ಅವೈಜ್ಞಾನಿಕ ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ರಾಯಚೂರು ಮಾ.3
ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಕಂಪನಿಗೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹಟ್ಟಿ, ಕೋಠಾ, ಮೇದಿನಾಪುರ ಭೂ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕೂಡಲೇ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ವರದಿಯನ್ನು ಕೂಡಲೇ ಹಿಂಪಡೆಯಬೇಕು. ರೈತರ ಮಧ್ಯಸ್ಥಿಕೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ರೈತರ ಸಭೆ ರದ್ದುಗೊಳಿಸಲಾಗಿತ್ತು: ಲಿಂಗಸ್ಗೂರು ತಾಲೂಕಿನ ಈ ಮೂರೂ ಗ್ರಾಮಗಳ ರೈತರಿಗೆ ಸಹಾಯಕ ಆಯುಕ್ತರ ಕಚೇರಿಯಿಂದ 2012ರ ಆ.23ರಂದು ಭೂಸ್ವಾಧೀನದ ಬಗ್ಗೆ ನೋಟಿಸ್ ನೀಡಲಾಗಿದೆ. ಅದೇ ವರ್ಷದ ಸೆ.21ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಗ್ಗೆ ಚರ್ಚಿಸಲು ತೆರಳಿದ ರೈತರೊಂದಿಗಿನ ಸಭೆ ರದ್ದುಗೊಳಿಸಲಾಗಿದೆ ಎಂದು ದೂರಿದರು.
ನಂತರ ತರಾತುರಿಯಲ್ಲಿ ಪ್ರಕ್ರಿಯೆ ನಡೆಸಿ ಆಕ್ಷೇಪಣೆಗೆ ಅವಕಾಶ ಕಲ್ಪಿಸದೇ ಸರ್ಕಾರಕ್ಕೆ ಸ್ವಾಧೀನ ಪ್ರಕ್ರಿಯೆಗೆ ವರದಿ ಸಲ್ಲಿಸಲಾಗಿದೆ. ಸದ್ಯ ಸಲ್ಲಿಸಿರುವ ವರದಿಯಂತೆ ಪ್ರತಿ ಎಕರೆಗೆ ಕೇವಲ 56500 ದರ ನಿಗದಿ ಮಾಡಲಾಗಿದೆ. ಮನೆ ಪ್ಲಾಟುಗಳೇ ಇಂದಿನ ದಿನಮಾನದಲ್ಲಿ ಲಕ್ಷಾಂತರ ಬೆಲೆ ಬಾಳುತ್ತಿದ್ದು, ಅಧಿಕಾರಿಗಳು ರೈತರ ಜಮೀನಿಗೆ ಕಡಿಮೆ ಬೆಲೆ ಕಟ್ಟುವ ಕೆಲಸ ಮಾಡಿದ್ದಾರೆಂದು ಆರೋಪಿಸಿದ ಅವರು, ಅಧಿಕಾರಿಗಳ ದರ ನಿಗದಿ ನಿರ್ಧಾರ ತೀರಾ ಅವೈಜ್ಞಾನಿಕವಾಗಿದೆ ಎಂದು ಟೀಕಿಸಿದರು.
ರೈತರೊಂದಿಗೆ ಚರ್ಚಿಸಿ: ಕಾರಣ 2014ರ ಕಾಯಿದೆಯಂತೆ ಪರಿಹಾರ ನಿಗದಿ ಮಾಡಬೇಕು. ಭೂಸ್ವಾಧೀನ ನೋಟಿಸ್ ನೀಡುವ ಮುಂಚೆ ಇದ್ದಂಥ ರೈತರ ಪಹಣಿಯಲ್ಲಿನ ಹೆಸರಿನವರಿಗೆ ಚೆಕ್ ನೀಡಬೇಕು. ನಿಗದಿ ಮಾಡಿದ ಭೂಮಿಯ ಹಳೆಯ ದರ ರದ್ದುಗೊಳಿಸಿ ನೂತನ ದರ ನಿಗದಿ ಮಾಡುವ ಮೊದಲು ರೈತರೊಂದಿಗೆ ಆ ಬಗ್ಗೆ ಚರ್ಚಿಸಬೇಕೆಂದು ಆಗ್ರಹಿಸಿದರು.
ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಹಟ್ಟಿ ಚಿನ್ನದಗಣಿ ಆಡಳಿತ, ಸಹಾಯಕ ಆಯುಕ್ತ ಹಾಗೂ ರೈತರ ಮುಖಂಡರನ್ನು ಒಳಗೊಂಡ ತ್ರಿಪಕ್ಷೀಯ ಸಭೆ ನಡೆಸಬೇಕು. ಗಣಿ ಕಂಪನಿಯಲ್ಲಿ ಪ್ರತಿ ಎರಡು ಎಕರೆ ಜಮೀನಿಗೆ ಪ್ರತಿಯಾಗಿ ಒಬ್ಬರಿಗೆ ಕೆಲಸ ನೀಡಬೇಕು. ಈ ವಿಚಾರದಲ್ಲಿ ಅಸಡ್ಡೆ ಪ್ರದರ್ಶಿಸಿದರೆ ಭೂಸಂತ್ರಸ್ತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು. ಸಮಿತಿ ಗೌರವಾಧ್ಯಕ್ಷ ಗುಂಡಪ್ಪ ಸಾಹುಕಾರ, ಅಧ್ಯಕ್ಷ ಕೃಷ್ಣಪ್ಪ ಮೇದಾರ, ರಂಗನಾಥ ಹಟ್ಟಿ, ಎನ್.ಸ್ವಾಮಿ, ಮಹಿಬೂಬ್ ಸಾಬ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

