ ತುಂಬಿಸುತ್ತಿದೆ.
ಪಟ್ಟಣ ಸುತ್ತಮುತ್ತಲಿನ ಕಪ್ಪು ಮಣ್ಣಿನ ಜಮೀನಲ್ಲಿ ಪ್ರಾಕೃತಿಕವಾಗಿ ಬೆಳೆದಿರುವ ಕರ್ಚಿಕಾಯಿ ಹರಿಯಲು ಬುದ್ದಿನ್ನಿ, ತೆರಬಾವಿ, ಮಟ್ಟೂರು, ಮುದಗಲ್ ಸೇರಿದಂತೆ ಹಲವು ಗ್ರಾಮಗಳ ಮಹಿಳೆಯರು, ವೃದ್ಧರು, ಶಾಲಾ ಮಕ್ಕಳು ತೆರಳುತ್ತಿದ್ದಾರೆ. ಪ್ರತಿಯೊಬ್ಬರು ನಿತ್ಯ 4ರಿಂದ 10 ಕೆಜಿವರೆಗೆ ಹರಿದು 160- 400ರವರೆಗೆ ಹಣ ಸಂಪಾದಿಸುತ್ತಾರೆ.
ಹೇಗೆ ವರದಾನ?: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದು, ಕೂಲಿಕಾರ್ಮಿಕರು ಕೆಲಸವಿಲ್ಲದೆ ಹೊಟ್ಟೆ ಹೊರೆಯಲು ಪರದಾಡುವಂತಾಗಿತ್ತು. ಇದೇ ವೇಳೆ ಅಡವಿ ಕರ್ಚಿಕಾಯಿ ಬೇಡಿಕೆ ಹೆಚ್ಚಿದ್ದನ್ನರಿತು ಮತ್ತು ಅಡವಿಯಲ್ಲಿ ಪ್ರಕೃತಿದತ್ತವಾಗಿ ಬೆಳೆದ ಕರ್ಚಿಕಾಯಿ ಹರಿದು ತಂದು ಮಾರುವ ಮಾರ್ಗ ಕಂಡುಕೊಂಡರು. ಇದರಿಂದ ಕೆಲಸ ಹಾಗೂ ಅದಕ್ಕೆ ತಕ್ಕ ಕೂಲಿಯೂ ಸಿಕ್ಕಂತಾಗಿ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಗ್ರಾಮ ಪಂಚಾಯಿತಿಯವರು ಉದ್ಯೋಗ ಖಾತ್ರಿ ಕೆಲಸ ಬಂದ್ ಮಾಡಿದ್ದರಿಂದ ಮಳೆಯಿಲ್ಲದೆ ಕೆಲಸವಿಲ್ಲದ ಕಾರಣ ಜೀವನ ಸಾಗಿಸಲು ಅನ್ಯ ಮಾರ್ಗವಿಲ್ಲದ ಕಾರಣ ದಿನನಿತ್ಯ ಹತ್ತಾರು ಕಿಮೀ ಸುತ್ತಿ ಬೆಳಗ್ಗೆ ಬುತ್ತಿಕಟ್ಟಿಕೊಂಡು ಹೋಗಿ ಸಂಜೆವರೆಗೆ ಕರ್ಚಿಕಾಯಿ ಹರಿದು ತಂದು ಮಾರಿದರೆ 300ರಿಂದ 400 ಸಿಗುತ್ತದೆ ಎಂದು ಬುದ್ದಿನ್ನಿ ಗ್ರಾಮದ ಮಹಿಳೆಯರಾದ ಲಕ್ಷ್ಮೀದೇವಿ, ರತ್ನಮ್ಮ ತಿಳಿಸಿದರು.
40 ಕೆಜಿ ಖರೀದಿ: ಕರ್ಚಿಕಾಯಿಯನ್ನು ಹರಿದು ತಂದರೆ ಗಂಗಾವತಿಯಿಂದ ಖರೀದಿದಾರರು ಬಂದು ಪ್ರತಿ ಕೆಜಿಗೆ 40ರಂತೆ ಖರೀದಿ ಮಾಡುತ್ತಾರೆ. ನೂರಾರು ಮಹಿಳೆಯರು ಹರಿದು ತಂದ ಸುಮಾರು 5ರಿಂದ 6 ಕ್ವಿಂಟಲ್ ಕರ್ಚಿಕಾಯಿ ಪ್ರತಿನಿತ್ಯ ಮಾರಾಟವಾಗುತ್ತಿದೆ. 'ಹುಟ್ಟಿಸಿದ ದೇವರು ಹುಲ್ಲು ತಿನಿಸುವುದಿಲ್ಲ' ಎನ್ನುವ ಗಾದೆಯಂತೆ ದೇವರು ದುಡಿಯಲು ಏನಾದರೂ ಒಂದು ದಾರಿ ತೋರಿಸುತ್ತಾನೆ. ಹಾಗೆಯೇ ನಮಗೆ ನೈಸರ್ಗಿಕವಾಗಿ ಬೆಳೆದ ಕರ್ಚಿಕಾಯಿಯನ್ನು ಹರಿದು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸುತ್ತೇವೆಂದು ನೊಂದ ಮಹಿಳೆಯರು ತಿಳಿಸಿದರು. ಅಲ್ಲದೆ ಮುದಗಲ್ ಪಟ್ಟಣದಲ್ಲಿಯೂ ಗಲ್ಲಿಗಲ್ಲಿ ಸಂಚರಿಸಿ 10ಕ್ಕೆ ಒಂದು ಪಾವು ಮಾರಾಟ ಮಾಡುತ್ತಾರೆ. ಹೀಗಾಗಿ ಕಹಿ(ಅಡವಿ) ಕರ್ಚಿಕಾಯಿ ಬಡವರ ಪಾಲಿಗೆ ಸಿಹಿಯನ್ನುಂಟು ಮಾಡಿದೆ. ಶಾಲೆ ರಜೆ ಇದ್ದ ದಿನಗಳಲ್ಲಿ ಮಕ್ಕಳನ್ನೂ ಕರ್ಚಿಕಾಯಿ ಹರಿಯಲು ಕರೆದೊಯ್ಯುತ್ತಾರೆ ಕಾರ್ಮಿಕರು.
ಆರೋಗ್ಯಕ್ಕೂ ಅನುಕೂಲ: ಅಡವಿ ಕರ್ಚಿಕಾಯಿ ತರಕಾರಿಯೂ ಹೌದು. ಇದರ ಸೇವನೆಯಿಂದ ಆರೋಗ್ಯಕ್ಕೆ ಅನುಕೂಲ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಚರ್ಮ ರೋಗ ಸೇರಿದಂತೆ ಅನೇಕ ರೋಗ ನಿರೋಧಕ ಶಕ್ತಿಯನ್ನು ಕರ್ಚಿಕಾಯಿ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ದಿನಗಳಲ್ಲಿ ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಸೇವಿಸುತ್ತಾರೆ. ಇದರಲ್ಲಿ ಇನ್ಸುಲಿನ್ ಅಂಶ ಇರುವುದರಿಂದ ಬಹುಉಪಯೋಗಿ ತರಕಾರಿ ಎಂದು ಕರೆಯಲಾಗುತ್ತಿದೆ. ಮಳೆಗಾಲದಲ್ಲಿ ಕಪ್ಪು ಮಣ್ಣು ಇರುವ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

