ರಾಯಚೂರು

ಅಭಿವೃದ್ಧಿ ವಂಚಿತ ಗುಡಗುಂಟಿ ಅಮರೇಶ್ವರ ಸುಕ್ಷೇತ್ರ

Published On :

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಮಾ.7
ದಕ್ಷಿಣ ಭಾರತದ ಅತ್ಯಂತ ಪವಿತ್ರ ಕ್ಷೇತ್ರ ಗುಡಗುಂಟಿ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ವಂಚಿತಗೊಂಡಿದ್ದು, ಅಭಿವೃದ್ಧಿ ಯಾರಿಂದ ಸಾಧ್ಯವೆಂಬ ಪ್ರಶ್ನೆ ಭಕ್ತರಲ್ಲಿ ಮೂಡಿಸಿದೆ.
ಹೈದ್ರಾಬಾದ್ ಕರ್ನಾಟಕ ಪ್ರದೇಶದ ಬಹುತೇಕ ರಾಜಕೀಯ ಪಕ್ಷಗಳ ನಾಯಕರು, ಗಣ್ಯರು, ಮುಖಂಡರು ವಿವಿಧ ಚುನಾವಣೆಗಳಿಗೆ ಸ್ಪರ್ಧಿಸುವ ಮೊದಲು ದೇವರ ದರ್ಶನಾಶೀರ್ವಾದ ಪಡೆದು ಚುನಾವಣೆಯಲ್ಲಿ ಗೆಲ್ಲಿಸುವಂತೆ ಪ್ರಾರ್ಥಿಸುತ್ತಾರೆ. ಜಯಗಳಿಸಿದ ನಂತರ ಉನ್ನತ ಸ್ಥಾನ ಹೊಂದಲು ಆಶೀರ್ವಾದ ಪಡೆಯುವುದೂ ಸಾಮಾನ್ಯ.
ಆದರೆ ಬೇಡಿಕೆ ಈಡೇರಿದಾಗ ಅಧಿಕಾರ ಪಡೆದ ಜನಪ್ರತಿನಿಧಿಗಳು ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಅಭಿವೃದ್ಧಿಯತ್ತ ಕಿಂಚಿತ್ತೂ ಗಮನ ಹರಿಸದಿರುವುದು ಈ ಭಾಗದ ಜನರ ದುರಂತ ಎಂದೇ ಹೇಳಬಹುದು.
ದ್ವಾಪರಯುಗದ ಲಿಂಗ: ಸುಕ್ಷೇತ್ರದ ಲಿಂಗವು ದ್ವಾಪರಯುಗದ ಗೋಕರ್ಣ ಮಹಾಬಲೇಶ್ವರ ಹಾಗೂ ರಾಮೇಶ್ವರದ ರಾಮನಾಥ ಲಿಂಗದ ಸಮಕಾಲೀನದ್ದು ಎಂದು ಪುರಾಣ ಇತಿಹಾಸದಿಂದ ತಿಳಿದು ಬರುತ್ತದೆ. ನಂತರ ಸಾಕ್ಷಾತ್ ಶಿವನು ಬಾಲಕನ ರೂಪದಲ್ಲಿ ಧರೆಗಿಳಿದು ಬಂದು ಆದಯ್ಯ ಮಾಳಗುಂಡಮ್ಮ ದಂಪತಿಗಳ ಸಾಕು ಮಗನಾಗಿ ಅನೇಕ ಪವಾಡ ಸೃಷ್ಟಿಸಿ ಅಮರೇಶ್ವರ ಎಂಬ ಅಭಿದಾನದಿಂದ ಲಿಂಗುವಿನಲ್ಲಿ ಶಾಶ್ವತವಾಗಿ ನೆಲೆಸಿದನೆಂದು ತಿಳಿದು ಬರುತ್ತದೆ.
ಕಪಿಲ ಮಹರ್ಷಿಗೆ ಷಟಸ್ಥಲ ಸಿದ್ಧಾಂತ ಉಪದೇಶ ಮಾಡಿದ ಜಗದ್ಗುರು ರೇಣುಕಾಚಾರ್ಯರು ವಾಸವಿದ್ದ ಸ್ಥಳ ಹಾಗೂ ಕಲಬುರ್ಗಿ ಶರಣಬಸವೇಶ್ವರರ ಜಾವಳ ಕಾರ್ಯ ಇಲ್ಲಿಯೇ ನೆರವೇರಿದ ಸ್ಥಳವಾಗಿದೆ. ಹುಬ್ಬಳ್ಳಿ ಸಿದ್ದಾರೂಢರು ದೇವರಭೂಪೂರ ಬೃಹನ್ಮಠದ ಗಜದಂಡ ಶಿವಾಚಾರ್ಯರರ ಬಳಿ 12 ವರ್ಷಗಳ ಕಾಲ ಇದ್ದರು.
ಅವಸಾನದತ್ತ ಪೌರಾಣಿಕ, ಐತಿಹಾಸಿಕ ಕ್ಷೇತ್ರ: ಸುಕ್ಷೇತ್ರದ ಸುತ್ತಮುತ್ತ ಅಡಿಕೇಶ್ವರ, ಮಡಿಕೇಶ್ವರ, ಕಪಿಲೇಶ್ವರ, ಕಡ್ಲೇಶ್ವರ, ಅಗಸ್ತ್ಯ, ಋಷಿಮುನಿಗಳು ತಪಸ್ಸು ಗೈದ ಗುಹೆಗಳಿದ್ದು, ಕೆಲ ಗುಹೆಗಳು ಮರೆಯಾಗಿವೆ. ಕಪಿಲ ಮಹರ್ಷಿಗಳು ತಪಸ್ಸುಗೈದ ಬೆಟ್ಟವನ್ನು ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಕಾಣಬಹುದಾಗಿದೆ. ಯರಡೋಣಿ ಗ್ರಾಮದ ಬಳಿ ಇರುವ ರಾಮತೀರ್ಥ ದ್ವಾಪರ ಯುಗದ ಇತಿಹಾಸ ಹೇಳುತ್ತದೆ. ಶ್ರೀರಾಮಚಂದ್ರ ತನ್ನ ಬಾಣವನ್ನು ಭೂಮಿಗೆ ಬಿಟ್ಟಾಗ ಗಂಗೆ ಕಲ್ಲು ಸಂದುಗಳ ಮೂಲಕ ಹರಿಯುತ್ತಿರುವ ಸ್ಥಳವನ್ನು ಇಂದಿಗೂ ಕಾಣಬಹುದಾಗಿದೆ. ಇಂತಹ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳು ಅಭಿವೃದ್ಧಿ ಇಲ್ಲದೆ ಜನಮಾನಸದಿಂದ ದೂರವಾಗುವ ಕಾಲ ಸಮೀಪಿಸುತ್ತಿದೆ.
ರಾಜ್ಯ ಹೈಕೋರ್ಟ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್‌ರವರು ಅಮರೇಶ್ವರ ದೇವರ ಪರಮ ಭಕ್ತರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ದೇವಸ್ಥಾನ ಸಮಿತಿ ಅಧಿಕಾರಿಗಳ ಜೊತೆ ಚರ್ಚಿಸಿ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದ್ದರು.
ಅಭಿವೃದ್ಧಿಗೆ ಚಾಲನೆ ಸಿಕ್ಕಿಲ್ಲ: ಇದರ ನೀಲನಕ್ಷೆ ತಯಾರಿಸಿ ಭೂಸ್ವಾಧೀನ ಕುರಿತು ಚರ್ಚಿಸಿದ್ದರು. ದೇವಸ್ಥಾನ ಸಮಿತಿ ಹಲವು ಸದಸ್ಯರು ನಂಜನಗೂಡಿಗೂ ತೆರಳಿ ಅಧ್ಯಯನ ನಡೆಸಿ ಬಂದಿದ್ದರು. ಆದರೆ ಈ ಯೋಜನೆ 4-5 ವರ್ಷ ಕಳೆದರೂ ಇದುವರೆಗೆ ಚಾಲನೆ ದೊರೆತಿಲ್ಲ.
ಕಳೆದ 2009ರಲ್ಲಿ ನೆರೆ ಹಾವಳಿ ಸಂಭವಿಸಿದಾಗ ಅಮರೇಶ್ವರ ದೇವಸ್ಥಾನ ಸಂಪೂರ್ಣ ನೀರಲ್ಲಿ ಮುಳುಗಿ ಗುಡ್ಡದ ಕಲ್ಲು ಬಂಡೆಗಳು ಗರ್ಭಗುಡಿಯ ಸುತ್ತ ತುಂಬಿಕೊಂಡಿದ್ದವು. ಹಲವಾರು ಕಟ್ಟಡಗಳು ಕುಸಿದು ರಸ್ತೆಗಳು ಹಾಳಾಗಿದ್ದವು. ಪುಣ್ಯಸ್ನಾನದ ಹೊಂಡ, ಮಂಟಪಗಳೆಲ್ಲ ಅನಾಹುತಕ್ಕೀಡಾಗಿದ್ದವು. ಆ ವೇಳೆ ಪ್ರಕೃತಿ ವಿಕೋಪ ಅಥವಾ ನೆರೆ ಪರಿಹಾರ ಯೋಜನೆಯಡಿ ನಯಾಪೈಸೆ ಅಭಿವೃದ್ಧಿಗೆ ಬಿಡುಗಡೆಯಾಗದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಉದಾಹರಣೆಯಾಗಿದೆ.
ಪ್ರಗತಿಯಲ್ಲಿ ದಾಸೋಹ ಮಂಟಪ: ಪ್ರಸ್ತುತ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ್ ಅವರು ಭಕ್ತರಿಂದ ದೇಣಿಗೆ ಪಡೆದು ಸುಕ್ಷೇತ್ರದಲ್ಲಿ ಒಂದು ಸಾವಿರ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುವ ಬೃಹತ್ ದಾಸೋಹ ಮಂಟಪ ನಿರ್ಮಿಸಲು ಮುಂದಾಗಿದ್ದಾರೆ. ಉದ್ಯಾನವನ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.
ಆಗಬೇಕಿರುವ ಅಭಿವೃದ್ಧಿ: ಇನ್ನು ಭಕ್ತರ ಬೇಡಿಕೆಯಂತೆ ರಾಜ್ಯ ಹೆದ್ದಾರಿ ಕ್ರಾಸ್‌ನಿಂದ ಅಮರೇಶ್ವರ ಸುಕ್ಷೇತ್ರದವರೆಗೆ ದ್ವಿಪಥ ರಸ್ತೆ ನಿರ್ಮಾಣ, ಸುಲಭ ದರ್ಶನ ವ್ಯವಸ್ಥೆ, ಪೂಜಾ ಕಾರ್ಯಕ್ಕೆ ಪ್ರತ್ಯೇಕ ಸ್ಥಳಾವಕಾಶ, ಭಕ್ತರಿಗಾಗಿ ಕೊಠಡಿಗಳ ನಿರ್ಮಾಣ, ಬೃಹತ್ ಮಹಾದ್ವಾರ, ಅರಣ್ಯ ಅಭಿವೃದ್ಧಿಕರಣ ಸೇರಿದಂತೆ ಉದ್ದೇಶಿತ ನಂಜನಗೂಡು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ.
ಅಮರೇಶ್ವರ ಜಾತ್ರಾ ಮಹೋತ್ಸವ ಮಾ.16ರಂದು ಹೋಳಿ ಹುಣ್ಣಿಮೆ ದಿನದಂದು ಜರುಗಲಿದ್ದು, ಈ ವೇಳೆ ಸುಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವುದು, ಸಾರಿಗೆ ವ್ಯವಸ್ಥೆ, ರಸ್ತೆ, ಕುಡಿವ ನೀರು, ವಿದ್ಯುತ್ ಸೌಕರ್ಯ, ದ್ವಿಚಕ್ರ, ಲಘು ಹಾಗೂ ಭಾರಿ ವಾಹನಗಳಿಗೆ ಪ್ರತ್ಯೇತ ನಿಲುಗಡೆ ವ್ಯವಸ್ಥೆ, ವೈದ್ಯಕೀಯ ಕೇಂದ್ರ ಸ್ಥಾಪನೆ, ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕಿದೆ. ಒಟ್ಟಾರೆ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತವರ್ಜಿ ವಹಿಸಬೇಕೆಂಬುದು ಭಕ್ತರ ಆಶಯವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.