ರಾಯಚೂರು

ಎನ್‌ಇಎಸ್ ಚುನಾವಣೆ ಸ್ಥಗಿತ ಆದೇಶಕ್ಕೆ ಸದಸ್ಯರ ಅಸಮಾಧಾನ

Published On :

ಕ.ಪ್ರ. ವಾರ್ತೆ    ರಾಯಚೂರು    ಮೇ 4
ನ್ಯೂ ಎಜುಕೇಷನ್ ಸೊಸೈಟಿ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಸ್ಥಗಿತಕ್ಕೆ ಆದೇಶಿಸಿರುವ ಜಿಲ್ಲಾಧಿಕಾರಿ ವರ್ತನೆಗೆ ಸೊಸೈಟಿಯ ಕಾರ್ಯದರ್ಶಿ ಪರ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಇಂಥ ಆದೇಶದ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ಸದಸ್ಯ ಹಾರೇಸ್ ಸಿದ್ದಿಖಿ ಈ ಬಗ್ಗೆ ಮಾತನಾಡಿ, ಜೆಡಿಯು ಮುಖಂಡ ನೂರ್ ಮಹಮ್ಮದ್ ಮತ್ತು ಸೊಸೈಟಿಯ ಸದಸ್ಯರಲ್ಲದವರ ಹಸ್ತಕ್ಷೇಪದಿಂದಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಜಿಲ್ಲಾಡಳಿತದ ದಾರಿತಪ್ಪಿಸುವ ಕಾರ್ಯವನ್ನು ಹಾಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಅಬ್ದುಲ್ ಸಮದ್ ಸಿದ್ದಿಖಿ ವಿರೋಧಿ ಗುಂಪು ಮಾಡಿದೆ ಎಂದು ಆರೋಪಿಸಿದರು.
ತಾವು ವೈದ್ಯಕೀಯ ಕಾಲೇಜು ನಡೆಸುತ್ತಿಲ್ಲ: ಸೊಸೈಟಿಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಕಳೆದ 2012-13ರ ಆರ್ಥಿಕ ವರ್ಷದ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದೆ. ಸಂಬಂಧಿಸಿದ ಇಲಾಖೆಗೆ ಅದರ ಎಲ್ಲ ದಾಖಲೆ ಸಲ್ಲಿಸಲಾಗಿದೆ. ಪ್ರಸಕ್ತ ವರ್ಷ ಮಾರ್ಚ್ ಅಂತ್ಯಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಪ್ರಸಕ್ತ ಆರ್ಥಿಕ ವರ್ಷದ ಲೆಕ್ಕ ಪರಿಶೋಧನೆ ಮಾಹಿತಿ ಸಲ್ಲಿಸಲು ಅವಕಾಶ ಸಿಕ್ಕಿಲ್ಲ ಎಂದರು.
ಸೊಸೈಟಿಯಿಂದ ಪಿಯು, ಪದವಿ ಕಾಲೇಜು ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಉಚಿತವಾಗಿ ನೀಡಲಾಗುತ್ತಿದೆ. ಜೆಡಿಯು ಮುಖಂಡ ನೂರ್ ಮಹಮ್ಮದ್ ಅವರು ಕೋಟ್ಯಂತರ ರು. ಅಕ್ರಮ ನಡೆದಿದೆ ಎಂದು ಆರೋಪಿಸಿರುವುದು ಹಾಸ್ಯಾಸ್ಪದ ಸಂಗತಿ. ಕೋಟಿ ಕೋಟಿ ಅಕ್ರಮ ನಡೆಯಲು ತಾವು ವೈದ್ಯಕೀಯ ಕಾಲೇಜು ನಡೆಸುತ್ತಿಲ್ಲ ಎಂದು ಲೇವಡಿ ಮಾಡಿದರು.
ಬೆಂಬಲಿಗರ ಪರ ರಾಜಕೀಯ: ಸೊಸೈಟಿಯ ಕಾರ್ಯದರ್ಶಿ ಅಬ್ದುಲ್ ಸಮದ್ ಸಿದ್ದಿಖಿ ಅವರ ವಿರುದ್ಧ ಅಕ್ರಮದ ಆರೋಪ ಮಾಡಲಾಗಿದೆ. ಆದರೆ ಬ್ಯಾಂಕ್ ಖಾತೆಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಸೇರಿ ನಿರ್ವಹಿಸುತ್ತಾರೆ. ಸದ್ಯ ಆರೋಪ ಹೊರಿಸಿದವರ ಬಣದಲ್ಲಿಯೇ ಹಾಲಿ ಮಂಡಳಿಯ ಅಧ್ಯಕ್ಷ ಹಾಗೂ ಖಜಾಂಚಿಯವರಿದ್ದಾರೆ. ಇನ್ನು ಅಕ್ರಮ ನಡೆಸಲು ಕಾರ್ಯದರ್ಶಿಗೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಚುನಾವಣೆಯನ್ನು ಕಾನೂನು ಸುವ್ಯವಸ್ಥೆ ಹದಗೆಡುವ ಭೀತಿಯಿಂದ ಮುಂದೂಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸೊಸೈಟಿಯು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಕ್ತ ಬಿಗಿ ಭದ್ರತೆ ಒದಗಿಸುವಂತೆ ಹಣ ಪಾವತಿಸಿದೆ. ವಾಸ್ತವಾಂಶ ಮರೆ ಮಾಚಿರುವ ವಿರೋಧಿಗಳು ಜಿಲ್ಲಾಧಿಕಾರಿ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ. ಹಾಗೆಯೇ ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಚುನಾವಣೆ ತಡೆಯಲು ಒತ್ತಡ ಹೇರುತ್ತಿರುವ ತಮ್ಮ ಬೆಂಬಲಿಗರ ಪರ ರಾಜಕೀಯ ಮಾಡುತ್ತಿದ್ದಾರೆಂದು ಟೀಕಿಸಿದರು.
ದುರದೃಷ್ಟಕರ ಸಂಗತಿ: ನಗರದಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ಗಮನಹರಿಸದ ಶಾಸಕ ಡಾ. ಶಿವರಾಜ್ ಪಾಟೀಲ್ ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮೇಲೆ ರಾಜಕೀಯ ಪ್ರಭಾವ ಬಳಸಿ ಒತ್ತಡ ಹೇರುವ ಮೂಲಕ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಜಿಲ್ಲಾಧಿಕಾರಿ ಸೊಸೈಟಿಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಚುನಾವಣೆ ನಡೆಸುವುದು ಸೂಕ್ತ ಎಂಬುದಕ್ಕೆ ಪೂರಕವಾಗಿ ಒದಗಿಸಿದ ಯಾವುದೇ ದಾಖಲೆಯನ್ನು ಸರಿಯಾಗಿ ಗಮನಿಸಿಲ್ಲ. ವಿರೋಧಿಗಳ ಮಾತು ನಂಬಿ ಚುನಾವಣೆ ಮುಂದೂಡುವ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಅನ್ಯಾಯದ ಕ್ರಮ ಕೈಗೊಂಡಿದ್ದಾರೆಂದು ಟೀಕಿಸಿದರು.
ಸೊಸೈಟಿಗೆ ಏ.4ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡದಂತೆ ಕೋರಲು ತೆರಳಿದ ನಿಯೋಗದ ಎದುರು ಸೊಸೈಟಿಯ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಅವರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ. ಈ ನಿಟ್ಟಿನಲ್ಲಿ ಗೊಂದಲ ಸೃಷ್ಟಿಸುವವರ ಪರ ನಿಲುವು ತಳೆದಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಮುಂದೂಡಿಕೆಯಾಗಿರುವ ಚುನಾವಣೆಯ ಹೊಸ ದಿನಾಂಕ ಪ್ರಕಟಿಸಲು ಶೀಘ್ರದಲ್ಲಿಯೇ ಆಡಳಿತ ಮಂಡಳಿಯ ಸಭೆ ಕರೆಯಲಾಗುತ್ತದೆ. ಈ ಬಗ್ಗೆ ಸಭೆಯ ನೋಟಿಸ್ ಸೋಮವಾರ ಕಳಿಸಿಕೊಡಲಾಗುತ್ತದೆ ಎಂದು ಅವರು ಹೇಳಿದರು.
ಸೊಸೈಟಿಯ ಕಾರ್ಯದರ್ಶಿ ಅಬ್ದುಲ್ ಸಮದ್ ಸಿದ್ದಿಖಿ, ಉಸ್ಮಾನ್, ರಸೂಲ್ ಸಾಬ್, ಲಿಯಾಕತ್ ಹುಸೇನ್, ಅಬ್ದುಲ್ ಹಮೀದ್, ಗದ್ವಾಲ್ ನವಾಬ್ ಸಾಬ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.