ರಾಯಚೂರು

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

Published On :

ಲಿಂಗಸ್ಗೂರು: ಹೊರಗುತ್ತಿಗೆ ಪದ್ಧತಿ ರದ್ಧಪಡಿಸಿ ದಿನಗೂಲಿ ಸೇವೆ ನಿಯಮಾನುಸಾರ ಮುಂದುವರಿಸಿ ಅಥವಾ ಗುತ್ತಿಗೆ ಕಾರ್ಮಿಕ ಕಾಯ್ದೆ ಅನ್ವಯಿಸಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಿಯುಸಿಐ ನೇತೃತ್ವದಲ್ಲಿ ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಕೆಲಕಾಲ ರಸ್ತೆತಡೆ ನಡೆಸಿ ಒತ್ತಾಯಿಸಿದರು.
ಪ್ರಪಂಚದಾದ್ಯಂತ ಮೇ 1ರಂದು ವಿಶ್ವ ಕಾರ್ಮಿಕ ದಿನವೆಂದು ಆಚರಿಸಲಾಗುತ್ತಿದ್ದು, ಕಾರ್ಮಿಕರು ಹೋರಾಟ ನಡೆಸಿ ಪಡೆದ ಹಕ್ಕು ಮತ್ತು ಕಾನೂನುಗಳನ್ನು ಇಂದು ಕಿತ್ತುಕೊಳ್ಳಲಾಗುತ್ತಿದೆ. ಜಾಗತೀಕರಣದ ದಾಳಿ ಪರಿಣಾಮ ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ದುಡಿಯುವ ವರ್ಗಕ್ಕೆ ಶ್ರಮಕ್ಕೆ ತಕ್ಕ ಕೂಲಿ ಹಾಗೂ ಕೆಲಸದ ಭದ್ರತೆ ಇಲ್ಲದಂತಾಗಿದೆ. ಹೊರಗುತ್ತಿಗೆ ಪದ್ಧತಿ ರಾರಾಜಿಸುತ್ತಿದೆ. ರಾಯಚೂರು ಕೃಷಿ ವಿವಿಯ 828 ಕಾರ್ಮಿಕರು ಕಳೆದ ಒಂದೂವರೆ ವರ್ಷದಿಂದ ಹೋರಾಟ ನಡೆಸಿದ ಪ್ರಯುಕ್ತ 250ಕ್ಕೂ ಅಧಿಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ಸಮರ್ಪಕ ಕೂಲಿ ಇಲ್ಲ: ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು, ಗುತ್ತಿಗೆದಾರರು ಹಾಗೂ ಭ್ರಷ್ಟ ಅಧಿಕಾರಿಗಳ ನಡುವೆ ತಮ್ಮ ಹಕ್ಕು ರಕ್ಷಣೆಗೆ ಹೋರಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಕಂದಾಯ, ಶಿಕ್ಷಣ, ಜಿಪಂ, ಜೆಸ್ಕಾಂ, ಪೌರಸೇವೆ, ನಿರ್ಮಾಣ, ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ನಿಗದಿತ ದಿನಗೂಲಿ, ಭವಿಷ್ಯ ನಿಧಿ, ಹಾಜರಿ ಹಾಗೂ ವೇತನ ಚೀಟಿ ಗಗನ ಕುಸುಮವಾಗಿದೆ. ಕಾರ್ಖಾನೆ, ಮಿಲ್ಲು, ಮಾಧ್ಯಮ ರಂಗ, ಹೊಟೆಲ್, ಸಿನಿಮಾ, ಪೆಟ್ರೊಲ್ ಬಂಕ್, ವ್ಯಾಪಾರಿ ಅಂಗಡಿ ಸೇರಿದಂತೆ ಭಾರ ಹೊರುವ ಕಾರ್ಮಿಕ ಪ್ರದೇಶದಲ್ಲಿ ಗುತ್ತಿಗೆ ಕಾರ್ಮಿಕ ಕಾಯ್ದೆಯಡಿ ದಿನಗೂಲಿ ಮತ್ತು ಸೌಲಭ್ಯ ನೀಡುತ್ತಿಲ್ಲ.
ಹಟ್ಟಿ ಚಿನ್ನದ ಗಣಿ, ಶಕ್ತಿನಗರ ವಿದ್ಯುತ್ ಸ್ಥಾವರ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಓಪೆಕ್ ಆಸ್ಪತ್ರೆ, ನವೋದಯ ಮೆಡಿಕಲ್ ಕಾಲೇಜು, ಸುರಾನ ಇಂಡಸ್ಟ್ರೀಜ್, ಮೈಸೂರು ಪೆಟ್ರೋ ಕೆಮಿಕಲ್ಸ್, ಬಿಎಸ್‌ಎನ್‌ಎಲ್, ಅಂಚೆ ಇಲಾಖೆ, ಅಕ್ಕಿ ಗಿರಣಿಗಳು, ಸರಕಾರಿ ಮತ್ತು ಖಾಸಗಿ ಗೋಧಾಮುಗಳು, ಖಾಸಗಿ ಸೆಕ್ಯೂರಿಟಿ ತಾಣಗಳು, ಶಾಲಾ-ಕಾಲೇಜು, ಸರಕು ಸಾಗಾಣಿಕೆ ಸ್ಥಾಪನೆಗಳು ಸೇರಿ ಮುಂತಾದ ಸ್ಥಾಪನೆಗಳಲ್ಲಿ ಸರ್ಕಾರ ನಿಗದಿಗೊಳಿಸಿದ ದಿನಗೂಲಿ ಹಾಗೂ ಇತರೆ ಸೌಲಭ್ಯ ಜಾರಿಯಾಗದೆ ಕೆಲಸದ ಬೆದರಿಕೆ ತಾಂಡವವಾಡುತ್ತಿವೆ. ಕಾರಣ ಸರ್ಕಾರ ಗುತ್ತಿಗೆ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಗೊಳಿಸಬೇಕು. ಕೃಷಿ ವಿವಿ ಹಂಗಾಮಿ ಕಾರ್ಮಿಕರ ಸೌಲಭ್ಯ ಹಾಗೂ ಉದ್ಯೋಗ ಭದ್ರತೆ ನೀಡಬೇಕು. ಗುತ್ತಿಗೆ ಕಾರ್ಮಿಕ ಕಾಯ್ದೆ ಅನ್ವಹಿಸಬೇಕು. ಕೂಲಿ ಕದಿಯುವ ಮಾಲೀಕ ಹಾಗೂ ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಚಿನ್ನಪ್ಪ ಕೊಟ್ರಿಕಿ, ಬಸವರಾಜ ನಗನೂರ, ಬಾಬು ಭೂಪೂರ, ತಿಪ್ಪರಾಜ ಗೆಜ್ಜಲಗಟ್ಟಾ, ಹನುಮಂತಪ್ಪ ಪೂಜಾರಿ, ಹನುಮಂತ ನಗನೂರ, ಗೌಸ್‌ಸಾಬ ಗುಂತಗೋಳ, ಯಲ್ಲಪ್ಪ ರಾಮದುರ್ಗ, ಶಾಂತಪ್ಪ ಗೌಡೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.