ದಲಿತರ ಮೇಲೆ ದೌರ್ಜನ್ಯ; ಪ್ರತಿಭಟನೆ
ರಾಯಚೂರು: ದೇವದುರ್ಗ ತಾಲೂಕಿನ ಜಾಗೀರಜಾಡಲದಿನ್ನಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಫೆ.26ರಂದು ದಲಿತರ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ ತಾವು ವಾಸವಾಗಿದ್ದ ಗುಡಿಸಲಿಗೆ ಬೆಂಕಿಯಿಟ್ಟು ಕಿರುಕುಳ ನೀಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ಸಂಜೆ ವಿವಿಧ ದಲಿತ ಸಂಘಟನೆಗಳ ಪ್ರಮುಖರ ನೇತೃತ್ವದಲ್ಲಿ ಗ್ರಾಮದ ದಲಿತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ ಗ್ರಾಮದ ದಲಿತರು, ದೇವದುರ್ಗ ತಾಲೂಕಿನ ಜಾಗೀರಜಾಡಲದಿನ್ನಿ ಗ್ರಾಮದಲ್ಲಿ ದಲಿತ ವಿದ್ಯಾರ್ಥಿ ಸುರೇಶ್ ಎಂಬಾತ ಕಾಲೇಜಿನಿಂದ ತನ್ನ ಮನೆಗೆ ಸೈಕಲ್ನಲ್ಲಿ ತೆರಳುತ್ತಿದ್ದ. ಆ ವೇಳೆ ಆತನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಅದೇ ಗ್ರಾಮದ ವಾಲ್ಮೀಕಿ ಸಮಾಜದ ಮಲ್ಲಿಕಾರ್ಜುನ, ಲಿಂಗಪ್ಪ ಎಂಬುವವರು ಜಗಳ ತೆಗೆದು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಕೇಸು ದಾಖಲು: ಈ ಬಗ್ಗೆ ದೇವದುರ್ಗಕ್ಕೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ತಡೆದು ಹಲ್ಲೆ ಮಾಡಿದ್ದಲ್ಲದೇ ಕೇಸು ದಾಖಲಿಸಿದಂತೆ ಜೀವ ಬೆದರಿಕೆ ಹಾಕಿದ್ದಾರೆ. ಆದರೂ ದೂರು ದಾಖಲಿಸಿದ್ದರಿಂದ ಫೆ. 28ರಂದು ಶಾಸಕರ ಪರ ವ್ಯಕ್ತಿ ರಮೇಶನಾಯಕ ಎಂಬಾತನೊಂದಿಗೆ ಗ್ರಾಮದ ದಲಿತರ ಕೇರಿಗೆ ದಾಳಿ ಮಾಡಿದ 28ಜನರ ತಂಡವು ದಲಿತರ ಮೇಲೆ ಹಲ್ಲೆ ಮಾಡಿ ಗುಡಿಸಲಿಗೆ ಬೆಂಕಿಯಿಟ್ಟಿದೆ ಎಂದು ದೂರಿದ್ದಾರೆ.
ಜೀವ ಭಯ: ದಲಿತರಿಗೆ ಗ್ರಾಮದಲ್ಲಿ ಸುರಕ್ಷಿತ ವಾತಾವರಣವಿಲ್ಲವಾಗಿದೆ. ದಲಿತ ಯುವಕರನ್ನು ಗ್ರಾಮದೊಳಕ್ಕೆ ಬರದಂತೆ ತಾಕೀತು ಮಾಡುವ ಕಾರ್ಯ ಮಾಡುತ್ತಿದ್ದು, ಇದರಿಂದ ಗ್ರಾಮದಲ್ಲಿರುವ ದಲಿತ ಮಹಿಳೆಯರು ಜೀವ ಭಯದಲ್ಲಿಯೇ ದಿನದೂಡುತ್ತಿದ್ದಾರೆ. ಕಾರಣ ಕೂಡಲೇ ದೂರಿನಲ್ಲಿ ಸೂಚಿಸಿರುವವ ಆರೋಪಿಗಳನ್ನು ಬಂಧಿಸಬೇಕು. ದಲಿತರ ಮೇಲೆ ದೌರ್ಜನ್ಯ ಎಸಗಿದವರನ್ನು ಗಡಿಪಾರು ಮಾಡಬೇಕು. ಗ್ರಾಮದ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು. ಜಾಗೀರಜಾಡಲದಿನ್ನಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಹೋರಾಟಗಾರರು ಒತ್ತಾಯಿಸಿದರು.
ಮುಖಂಡರಾದ ಜೆ.ಬಿ. ರಾಜು, ಅಂಬಣ್ಣ ಅರೋಲಿಕರ್, ಎಂ.ಆರ್.ಭೇರಿ, ಅಬ್ರಾಹಂ ಹೊನ್ನಟಗಿ, ಎಂ.ಈರಣ್ಣ, ಕೆ.ಪಿ. ಅನಿಲಕುಮಾರ್, ವಿಜಯರಾಣಿ, ಜನಾರ್ದನ ಹಳ್ಳಿಬೆಂಚಿ ಸೇರಿದಂತೆ ಗ್ರಾಮದ ದಲಿತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

