ಎಲ್ಲರೂ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಿ
ಬಸವಕಲ್ಯಾಣ: ಏಪ್ರಿಲ್ 17ರಂದು ನಡೆಯಲಿರುವ ಮತದಾನದಲ್ಲಿ ಎಲ್ಲರೂ ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವನ್ನು ಬಲಿಷ್ಠಗೊಳಿಸಬೇಕೆಂದು ನಗರಸಭೆ ಪೌರಾಯುಕ್ತ ಸುರೇಶ ಬಬಲಾದಿ ನುಡಿದರು.
ನಗರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಬಸವಕಲ್ಯಾಣ ನಗರಸಭೆಯಿಂದ ಹಮ್ಮಿಕೊಂಡ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂಥಹ ಅವಕಾಶವನ್ನು ಯಾರೂ ಮರೆಯಬಾರದು. ತಮ್ಮ ಹಕ್ಕು ಚಲಾಯಿಸುವ ಮೂಲಕ ತಮ್ಮ ಜನಪ್ರತಿನಿಧಿಯನ್ನು ಆಯ್ಕೆಗೊಳಿಸಲು ಮುಂದಾಗಬೇಕೆಂದರು.
ಸಹಾಯಕ ಆಯುಕ್ತರಾದ ಹೆಬ್ಸಿಬಾರಾಣಿ ಕೊರ್ಲಪಾಟಿ, ಸಮುದಾಯ ಸಂಘಟನಾಧಿಕಾರಿ ಅಶೋಕ ಚನ್ನಕೋಟೆ, ಕಂದಾಯ ನಿರೀಕ್ಷಕ ದಿಲ್ದಾರ್‌ಸಿಂಗ್ ಮಾತನಾಡಿದರು. ಜಾಥಾದಲ್ಲಿ ಕಡ್ಡಾಯ ಮತದಾನದ ಮಾಡುವ ಕುರಿತು ವಿವಿಧ ಘೋಷಣೆ ಕೂಗುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ನಗರಸಭೆಯ ಪೌರ ಕಾರ್ಮಿಕರು ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು , ಮತ್ತಿತರರು ಭಾಗವಹಿಸಿದರು. ನಗರದ ಕೋಟೆ ಹತ್ತಿರದ ನಗರ ಸಭೆಯ ಕಾರ್ಯಾಲಯದಿಂದ ಹೋರಾಟ ಜಾಗೃತಿ ಜಾಥಾ ಮುಖ್ಯ ರಸ್ತೆಯ ಮೂಲಕ ಹಳೆಯ ತಹಸೀಲ್ದಾರ್ ಕಚೇರಿಯಲ್ಲಿ ಮುಕ್ತಾಯಗೊಂಡಿತು.
ಸುರಪುರದಲ್ಲಿ ಜಾಗೃತಿ ಜಾಥಾ: 18 ವರ್ಷವಾದವರು ತಪ್ಪದೇ ಮತದಾನ ಮಾಡಬೇಕು ಮತ್ತು ತಮ್ಮ ಹಕ್ಕು ಚಲಾಯಿಸಬೇಕೆಂದು ಯಾದಗಿರಿ ಸಹಾಯಕ ಆಯುಕ್ತ ಬಿ. ಪಿ. ವಿಜಯ್ ಕರೆ ನೀಡಿದ್ದಾರೆ. ಮಿನಿ ವಿಧಾನಸೌಧ, ತಾಪಂ ಮತ್ತು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾನದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಾಯಕ ಚುನಾವಣಾಧಿಕಾರಿ ಬಸವರಾಜ ಸುಣ್ಣದ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಮತದಾರರನ್ನು ಅವಲಂಬಿಸಿದೆ, ಸುಭದ್ರ ದೇಶದ ನಿರ್ಮಾಣದಲ್ಲಿ ಮತದಾರರೇ ನಿರ್ಣಯಕರು. ಸಂವಿಧಾನದತ್ತವಾಗಿ ಪಡೆದಿರುವ ಮತದಾನದ ಹಕ್ಕನ್ನು ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಾಣಕ್ಕೆ ನಾಂದಿಯಾಡಬೇಕು ಎಂದು ನುಡಿದರು.
ನಿರ್ಭೀತಿಯಿಂದ ಮತ ಚಲಾಯಿಸಿ: ಮತದಾರರು ತಮ್ಮ ಮತ ಗೌಪ್ಯವಾಗಿರುವಂತೆ ನೋಡಿಕೊಳ್ಳಿ. ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೆ ನಿರ್ಭೀತಿಯಿಂದ ತಪ್ಪದೇ ಮತ ಚಲಾಯಿಸಿ. ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ ಎಂದು ಗುಲ್ಬರ್ಗ ಜಿಲ್ಲಾ ಚುನಾವಣಾಧಿಕಾರಿ ಡಾ. ಪ್ರಸಾದ್ ತಿಳಿಸಿದ್ದಾರೆ. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿದ್ದಲ್ಲಿ ಮಾತ್ರ ಮತದಾನದ ಹಕ್ಕು ಉದ್ಭವಿಸುವುದಿಲ್ಲ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ವ್ಯಕ್ತಿಗಳ ಹೆಸರು ನೋಂದಣಿಯಾಗಿರುವುದು ಸಹ ಅಷ್ಟೇ ಮುಖ್ಯ ಎಂದರು. ಸಮಸ್ತ ನಾಗರಿಕರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಹಕರಿಸುವಂತೆ ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

