ರಾಯಚೂರು

ನಮ್ಮೂರಿಗೆ ಛಲೋ ರಸ್ತೆ ಇಲ್ಲ, ಕುಡ್ಯಾಕ್ ನೀರಿಲ್ಲ, ಕರೆಂಟಿಲ್ಲ, ನಾವ್ಯಾಕ್ರೀ ಇವ್ರಿಗೆ ವೋಟ್ ಹಾಕ್ಬೇಕು...?

Published On :

ಕ.ಪ್ರ. ವಾರ್ತೆ , ಮುದಗಲ್ , ಮಾ.29
ಸ್ವಾತಂತ್ರ್ಯ ಸಿಕ್ಕು ಅರವತ್ತು ವರ್ಷ ಆತು, ದೇಶ ಅಷ್ಟ ಮುಂದಾಗ್ಯಾದ, ಇಷ್ಟ್ ಮುಂದಾಗ್ಯಾದ ಅಂತ ಟಿವ್ಯಾಗ, ಪೇಪರ್‌ನಾಗ ಹೇಳಕೊಂತ ರಾಜಕಾರಣಿಗಳು ತಿರಗತಾರ. ಆದ್ರ ನಮ್ಮೂರಾಗ ಕುಡ್ಯಾಕ್ ನೀರಲ್ಲ, ನೆಟ್ಗ ರಸ್ತೆ ಇಲ್ಲ, ಕರೆಂಟಂತೂ ಲೈಟ್ ಹತ್ತಂಗಿಲ್ಲ ಅದ್ಕ ನಾವು ಎಂಪಿ ಎಲೆಕ್ಷನ್‌ದಾಗ ವೋಟ್ ಹಾಕಂಗಿಲ್ಲ ನೋಡ್ರಿ...
- ತಾಲೂಕಿನ ಕಟ್ಟಕಡೆಯ ಗ್ರಾಮಗಳಾದ ಹಲ್ಕಾವಟಗಿ, ತೊಂಡಿಹಾಳ, ಅಂಕನಾಳ ಹಾಗೂ ಪಲಗಲದಿನ್ನಿ ಗ್ರಾಮಸ್ಥರು ಕೈಗೊಂಡ ಮತದಾನ ಬಹಿಷ್ಕಾರದ ನಿರ್ಧಾರವಿದು.
ಈ ನಾಲ್ಕು ಗ್ರಾಮಗಳು ಕೃಷ್ಣಾ ನದಿ ತಟದಲ್ಲಿದ್ದರೂ ಶುದ್ಧ ಕುಡಿಯುವ ನೀರಿಲ್ಲ, ಇದ್ದ ಬೋರವೆಲ್‌ಗಳಲ್ಲಿನ ಫ್ಲೋರೈಡ್‌ಯುಕ್ತ ನೀರು ಕುಡಿದು ಇಲ್ಲಿನವರು ಕೈ- ಕಾಲು ಬೇನೆಯಿಂದ ಬಳಲುತ್ತಿದ್ದಾರೆ. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 10 ಕಿಮೀ ರಸ್ತೆ ಟೆಂಡರ್ ಆಗಿ ಕಾಮಗಾರಿ ಆರಂಭಗೊಂಡು 4 ವರ್ಷ ಗತಿಸಿದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಜಲ್ಲಿಕಲ್ಲುಗಳು ಬಿದ್ದು ಸಂಚಾರ ಕಡುಕಷ್ಟವಾಗಿದೆ. ಗುತ್ತಿಗೆದಾರರು ಅರ್ಧಮರ್ಧ ಕೆಲಸ ಮಾಡಿ ಕೈತೊಳೆದುಕೊಂಡಿದ್ದಾರೆ.
ಮೂಲ ಸೌಕರ್ಯ ಮರೀಚಿಕೆ: ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪರಿವರ್ತಕಗಳು ಕಡಿಮೆ ಸಾಮರ್ಥ್ಯ ಹೊಂದಿದ್ದರಿಂದ ಮನೆಗಳ ಮತ್ತು ಬೀದಿ ಲೈಟುಗಳು ಚಿಮಣಿಗಿಂತಲೂ ಕಡಿಮೆ ಬೆಳಕು ನೀಡುವಂತಾಗಿದೆ. ಗ್ರಾಮಗಳು ಕಗ್ಗತ್ತಲಲ್ಲಿವೆ. ಗ್ರಾಮದ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯಗಳಿಲ್ಲ. ಗ್ರಾಮಗಳಲ್ಲಿ ರೋಗ ಬಂದರೆ ಚಿಕಿತ್ಸೆ ಪಡೆಯಲು ಆಸ್ಪತ್ರೆ ಇಲ್ಲ, ಚಿಕಿತ್ಸೆಗೆ ನಾಗರಹಾಳ, ಮುದಗಲ್, ಸಜ್ಜಲಗುಡ್ಡಕ್ಕೆ ಹೋಗಬೇಕು.
'ವಿಧಾನಸಭೆ ಚುನಾವಣ್ಯಾಗ ಈಗ ಇರೋ ಎಂಎಲ್‌ಎಗೇ ವೋಟು ಹಾಕಿದ್ವಿ. ಅವರು ಇವತ್ತಿನ ತನಕ ನಮ್ಮೂರಿಗೆ ಕಾಲ ಇಟ್ಟಿಲ್ರಿ' ಎಂದು ಗ್ರಾಮಸ್ಥರಾದ ಪವಾಡೆಪ್ಪ ರಾಯನರ್, ಅಮರಪ್ಪ ದಿನ್ನಿ ತೊಂಡಿಹಾಳ, ಶಂಕ್ರಯ್ಯ ತೊಂಡಿಹಾಳ, ಶರಣಬಸಪ್ಪ  ಕೋರಿ, ಬಸಪ್ಪ ಕುರಿ ತಿಳಿಸಿದರು.
ಮಲತಾಯಿ ಧೋರಣೆ: ಕ್ಷೇತ್ರಗಳ ಪುನರ್ ವಿಂಗಡನೆಗಿಂತ ಮೊದಲು ಈ ಗ್ರಾಮಗಳು ಕುಷ್ಟಗಿ ವಿಧಾನಸಭೆ, ಕೊಪ್ಪಳ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದವು. ಆಗಲೂ ಈ ಗ್ರಾಮಗಳನ್ನು ನಿರ್ಲಕ್ಷ್ಯದಿಂದ ನೋಡಲಾಗಿತ್ತು. ಈಗ ಪುನರ್‌ವಿಂಂಗಡನೆ ನಂತರ ರಾಯಚೂರು ಲೋಕಸಭೆ, ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು ಈಗಲೂ ಶಾಸಕರು, ಸಂಸದರು ಇತ್ತ ಕಡೆ ಸುಳಿಯುತ್ತಿಲ್ಲ. ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಜನಪ್ರತಿನಿಧಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಚುನಾವಣೆಗೆ ಬಹಿಷ್ಕಾರ: 'ಚುನಾವಣೆ ಬಂದಾಗ ಮಾತ್ರ ಓಟು ಕೇಳಲು ಬರುತ್ತಾರೆ, ವೋಟು ಹಾಕಿಸಿಕೊಂಡ ಮೇಲೆ ತಿರುಗಿಯೂ ನೋಡುವುದಿಲ್ಲ. ಅದಕ್ಕಾಗಿಯೇ ನಾವು ವೋಟು ಹಾಕಬಾರದು ಎಂದು ನಿರ್ಧರಿಸಿದ್ದೇವೆ' ಎಂದು ತಮ್ಮ ಅಳಲನ್ನು ತೋಡಿಕೊಂಡ ಗ್ರಾಮಸ್ಥರು ಈ ಕುರಿತು ಲಿಂಗಸ್ಗೂರು ಸಹಾಯಕ ಆಯುಕ್ತರಿಗೂ ಪತ್ರ ಬರೆದಿರುವುದಾಗಿ ತಿಳಿಸಿದರು.


-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.