ರಾಯಚೂರು

ಸುದ್ದಿ ಸಂಕ್ಷೇಪ

Published On :

ಅಪಾಯಕ್ಕೆ ಆಹ್ವಾನ!
ಸಿಂಧನೂರು: ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ಜೆಸ್ಕಾಂ ಇಲಾಖೆಯ ವಿದ್ಯುತ್ ತಂತಿಗಳು ಜೋತುಬಿದ್ದಿದ್ದು ಯಾವ ಸಂದರ್ಭದಲ್ಲಿ ಅಪಾಯವನ್ನುಂಟು ಮಾಡುತ್ತವೆಯೋ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಹಲವಾರು ಬಾರಿ ಗಾಳಿ ರಭಸಕ್ಕೆ ವಿದ್ಯುತ್ ತಂತಿಗಳು ಜೋತುಬಿದ್ದಿದ್ದು ಆಗಾಗ್ಗೆ ದುರಸ್ತಿ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜೋತುಬಿದ್ದಿರುವ ತಂತಿಗಳನ್ನು ಸರಿಪಡಿಸಲು ಇಲಾಖೆಯ ಯಾವ ನೌಕರರೂ ಮುತುವರ್ಜಿ ವಹಿಸದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ತಂತಿಗಳು ಹರಿದುಬಿದ್ದಾಗ ಹೊಸ ತಂತಿಗಳನ್ನು ಹಾಕದೆ ಅದೇ ತಂತಿಗಳನ್ನು ಜೋಡಣೆ ಮಾಡಿ ಹಾಕಿರುವುದರಿಂದ ಮೇಲಿಂದ ಮೇಲೆ ಹರಿದುಬೀಳುತ್ತಿವೆ ಎನ್ನುವುದು ಗ್ರಾಮಸ್ಥರ ಆರೋಪ. ಸುಮಾರು 30 ವರ್ಷಗಳ ಹಿಂದೆ ಹಾಕಿರುವ ವಿದ್ಯುತ್ ತಂತಿಗಳನ್ನು ಬದಲಾವಣೆ ಮಾಡದಿರುವುದರಿಂದ ಈ ತಂತಿಗಳು ಅಲ್ಲಲ್ಲಿ ಜೋತು ಬೀಳುತ್ತಿವೆ. ತಕ್ಷಣ ಹೊಸ ತಂತಿಗಳನ್ನು ಜೋಡಿಸದಿದ್ದರೆ ಜನರಾಗಲಿ, ಜಾನುವಾರುಗಳಾಗಲಿ ಅಪಘಾತಕ್ಕೆ ತುತ್ತಾಗುವುದರಲ್ಲಿ ಅನುಮಾನವಿಲ್ಲ ಎಂದು ಹತ್ತಿಗುಡ್ಡ ಗ್ರಾಮದ ಚನ್ನಬಸವ, ಶರಣಪ್ಪ, ಅಮರೇಗೌಡ, ಯಂಕಪ್ಪ ಮತ್ತಿತರರು ತಿಳಿಸಿದ್ದಾರೆ. ವಿದ್ಯುತ್ ಅವ್ಯವಸ್ಥೆಯ ಕುರಿತಾಗಿ ಜೆಸ್ಕಾಂ ಅಧಿಕಾರಿಗಳಿಗೆ ಐದಾರು ಬಾರಿ ಮನವಿ ಸಲ್ಲಿಸಿದರೂ ಪ್ರತಿಫಲ ಶೂನ್ಯವಾಗಿದೆ. ಯಾವುದಾದರೂ ಅಪಘಾತ ಸಂಭವಿಸಿದಲ್ಲಿ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಎನ್‌ಎಸ್‌ಎಸ್ ಶ್ರಮದಾನ
ಸಿಂಧನೂರು: ತಾಲೂಕಿನ ಸಾಸಲಮರಿ ಗ್ರಾಮದಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ವಾರ್ಷಿಕ ವಿಶೇಷ ಶಿಬಿರದಲ್ಲಿ ಶಿಬಿರಾರ್ಥಿಗಳು ಶ್ರಮದಾನ ಮಾಡುವ ಮೂಲಕ ಗ್ರಾಮಸ್ಥರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸಿದರು. ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಸಂಜೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್‌ಎಸ್‌ಎಸ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹಾಗೂ ದುದ್ದುಪೂಡಿ ಮಹಿಳಾ ಕಾಲೇಜ್ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಭಾರತ ಹೆಚ್ಚಿನ ಸಂಖ್ಯೆಯ ಯುವಕರಿಂದ ಕೂಡಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಯುವ ಸಮೂಹ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೆ ಆದರೆ ಅಭಿವೃದ್ಧಿಯಲ್ಲಿ ಭಾರೀ ಬದಲಾವಣೆ ಸಾಧಿಸಬಹುದಾಗಿದೆ ಎಂದರು. ಶಾರದಾ ಮಹಿಳಾ ಕಾಲೇಜು ಪ್ರಾಚಾರ್ಯ ಬಸವರಾಜ ಬಾದರ್ಲಿ ಮಾತನಾಡಿದರು. ಹೊನ್ನೂರು ಹುಸೇನ್, ಉಪನ್ಯಾಸಕ ಹನುಮಂತಪ್ಪ ಮಾತನಾಡಿದರು. ಗ್ರಾಮದ ಆದನಗೌಡ ಸಾಸಲಮರಿ, ರೇವಪ್ಪ, ಹಿರೇಹುಲುಗಯ್ಯ, ಹಡಗಲ್ ಭೀಮಣ್ಣ, ಹನುಮಂತಪ್ಪ ಹೊಸಮನಿ, ಚನ್ನಪ್ಪ ಚಲುವಾದಿ, ಶಿವಪ್ಪ ಇದ್ದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.