ರಾಯಚೂರು

ಸಮಸ್ಯೆ ಸ್ಪಂದನೆಗೆ ನಮೋಶಿ ವಿಫಲ

Published On :

ಕ.ಪ್ರ. ವಾರ್ತೆ, ರಾಯಚೂರು, ಜೂ. 16
ವಿಧಾನ ಪರಿಷತ್‌ಗೆ ಇದುವರೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದು, ಅವರೇ ಅಧ್ಯಕ್ಷರಾಗಿರುವ ಹೈ.ಕ. ಶಿಕ್ಷಣ ಸಂಸ್ಥೆಯಲ್ಲಿನ ಶಿಕ್ಷಕರಿಗೆ ವೇತನ ಪಾವತಿಸಲೂ ಅವರಿಂದ ಸಾಧ್ಯವಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಟೀಕಿಸಿದರು.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಈಶಾನ್ಯ ಕ್ಷೇತ್ರದ ಚುನಾವಣೆ ಕಣದಲ್ಲಿ ಬಿಜೆಪಿ ಇದುವರೆಗೆ ಅಧಿಕಾರದಲ್ಲಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಯಾವುದೇ ರೀತಿಯ ಪರಿಹಾರ ದೊರಕಿಸಿಲ್ಲ ಎಂಬುದು ಸಾಬೀತಾಗಿದೆ ಎಂದು ದೂರಿದರು.
ಕಾಂಗ್ರೆಸ್ ಅಭ್ಯರ್ಥಿ ಸಜ್ಜು: ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬದಲಾವಣೆಯನ್ನು ಶಿಕ್ಷಕರು ಬಯಸಿದ್ದಾರೆ. ಬಿಜೆಪಿ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲಲ್ಲು ಕಾಂಗ್ರೆಸ್ ಅಭ್ಯರ್ಥಿ ಸಜ್ಜಾಗಿದ್ದಾರೆ. ಕಾಂಗ್ರೆಸ್ ಗೆಲವು ಈ ಬಾರಿಯ ಚುನಾವಣೆಯಲ್ಲಿ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶಾನ್ಯ ಮತಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ನ್ಯಾಯವಾದಿ ಶರಣಪ್ಪ ಮಟ್ಟೂರು ಅವರನ್ನು ಪಕ್ಷ ಕಣಕ್ಕೆ ಇಳಿಸುವ ಮೂಲಕ ಪಕ್ಷವು ಜಿಲ್ಲೆಗೆ ಮೊದಲ ಬಾರಿಗೆ ಆದ್ಯತೆ ನೀಡಿದೆ. ಶಿಕ್ಷಕರ ಜತೆ ಶರಣಪ್ಪ ಮಟ್ಟೂರು ಅವರು ನಿಕಟ ಒಡನಾಟವಿರಿಸಿಕೊಂಡಿದ್ದಾರೆಂದು ಹೇಳಿದರು.
ವೇತನ ತಾರತಮ್ಯ ನಿವಾರಣೆ: ಈಶಾನ್ಯ ಕ್ಷೇತ್ರದ ಜತೆಗೆ ನಿರಂತರ ಸಂಪರ್ಕವಿರಿಸಿಕೊಂಡಿರುವ ಅವರು ಸಮರ್ಥ ಹಾಗೂ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರವಿಡೀ ಈಗಾಗಲೇ ಪ್ರವಾಸ ಕೈಗೊಂಡಿರುವ ಅವರು ಹಾಗೂ ಪಕ್ಷದ ನಾಯಕರು ಶಿಕ್ಷಕರ ಗಮನ ಸೆಳೆದಿದ್ದಾರೆ. ಹಾಗೆಯೇ ಪಕ್ಷದ ಅಭ್ಯರ್ಥಿ ಗೆಲವಿಗೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಶ್ರಮಿಸುತ್ತಿದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯು ಶಿಕ್ಷಕರ ವೇತನ ತಾರತಮ್ಯ ನಿವಾರಣೆ, ವರ್ಗಾವಣೆ ನೀತಿಯಲ್ಲಿನ ಮಾರ್ಪಾಡು ಸೇರಿ ಕಾರ್ಯಸಾಧುವಾಗಬಹುದಾದ ಭರವಸೆಗಳನ್ನು ಶಿಕ್ಷಕರಿಗೆ ನೀಡಿದ್ದು, ಸರ್ಕಾರದ ಜನಪರ ಕಾರ್ಯಗಳನ್ನೂ ಶಿಕ್ಷಕ ಮತದಾರರು ಸೂಕ್ಷ್ಮವಾಗಿ ಗಮನಿಸಿದ್ದು, ಬೆಂಬಲಿಸುವ ವಿಶ್ವಾಸವಿದೆ ಎಂದು ಹೇಳಿದರು.
ಶಿಕ್ಷಕರು ಬಿಜೆಪಿ ತಕ್ಕಪಾಠ ಕಲಿಸಲಿದ್ದಾರೆ: ಕಳೆದ ಅನೇಕ ವರ್ಷಗಳಿಂದ ಬಿಜೆಪಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಶಿಕ್ಷಕರ ಬಹುಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಹೀಗಾಗಿ ಶಿಕ್ಷಕರು ಈಗಲೂ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದ ಅವರು, ಸರಿಯಾದ ವೇದಿಕೆಯಲ್ಲಿ ನಮೋಶಿ ದನಿ ಎತ್ತಿ ಸರ್ಕಾರಗಳ ಮೇಲೆ ಒತ್ತಡ ತರುವಲ್ಲಿ ಎಡವಿದ್ದೇ ಸಮಸ್ಯೆಗಳು ಪರಿಹಾರ ಕಾಣದಿರಲು ಮೂಲ ಕಾರಣ ಎಂದು ಲೇವಡಿ ಮಾಡಿದರು.
ಶಶಿಲ್ ನಮೋಶಿ ಅವರು ಹೈ.ಕ. ಭಾಗದ ಬಹುದೊಡ್ಡ ಶಿಕ್ಷಣ ಸಂಸ್ಥೆಯಾದ ಹೈ.ಕ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದು, ಅಲ್ಲಿನ ಉಪನ್ಯಾಸಕರಿಗೆ ಕಳೆದ 6 ತಿಂಗಳಿನಿಂದ ವೇತನ ಪಾವತಿಸಿಲ್ಲ. ಪರಿಣಾಮ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದಾರೆ. ನಮೋಶಿ ಅವರ ಕಾರ್ಯವೈಖರಿಯಿಂದ ಬೇಸತ್ತ ಶಿಕ್ಷಕರು ಬಿಜೆಪಿ ತಕ್ಕಪಾಠ ಕಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಸಂಸದ ಬಿ.ವಿ. ನಾಯಕ, ಮಾಜಿ ಶಾಸಕ ಎ. ಪಾಪಾರೆಡ್ಡಿ, ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ಮುಖಂಡರಾದ ಪಾರಸ್ಮಲ್ ಸುಖಾಣಿ, ಜಿ. ಬಸವರಾಜರೆಡ್ಡಿ, ಜಯವಂತರಾವ್ ಪತಂಗೆ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.