ಶೋಷಿತರ ಒಗ್ಗೂಡಿಸುವಿಕೆ ಅಗತ್ಯ
ಕ.ಪ್ರ. ವಾರ್ತೆ , ರಾಯಚೂರು , ಜೂ. 11
ಸಮಾಜದಲ್ಲಿ ಅಸಮಾನತೆ, ಅಧಿಕಾರ ಪಡೆಯಲು ಭಿನ್ನಾಭಿಪ್ರಾಯ, ಭಿನ್ನ ಚಿಂತನೆ ಹಾಗೂ ಜಾತಿ ವ್ಯವಸ್ಥೆಯಿಂದ ಛಿದ್ರಗೊಂಡಿರುವ ಶೋಷಿತರ ಒಗ್ಗೂಡುವಿಕೆ ಅವಶ್ಯಕ. ಈ ನಿಟ್ಟಿನಲ್ಲಿ ದಲಿತ ಸಂಘಟನೆಯು ಶೋಷಿತರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕಿದೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀವೀರಭದ್ರ ಚನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.
ನಗರದಲ್ಲಿ ಬುಧವಾರ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)ವತಿಯಿಂದ ಪ್ರೊ. ಬಿ. ಕೃಷ್ಣಪ್ಪ ಅವರ ಜನ್ಮದಿನಾಚರಣೆ ಸಂದರ್ಭ ಆಯೋಜಿಸಿದ್ದ ಶೋಷಿತರ ಜಾಗೃತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಶೋಷಣೆ: ಶತಶತಮಾನಗಳಿಂದ ಸಮಾಜದ ಕೆಳವರ್ಗದವರು ಶೋಷಣೆಗೊಳಗಾಗುತ್ತಿದ್ದಾರೆ. ಅಧಿಕಾರ ಪಡೆಯುವ ಸಂದರ್ಭದಲ್ಲಿಯೇ ದಲಿತ ಸಮುದಾಯ ಒಡೆಯಿತು. ದಲಿತರಲ್ಲಿನ ಭಿನ್ನಾಭಿಪ್ರಾಯ ಹಾಗೂ ಅಸಹಾಯಕತೆಯಿಂದಾಗಿಯೇ ದಲಿತ ಸಂಘಟನೆ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿವಿಧ ಕಾರಣಗಳಿಗೆ ದೂರವಾಗಿರುವ ಶೋಷಿತ ಸಮುದಾಯಗಳನ್ನು ಒಗ್ಗೂಡಿಸುವುದಕ್ಕೆ ಮೊದಲು ಆದ್ಯತೆ ನೀಡಬೇಕಿದೆ. ಅಸ್ಪೃಶ್ಯ ಜಾತಿಯವರನ್ನು ದೂರವಿಡುತ್ತಿರುವ ಹಾಗೂ ಶೋಷಿಸುವ ವೈದಿಕ ಪದ್ಧತಿಯವರನ್ನು ದೂರವಿಡಬೇಕಿದೆ. ಸಮಸ್ತ ದಲಿತ ಸಮುದಾಯದವರು ಈ ಕಾರಣಕ್ಕಾದರೂ ಒಂದಾಗಬೇಕೆಂದರು.
ದಲಿತ ಸಂಘಟನೆಗಳು ಸಂಕುಚಿತ ಮನೋಭಾವ ತೊರೆಯಬೇಕಿದೆ. ಬದ್ಧತೆ, ಸಮಾಜದ ಪರ ಚಿಂತನೆ ಮೂಲಕ ಸಂಘಟನೆ ಬಲಪಡಿಸಿ ಶೋಷಿತರ ಪರ ಹೋರಾಟಕ್ಕೆ ಮುಂದಾಗಬೇಕಿದೆ. ಎಲ್ಲಿಯವರೆಗೆ ಶೋಷಿತರು ಜಾತಿ, ಉಪಜಾತಿ ವ್ಯವಸ್ಥೆಯಿಂದ ಹೊರಬರುವುದಿಲ್ಲವೋ ಅಲ್ಲಿವರೆಗೆ ಹೋರಾಟಗಳಿಗೆ ಬೆಲೆ ದೊರೆಯದು ಎಂದು ಎಚ್ಚರಿಸಿದರು.
ಶೋಷಿತರ ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನೂ ಗೌರವಿಸುವ ವಾತಾವರಣ ಬೆಳೆಯಬೇಕು. ಒಗ್ಗಟ್ಟಿನ ಹೋರಾಟವಿಲ್ಲದೇ ಅಧಿಕಾರಕ್ಕೇರುವುದು ಅಸಾಧ್ಯ ಎಂದ ಅವರು, ಹೃದಯವಂತಿಕೆಯ ನಾಯಕತ್ವ ಸಂಘಟನೆಗೆ ಅವಶ್ಯಕ. ಆಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದರು.
ಚಿಂತನೆ ಅವಶ್ಯಕ: ವಿವಿಧೆಡೆಯ ದೇವಾಲಯಗಳಲ್ಲಿ ಮಂತ್ರಗಳ ಪಠಣದ ಬದಲಿಗೆ ಮಹಾನ್ ವ್ಯಕ್ತಿಗಳ ವೈಚಾರಿಕ ಚಿಂತನೆಗಳ ಉಚ್ಛಾರ ಕೇಳಿಸಬೇಕು. ಇದಕ್ಕಾಗಿ ಪ್ರತಿಯೊಂದು ಜಾತಿ, ಲಿಂಗ, ವರ್ಗ ಸಮಾನತೆ ಕಾಣುವುದು ಅವಶ್ಯಕ. ಮಹಿಳೆಯರಿಗೂ ಸಮಾನತೆ ನೀಡುವುದು ಮೊದಲಾಗಬೇಕು ಎಂದು ಕರೆ ನೀಡಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಹಾಸಂಸ್ಥಾನಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬೀದರ್ ಧಮ್ಮನಭೂಮಿಯ ಭಂತೆ ವರಜ್ಯೋತಿ ಸತ್ಯಾನಂದರು, ಮಿಟ್ಟಿಮಲ್ಕಾಪೂರು ಶಾಂತಾಶ್ರಮದ ನಿಜಾನಂದ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಸಮಿತಿ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಡಾ. ಬಾಲಗುರು ಮೂರ್ತಿ, ಜಿಲ್ಲಾ ಸಂಚಾಲಕ ಹನುಮಂತಪ್ಪ ಕಾಕರಗಲ್, ತಾತ್ಯಾರಾವ್ ಕಾಂಬ್ಳೆ, ಹೆಣ್ಣೂರು ಶ್ರೀನಿವಾಸ್, ಎಸ್. ಪ್ರಸಾದ್, ರಂಗಮ್ಮ, ಎಸ್.ಮಾರೆಪ್ಪ, ಮಲ್ಲಪ್ಪ, ಬಿ.ಎನ್. ಗಂಗಾಧರಪ್ಪ, ಎಂ. ವಿರೂಪಾಕ್ಷಿ, ಬಾಬು ಭಂಡಾರಿಗಲ್, ಅಮರೇಶ ಬಲ್ಲಿದವ್, ದಾನಪ್ಪ ನಿಲೋಗಲ್ ಸೇರಿ ಅನೇಕರಿದ್ದರು.
ಇದಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಿಂದ ರಂಗಮಂದಿರದವರೆಗೆ ದಸಂಸ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

