ಎಂಟೆತ್ತಿನಲ್ಲಿ ಕುಂಟೆತ್ತು ಬಂದೈತೆ ಜ್ವಾಳಾ ನಿಡ್ರವ್ವ
ಪಂಪಯ್ಯ ಮಠ
ಮುದಗಲ್: ಮಣ್ಣೆತ್ತಿನ ಅಮವಾಸ್ಯೆ ಬಂತೆಂದರೆ ಸಾಕು ಗ್ರಾಮೀಣ ಭಾಗದಲ್ಲಿ ಮಕ್ಕಳ ಸಂಭ್ರಮ ಹೆಚ್ಚುತ್ತದೆ. ಅನಾದಿ ಕಾಲದಿಂದಲೂ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಂತೆಯೇ ಮಣ್ಣೆತ್ತಿನ ಅಮವಾಸ್ಯೆ ಕೂಡಾ ಸಾಕ್ಷಿಯಾಗಿದೆ. ಮನೆಯಲ್ಲಿ ಮಣ್ಣಿನಿಂದ ನಿರ್ಮಿಸಿದ ಎತ್ತುಗಳ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದು ಧಾರ್ಮಿಕ ನಂಬಿಕೆ. ಮಣ್ಣೆತ್ತಿನ ಅಮವಾಸ್ಯೆ ಹಳ್ಳಿಗಾಡಿನ ಜನರ ವಿಶೇಷ ಹಬ್ಬ. ಅಮವಾಸ್ಯೆ ಮರುದಿನ ಕರಿ ಎಂದು ಆಚರಣೆ ಮಾಡಲಾಗುತ್ತದೆ. ಮನೆಯಲ್ಲಿ ಪೂಜಿಸಿದ ಮಣ್ಣೆತ್ತುಗಳನ್ನು ಹಿಡಿದ ಮಕ್ಕಳು ಅವುಗಳಿಗೆ ವಿವಿಧ ಬಗೆಯ ವಸ್ತುಗಳಿಂದ ಸಿಂಗರಿಸಿ ಸಂಭ್ರಮಿಸುತ್ತಾರೆ.
ಸಾಮೂಹಿಕವಾಗಿ ದಾಸೋಹ: 'ಎಂಟೆತ್ತಿನಲ್ಲಿ ಕುಂಟೆತ್ತು ಬಂದೈತೆ ಜ್ವಾಳಾ ನಿಡ್ರವ್ವ' ಎಂದು ಮಕ್ಕಳು ಮನೆ ಮನೆಗೆ ತೆರಳಿ ಧಾನ್ಯ ನೀಡಿಸಿಕೊಂಡು ಬರುವುದು ವಾಡಿಕೆ. ಸಾರ್ವಜನಿಕರು ನೀಡಿದ ದವಸಗಳಾದ ಜೋಳ, ಸಜ್ಜೆ, ಗೋಧಿ, ಮುಂತಾದವುಗಳನ್ನು ತಂದು ಬಸವೇಶ್ವರ ದೇವಸ್ಥಾನದಲ್ಲಿ ಕಿಚಡಿ ಮಾಡಿ ಸಾಮೂಹಿಕವಾಗಿ ದಾಸೋಹ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.
ಕುಂಬಾರರ ಮನೆಯಲ್ಲಿ ತಯಾರಿಸುವ ಮಣ್ಣಿನ ಎತ್ತುಗಳನ್ನು ರೈತರು ಮನೆಗೆ ತಂದು ಜಗಲಿ ಮೇಲೆ(ದೇವರ ಕೋಣೆ) ಇರಿಸಿ ಅವುಗಳಿಗೆ 3 ದಿನ ಪೂಜೆ ಸಲ್ಲಿಸಲಾಗುತ್ತಿದೆ. ನಂತರ ಅಮವಾಸ್ಯೆಯಾದ ಮರುದಿನದಂದು ಊರಿನ ಮುಖ್ಯ ದೇವಸ್ಥಾನದಲ್ಲಿ ಗ್ರಾಮದ ಮಕ್ಕಳು ತಾವು ಸಿಂಗರಿಸಿದ ಒಂದೊಂದು ಮಣ್ಣೆತ್ತುಗಳನ್ನು ಪ್ರದರ್ಶಿಸಿ ಖುಷಿಪಡುತ್ತಾರೆ. ನಂತರ ಸಾಮೂಹಿಕವಾಗಿ ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸಿ ಗ್ರಾಮದ ಹೊಳೆ ಅಥವಾ ಬಾವಿಯೊಳಗೆ ವಿಸರ್ಜಿಸಿ ಬರುತ್ತಾರೆ.
ಕರಿ ಹರಿದು ಸಂಭ್ರಮ: ನಂತರ ಗ್ರಾಮದ ಅಗಸಿ ಮುಂದ ಸೇರುವ ಮಕ್ಕಳು ತಾವೆ ಎತ್ತುಗಳಾಗಿ ಕರಿ ಹರಿದು ಸಂಭ್ರಮಿಸುತ್ತಾರೆ. ಅಲ್ಲದೆ ಮನೆಯಲ್ಲಿ ಉಳಿಸಿಕೊಳ್ಳಲಾದ ಇನ್ನೊಂದು ಮಣ್ಣೆತ್ತನ್ನು ಮನೆಯ ಮಾಳಿಗೆ ಮೇಲೆ ಇಡಲಾಗುತ್ತದೆ. ಇದು ಮಳೆಯನ್ನು ಆಹ್ವಾನಿಸುತ್ತದೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ. ಈ ರೀತಿ ಸತತ 3 ದಿನಗಳ ಕಾಲ ಮಣ್ಣೆತ್ತಿನ ಅಮವಾಸ್ಯೆಯನ್ನು ಭಕ್ತಿಯಿಂದ ಆಚರಿಸುವ ಮಕ್ಕಳು ಸೇರಿದಂತೆ ರೈತ ಕುಟುಂಬದವರು ಸಂಭ್ರಮ ಪಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

