5ನೇ ಘಟಕದ ಪರಿಶೀಲನೆ ಪುನಾರಂಭ ವಿಳಂಬ
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ದುರಸ್ತಿಗೀಡಾಗಿರುವ ಐದನೇ ಘಟಕದ ಪರಿಶೀಲನೆ ಕಾರ್ಯ ಆರಂಭಿಸಿರುವ ಬಿಎಚ್ ಇಎಲ್ ತಂತ್ರಜ್ಞರ ತಂಡವು ಘಟಕದ ಸಂಪೂರ್ಣ ನವೀಕರಣಕ್ಕೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ರಾಜ್ಯವು ತೀವ್ರ ವಿದ್ಯುತ್ ಅಭಾವ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಕಳೆದ ಏ.26 ರಿಂದ ದುರಸ್ತಿಯಲ್ಲಿರುವ ಐದನೇ ಘಟಕದ ದುರಸ್ತಿಗೆ ಸಂಬಂಧಿಸಿ ಬಿಎಚ್ಇಎಲ್ ತಂಡ ಆಗಮಿಸಿದೆ. ಘಟಕದ ಎಲ್ಲ ವಿಭಾಗಗಳನ್ನು ತಂಡವು ಪರಿಶೀಲಿಸಿದ್ದು, ಟರ್ಬೈನ್ ನಲ್ಲಿನ ದೋಷದ ಬೆನ್ನಲ್ಲೆ ಸಂಪೂರ್ಣ ನವೀಕರಣಕ್ಕೆ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ಮೇಲಿಂದ ಮೇಲೆ ದುರಸ್ತಿಗೆ: ಬೇಸಿಗೆಯ ದಿನಗಳಲ್ಲಿ ಆರ್ಟಿಪಿಎಸ್ನ ವಿದ್ಯುತ್ ಘಟಕಗಳ ಮೇಲೆ ವಿದ್ಯುತ್ ಉತ್ಪಾದನೆಗೆ ಒತ್ತಡ ಹೆಚ್ಚಿದ್ದು, ಆ ಹಿನ್ನೆಲೆಯಲ್ಲಿ ಘಟಕಗಳು ಮೇಲಿಂದ ಮೇಲೆ ದುರಸ್ತಿಗೆ ಸಿಲುಕುತ್ತಿವೆ. ಹಾಗೆಯೇ ಘಟಕಗಳಿಗೆ ಕಳಪೆ ಕಲ್ಲಿದ್ದಲು ಪೂರೈಕೆ, 20 ವರ್ಷಕ್ಕೂ ಹಳೆಯ ಘಟಕಗಳಿಂದಾಗಿ ನಿರೀಕ್ಷೆಯಂತೆ ಉತ್ಪಾದನೆ ಸಾಧ್ಯವಾಗುತ್ತಿಲ್ಲ.
ವಿದ್ಯುತ್ ಕೊರತೆ ಸಹಜ: ತಲಾ 210 ಮೆವ್ಯಾ ಸಾಮರ್ಥ್ಯಕ್ಕೆ ಪ್ರತಿಯಾಗಿ ಪ್ರತಿ ಘಟಕದಲ್ಲಿ ಕೇವಲ 130 ರಿಂದ 160 ಮೆವ್ಯಾ ವಿದ್ಯುತ್ ಉತ್ಪಾದಿಸುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ಸತತ ವಿದ್ಯುತ್ ಉತ್ಪಾದನೆಯ ಒತ್ತಡದಿಂದಾಗಿ ಘಟಕಗಳು ದುರಸ್ತಿಗೆ ಸಿಲುಕುವುದು ಸಾಮಾನ್ಯ ಸಂಗತಿ. ಆದರೆ ಹಾಗೆ ಒಮ್ಮೆ ದೋಷ ಕಂಡುಬಂದರೆ ಅದನ್ನು ಸರಿಪಡಿಸಿ ಪುನಾ ಉತ್ಪಾದನೆಗೆ ತೊಡಗಿಸಲು ಕನಿಷ್ಟ ಎರಡು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ವಿದ್ಯುತ್ ಕೊರತೆಯಾಗುವುದು ಸಹಜ.
ಅಂತೆಯೇ ಕಳೆದ ತಿಂಗಳು 26 ರಂದು ದುರಸ್ತಿಗೀಡಾಗಿರುವ ಐದನೇ ಘಟಕದ ದುರಸ್ತಿ ಇನ್ನೂ 10 ದಿನಗಳವರೆಗೆ ಸಾಗುವ ಸಾಧ್ಯತೆಯಿದೆ. ಬಿಎಚ್ ಇಎಲ್ ತಂತ್ರಜ್ಞರ ತಂಡವು ಈ ಘಟಕದ ಸಂಪೂರ್ಣ ಪರಿಶೀಲನೆ ನಡೆಸಿದ್ದು, ಸಮಸ್ಯೆಗಳ ಪಟ್ಟಿ ತಯಾರಿಸಿದೆ ಎಂದು ಹೇಳಲಾಗಿದೆ.
ಇದನ್ನಾಧರಿಸಿ ಕೆಪಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ದುರಸ್ತಿಗೆ ಮುಂದಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್ಟಿಪಿಎಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

