ರಾಯಚೂರು

ಎಡದಂಡೆ ನಾಲೆಗೆ ನೀರು ಹರಿಸದಿದ್ದರೆ ಹೋರಾಟ

Published On :

ಸಿಂಧನೂರು: ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡುವುದು ವಾಡಿಕೆ. ಆದರೆ ಈ ಬಾರಿ ಐಸಿಸಿ ಸಭೆ ಕರೆಯುವ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ನಾಲ್ಕನೇ ವಾರದಲ್ಲಿ ನೀರನ್ನು ಬಿಡದಿದ್ದರೆ ಜೆಡಿಎಸ್‌ನಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಎಚ್ಚರಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿಯವರೆಗೆ ನೀರಾವರಿ ಸಚಿವರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ನೀರು ಬಿಡುವ ಬಗ್ಗೆ ಮಾತನಾಡುತ್ತಿಲ್ಲ. ತಕ್ಷಣ ನೀರು ಹರಿಸುವ ಮೂಲಕ ಕುಡಿಯಲು ಮತ್ತು ಬತ್ತ ನಾಟಿ ಮಾಡಲು ಅನುಕೂಲ ಕಲ್ಪಿಸಬೇಕು. ತುಂಗಭದ್ರಾ ಜಲಾಶಯದಲ್ಲಿ 40 ಟಿಎಂಸಿ ನೀರು ಸಂಗ್ರಹವಾಗಿದೆ. 55.60 ಕ್ಯುಸೆಕ್ ಒಳಹರಿವು ಬರುತ್ತಿದೆ. ಆದರೂ ಇಲ್ಲಿಯವರೆಗೆ ನೀರು ಹರಿಸದ ಸರ್ಕಾರದ ಕ್ರಮವನ್ನು ಗಮನಿಸಿದರೆ ಸಾರ್ವಜನಿಕರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ಕಳಪೆ ಕಾಮಗಾರಿ: ನೀರಾವರಿ ಇಲಾಖೆ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೊಂಡಿದ್ದು, ಇಲ್ಲಿಯವರೆಗೆ ಶೇ.40 ಕಾಮಗಾರಿ ಪೂರ್ಣಗೊಂಡಿದೆ. ವಿತರಣಾ ಕಾಲುವೆ 32, 36 ಮತ್ತು 36/1ಗಳ ಆಧುನೀಕರಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ. 16 ಅಡಿ ಮರಂ ಹಾಕಬೇಕಾದ ಸ್ಥಳದಲ್ಲಿ 3 ಇಂಚ್ ಮಾತ್ರ ಹಾಕಲಾಗಿದೆ. 4 ಸೆಂ.ಮೀ. ಹಾಕಬೇಕಾದಲ್ಲಿ 2 ಸೆಂ.ಮೀ. ಎತ್ತರ ಹಾಕಿದ್ದಾರೆ. ಅತ್ಯಂತ ಕೆಟ್ಟ ಮೊರಂನಲ್ಲಿ ಶೇ.10ರಷ್ಟು ಕೆಂಪು ಮಣ್ಣು ಬೆರೆಸಲಾಗಿದೆ. ಇಷ್ಟೆಲ್ಲ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕಾಮಗಾರಿಯಲ್ಲಿ ಗುಣಮಟ್ಟವೂ ಇಲ್ಲ ಮತ್ತು ನಿಗದಿತ ಪ್ರಮಾಣದಲ್ಲಿ ಯಾವುದೇ ಸಲಕರಣೆಗಳನ್ನು ಹಾಕದೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಇದ್ದ ನೀರಾವರಿ ಮಂತ್ರಿಗಳು ಕಾಮಗಾರಿ ವೀಕ್ಷಿಸುತ್ತಿದ್ದರು. ಈ ಬಾರಿ ನೀರಾವರಿ ಸಚಿವರು ಕಾಮಗಾರಿ ವೀಕ್ಷಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದೂ ಆರೋಪಿಸಿದ ಅವರು, ಸದ್ಯಕ್ಕೆ ಕಾಮಗಾರಿ ನಿಲ್ಲಿಸಿ ಕಾಲುವೆಗಳಿಗೆ ನೀರು ಬಿಡಬೇಕು. ಇಲ್ಲದಿದ್ದರೆ ನೀರು ಬಿಡುವ ಅವಸರದಲ್ಲಿ ಕಾಮಗಾರಿ ಅತ್ಯಂತ ಕಳಪೆಯಾಗುವ ಎಲ್ಲ ಮುನ್ಸೂಚನೆಗಳು ಇರುವುದರಿಂದ ಸರ್ಕಾರ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಒತ್ತಾಯಿಸಿದರು.
ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜೆಡಿಎಸ್ ತಾ. ಘಟಕ ಅಧ್ಯಕ್ಷ ಎಂ. ಲಿಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸುಭಾಷ ಫ್ರಾಂಕ್ಲಿನ್, ನಗರ ಘಟಕದ ಅಧ್ಯಕ್ಷ ಜಹೀರುಲ್ಲಾ ಹಸನ್, ಧರ್ಶನಗೌಡ, ದಾಸರಿ ಸತ್ಯನಾರಾಯಣ, ವೆಂಕೋಬ ಬಾವಿಕಟ್ಟಿ ಕಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.