ಪಕ್ಷಾಂತರ ಪರ್ವಕ್ಕಿಲ್ಲ ಕೊನೆ
ಅಮರೇಶಸ್ವಾಮಿ ಬಲ್ಲಟಗಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಮಾ.30
ತಾಲೂಕಿನ ಅನೇಕ ಹಿರಿಯ ರಾಜಕೀಯ ನಾಯಕರು ಹಿಂದೊಮ್ಮೆ ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದು ಹೆಸರು ಮಾಡಿದ್ದರು. ಸದ್ಯ ಅದೇ ನಾಯಕರು ಪಕ್ಷಾಂತರದಲ್ಲಿ ಹೆಸರು ಮಾಡುತ್ತಿರುವುದೂ ಅಷ್ಟೇ ಸತ್ಯ. ಪಕ್ಷಾಂತರಿಗಳಿಗೆ ತತ್ವ, ಸಿದ್ಧಾಂತ ಎಂಬುದಿಲ್ಲ. ಅಧಿಕಾರದಾಸೆಯೇ ಎಲ್ಲ ಎಂಬಂತಿದೆ. ಗೆಲ್ಲುವ ಕುದುರೆ ಹಿಂದೆಯೇ ಎಲ್ಲರ ಓಟ ಎಂಬಂತಿದೆ ಪರಿಸ್ಥಿತಿ. ಪ್ರಸಕ್ತ ಲೋಕಸಭೆ ಚುನಾವಣೆ ಸಹ ಇದಕ್ಕೆ ಹೊರತಾಗಿಲ್ಲ.
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಲ್ಲಿ ಯಾವ ರಾಜಕೀಯ ನಾಯಕ ಚುನಾವಣೆಗೂ ಮುನ್ನ ಹಾಗೂ ಆನಂತರದಲ್ಲಿ ಯಾವ ರಾಜಕೀಯ ಪಕ್ಷದಲ್ಲಿದ್ದಾನೆಂಬ ಗೊಂದಲ ಮತದಾರರಿಗೆ ಸಾಮಾನ್ಯ. ಆ ಮಟ್ಟಿಗೆ ಇಲ್ಲಿನವರು ಪಕ್ಷಾಂತರ ಮಾಡಿದ ಇತಿಹಾಸ ಹೊಂದಿದ್ದಾರೆ.
ವರ್ಚಸ್ಸು: ಕಳೆದ ಅನೇಕ ದಶಕಗಳಿಂದ ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡ ನಾಯಕರು ತಮ್ಮದೇ ಆದ ವರ್ಚಸ್ಸು ಇಲ್ಲಿ ಹೊಂದಿದ್ದರು. ರಾಜಕೀಯ ರಂಗದಲ್ಲಿ ಶಾಸಕ, ಸಚಿವ, ಸಂಸದರಾಗಿ, ಕೇಂದ್ರ ಮತ್ತು ರಾಜ್ಯ ಸಚಿವರಾಗಿ, ಸರ್ಕಾರದ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಂಥವರಲ್ಲಿ ಬಹುತೇಕರು ಟಿಕೆಟ್, ಪ್ರಾಶಸ್ತ್ಯದೆ ನೆಪವೊಡ್ಡಿ ಪಕ್ಷಾಂತರಿ ಗುಣ ಪ್ರದರ್ಶಿಸಿದ್ದು ವರ್ಚಸ್ಸು ಕಳೆದುಕೊಳ್ಳುವ ಹಂತದಲ್ಲಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಪಕ್ಷಾಂತರ ಪರ್ವಕ್ಕೆ ಚಾಲನೆ ದೊರೆತಿದೆ. ವಿವಿಧ ರಾಜಕೀಯ ಪಕ್ಷಗಳಲ್ಲಿದ್ದ ಪಕ್ಷಾಂತರಿ ನಾಯಕರ ವಲಯದಿಂದ ಮತ್ತೆ ಪಕ್ಷಾಂತರದ ಲಕ್ಷಣಗಳಿವೆ. ಕೆಲವರು ಈಗಾಗಲೇ ಕಾಂಗ್ರೆಸ್ಗೆ ಜಂಪ್ ಮಾಡಿಯಾಗಿದೆ.
ಪಕ್ಷಾಂತರಿಗಳ ಸೇರ್ಪಡೆಗೆ ಕಾಂಗ್ರೆಸ್ನಲ್ಲಿಯೇ ಅಸಮಾಧಾನವಿದೆ. ಆದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನೆರವಾದರೆ ಸಾಕು ಎಂಬಂಥ ಪರಿಸ್ಥಿತಿ ಕಾಂಗ್ರೆಸ್ನಲ್ಲಿದೆ. ಪರಿಣಾಮ ಬಂದವರೆಲ್ಲರೂ ನಮ್ಮವರೇ ಎಂಬ ನೀತಿಗೆ ಕಾಂಗ್ರೆಸ್ ಜೋತುಬೀಳುವಂತಾಗಿದೆ. ಹಾಗಾಗಿ ಕಾಂಗ್ರೆಸ್ನಲ್ಲಿ ಭಿನ್ನಮತ ಮುಂದುವರಿದಿದೆ. ಅದರಿಂದಾಗಿ ಪ್ರತ್ಯೇಕ ಗುಂಪುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೂ ಸಾಗಿದೆ.
ಸಂತಸ-ಹಿತವಿಲ್ಲ: ಲಿಂಗಸ್ಗೂರು ತಾಲೂಕಿನಲ್ಲಿ ಸದ್ಯ ಕಾಂಗ್ರೆಸ್ನಲ್ಲಿ ಅಮರೇಗೌಡ ಬಯ್ಯಾಪುರ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಎಂಬ ಬಣಗಳು ಅಸ್ತಿತ್ವದಲ್ಲಿವೆ. ತೆರೆಮರೆಯಲ್ಲಿಯೇ ಬಣಗಳು ಕಾರ್ಯನಿರ್ವಹಿಸುತ್ತಿವೆ. ಜಿಪಂ ಮಾಜಿ ಸದಸ್ಯ ಪಾಮಯ್ಯ ಮುರಾರಿ, ತಾಪಂ ಉಪಾಧ್ಯಕ್ಷ ಮಾನಪ್ಪ ಚೌಹಾಣ್, ಮುಖಂಡರಾದ ಬಸವರಾಜಗೌಡ ಗಣೇಕಲ್, ಅಮೀನ್ ಪಟೇಲ್ ಸೇರಿ ಅನೇಕರು ಮೇಟಿ ಬಣದಲ್ಲಿದ್ದಾರೆ.
ಇವರಿಗೆ ಬಸವರಾಜ ಪಾಟೀಲ್ ಆನ್ವರಿ ಕಾಂಗ್ರೆಸ್ ಸೇರ್ಪಡೆ ಸಂತಸ ತಂದಿದೆ. ಲಿಂಗಸ್ಗೂರು ಕ್ಷೇತ್ರದಲ್ಲಿ ಪ್ರಭಾವಿ ನಾಯಕರೆನಿಸಿರುವ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಬಣಕ್ಕೆ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಅನ್ವರಿ ಅವರ ಪಕ್ಷ ಸೇರ್ಪಡೆ ಹಿತ ತಂದಿಲ್ಲ.
'ಕೈ' ಬಿಟ್ಟು ಮತ್ತೆ 'ಕೈ' ಸೇರಿದರು: ಈ ಮೊದಲು ಕಾಂಗ್ರೆಸ್ನಲ್ಲಿದ್ದು ಆನಂತರ ಕಾಂಗ್ರೆಸ್ನಿಂದ ಬಿಜೆಪಿಗೆ ಅಲ್ಲಿಂದ ಜೆಡಿಎಸ್ಗೆ ಜಿಗಿದಿದ್ದ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟು ನಂತರ ಪುನಃ ಕಾಂಗ್ರೆಸ್ಗೆ ಇತ್ತೀಚೆಗೆ ಜಿಗಿದಿದ್ದಾರೆ. ಇವರ ಸೇರ್ಪಡೆ ಪಕ್ಷಕ್ಕೆ ಯಾವ ರೀತಿ ಅನುಕೂಲವಾಗುತ್ತದೆ ಎಂಬುದು ಫಲಿತಾಂಶದಿಂದ ಗೊತ್ತಾಗಲಿದೆ. ಆದರೆ ಪಕ್ಷಾಂತರ ಪರ್ವಕ್ಕೆ ಅವರು ಪುನಃ ಸಾಕ್ಷಿಯಾಗಿದ್ದಂತೂ ವಾಸ್ತವ.
ಚುನಾವಣೆ ದಿನ ಸಮೀಪಿಸುತ್ತಿದ್ದರೂ ಪಕ್ಷಾಂತರಿಗಳು ಪ್ರಚಾರಕ್ಕೆ ಮುಂದಾಗಿಲ್ಲ. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರನ್ನು ಹೊರತುಪಡಿಸಿ ಇನ್ನುಳಿದವರು ಪ್ರಚಾರ ಕೈಗೊಂಡಿಲ್ಲ.
ಬಿಜೆಪಿ ಸೆಳೆತ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ಸಿದ್ದು ಬಂಡಿಯವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಯಶಸ್ವಿಯಾಗಿದೆ.
ಹೀಗಾಗಿ ಲೋಕಸಭೆ ಚುನಾವಣೆ ಕಣದಲ್ಲಿ ಯಾರು ಯಾವ ಪಕ್ಷದಲ್ಲಿದ್ದಾರೆಂದು ಹೇಳಲಾಗದಂಥ ಸ್ಥಿತಿಯಿದೆ. ಮತದಾರರಿಗೆ ನಾಯಕರೇ ಗೊಂದಲ ಸೃಷ್ಟಿಸುವ ಕಾರ್ಯ ಮಾಡಿದ್ದಾರೆ. ಒಟ್ಟಿನಲ್ಲಿ ಚುನಾವಣೆಯ ಆಗಮನದೊಂದಿಗೆ ಕ್ಷೇತ್ರದ ಪ್ರಮುಖ ನಾಯಕರು ಪಕ್ಷಾಂತರ ಕೈಗೊಂಡು ತತ್ವ, ಸಿದ್ಧಾಂತಗಳಿಗೆ ಬೆಲೆಯಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿರುವುದಂತೂ ಸತ್ಯ.
ಘಟಾನುಘಟಿಗಳು
ಈ ಮೊದಲು ಕಾಂಗ್ರೆಸ್ನಲ್ಲಿದ್ದು ಆನಂತರ ತೊರೆದಿದ್ದ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರಗುಂಡಪ್ಪ ಮೇಟಿ, ಹನುಮಂತಪ್ಪ ಕಂದಗಲ್ ಸೇರಿ ವಿವಿಧ ಪಕ್ಷಗಳಲ್ಲಿ ಕಳೆದ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದವರು ಈಗ ಕಾಂಗ್ರೆಸ್ನತ್ತ ವಲಸೆಗೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

