ಹೆಚ್ಚುವರಿ ಯಾತ್ರಾ ಶುಲ್ಕ ವಸೂಲಿಗೆ ವಿರೋಧ
ಕ.ಪ್ರ. ವಾರ್ತೆ ರಾಯಚೂರು ಮಾ.3
ದೇಶದಲ್ಲಿ ಹಿಂದೂಗಳು ವಿವಿಧ ಧಾರ್ಮಿಕ ಕೇಂದ್ರಗಳಿಗೆ ಕೈಗೊಳ್ಳುವ ಯಾತ್ರೆ ವೇಳೆ ಅನಗತ್ಯ ಶುಲ್ಕ, ಹೆಚ್ಚುವರಿ ಬಾಡಿಗೆ ವಸೂಲು ಮಾಡುವ ಕ್ರಮವನ್ನು ಖಂಡಿಸಿರುವ ಹಿಂದೂ ಜನಜಾಗೃತಿ ಸಮಿತಿ ಅಂಥ ಶುಲ್ಕ ರದ್ದುಗೊಳಿಸುವಂತೆ ಆಗ್ರಹಿಸಿದೆ.
ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹಿಂದೂಗಳು ಕೈಗೊಳ್ಳುವ ಕುಂಭ ಮೇಳ, ಅಮರನಾಥ ಯಾತ್ರೆ, ಚಾರಧಾಮ ಸೇರಿ ವಿವಿಧ ತೀರ್ಥಯಾತ್ರೆಗಳ ಸಂದರ್ಭದಲ್ಲಿ ಸಂಚಾರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ಅಂಥ ಸಂಚಾರ ಸೌಲಭ್ಯ ಬಳಕೆ ಮಾಡುವವರ ಮೇಲೆ ಹೆಚ್ಚುವರಿ ತೆರಿಗೆ, ಶುಲ್ಕ, ಬಾಡಿಗೆ ವಸೂಲು ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಪ್ರವಾಸ ಬಾಡಿಗೆ ಹೇರಿತ್ತು..: ಯಾತ್ರಾ ಸ್ಥಳಕ್ಕೆ ವಿಶೇಷ ಬಸ್ಸುಗಳ ಸಂಚಾರ ಆರಂಭಿಸುವ ಸರ್ಕಾರ ಅವುಗಳಲ್ಲಿ ಪ್ರಯಾಣಿಸುವವರಿಂದ ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿದೆ. ಕೆಲವೆಡೆ ಯಾತ್ರಿಕರಿಂದ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕಳೆದ ವರ್ಷ ಕುಂಭಮೇಳಕ್ಕೆ ತೆರಳಿದ್ದ ಭಕ್ತರಿಂದ ರೇಲ್ವೆ ಇಲಾಖೆಯು ಪ್ರವಾಸ ಬಾಡಿಗೆ ಹೇರುವ ಮೂಲಕ ತನ್ನ ನಷ್ಟ ಭರಿಸುವ ಕಾರ್ಯ ಮಾಡಿತ್ತೆಂದು ಟೀಕಿಸಿದರು.
ಅದೇ ರೀತಿ ಕಳೆದ ಮೂರು ವರ್ಷಗಳಿಂದ ಪವಿತ್ರ ಧಾರ್ಮಿಕ ಯಾತ್ರೆ ಚಾರಧಾಮ ಯಾತ್ರೆಯ ಪ್ರವಾಸಿ ಶುಲ್ಕವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. ಆಂಧ್ರದ ರಾಜರಾಜೇಶ್ವರಿ ಮಂದಿರಕ್ಕೆ ವಿಶೇಷ ಬಸ್ ಓಡಿಸಿ ಭಕ್ತರಿಂದ ದುಪ್ಪಟ್ಟು ಹಣ ಪಡೆಯಲಾಗಿದೆ. ಹಿಂದೂಗಳ ವಿಚಾರದಲ್ಲಿ ಇಂಥ ಧೋರಣೆ ಪ್ರದರ್ಶಿಸುವ ಸರ್ಕಾರವು ಮತ ಬ್ಯಾಂಕ್ ಓಲೈಕೆಗೆ ಮತ್ತೊಂದೆಡೆ ಹಜ್ ಯಾತ್ರೆಗೆ ತೆರಳಲು ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದರು.
ಆಗ್ರಹ: ಕಾರಣ ಕೂಡಲೇ ಇಂಥ ಹೆಚ್ಚುವರಿ ಶುಲ್ಕ, ಬಾಡಿಗೆ, ಪ್ರಯಾಣ ದರ ಪಡೆಯುವುದಕ್ಕೆ ತಡೆಯೊಡ್ಡಬೇಕು. ಹಿಂದೂ ಭಕ್ತರ ತೀರ್ಥಯಾತ್ರೆಗೆ ರಿಯಾಯಿತಿ ದರದಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ದೇವಸ್ಥಾನ ಸರ್ಕಾರೀಕರಣ ಕೈಬಿಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭ ಸಮಿತಿಯ ಪ್ರಮುಖರಾದ ಕೃಷ್ಣವೇಣಿ, ಜ್ಯೋತಿ, ಸುವರ್ಣ, ಬಿ.ವಿಜಯಲಕ್ಷ್ಮೀ, ಸರಳಾ, ಜಯ ಪಾಟೀಲ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

