ಗುತ್ತಿಗೆದಾರರಿಂದ ಕಾರ್ಮಿಕರಿಗೆ ಷರತ್ತು: ಬಿಎಸ್ಸೆನ್ನೆಲ್ ಆಕ್ಷೇಪ
ರಾಯಚೂರು: 2014-15ರ ಆರ್ಥಿಕ ವರ್ಷದ ಹೊರಗುತ್ತಿಗೆ ಹಾಗೂ ಇತರೆ ಕಾರ್ಯನಿರ್ವಹಿಸಲು ಸಿಬ್ಬಂದಿ ಒದಗಿಸುವ ಗುತ್ತಿಗೆದಾರ ಎಆರ್‌ಸಿ ಸಂಸ್ಥೆಯವರು ಕಾನೂನು ಬಾಹಿರವಾಗಿ ಕಾರ್ಮಿಕರಿಂದ ಖಾಲಿ ಚೆಕ್‌ನಲ್ಲಿ ಸಹಿ ಪಡೆಯುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಎಸ್ಸೆನ್ನೆಲ್ ಕ್ಯಾಶುವಲ್, ಕಾಂಟ್ರಾಕ್ಟ್ ಕಾರ್ಮಿಕರ ಯೂನಿಯನ್ ಒತ್ತಾಯಿಸಿದೆ.
ಈ ಕುರಿತು ಬಿಎಸ್ಸೆನ್ನೆಲ್ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ರಾಯಚೂರು- ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬಿಎಸ್ಸೆನ್ನೆಲ್ ಸಂಸ್ಥೆಗೆ ಗುತ್ತಿಗೆ ಕಾರ್ಮಿಕರನ್ನು ಒದಗಿಸಲು ಪರವಾನಗಿ ಪಡೆದಿರುವ ಎಆರ್‌ಸಿ ಸಂಸ್ಥೆಯು ಕಾರ್ಮಿಕರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕರಿಂದ ಖಾಲಿ ಚೆಕ್‌ಗಳನ್ನು ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ.
ಕಳೆದ 15 ವರ್ಷಗಳಿಂದ ಅನೇಕ ಕಾರ್ಮಿಕರು ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೆ ಗುತ್ತಿಗೆ ಪಡೆದಂಥ ಗುತ್ತಿಗೆದಾರರು ಖಾಲಿ ಚೆಕ್ ಪಡೆಯದೇ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರ್ಮಿಕರ ವೇತನ, ಭವಿಷ್ಯ ನಿಧಿ ಸೇರಿದಂತೆ ವಿವಿಧ ಸವಲತ್ತು ಒದಗಿಸಿದ್ದಾರೆ. ಆದರೆ ಎಆರ್‌ಸಿ ಸಂಸ್ಥೆಯವರು ಮಾತ್ರ ಕಾರ್ಮಿಕರಿಂದ ಕಾನೂನು ಬಾಹಿರವಾಗಿ ಇಂಥ ಅಕ್ರಮ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಎಆರ್‌ಸಿ ಸಂಸ್ಥೆಯವರು ಕಾರ್ಮಿಕರಿಂದ ಖಾಲಿ ಚೆಕ್ ಪಡೆಯುವುದರ ಜತೆಗೆ 10 ವಿವಿಧ ಷರತ್ತುಗಳನ್ನು ನೇಮಕಾತಿಗೆ ವಿಧಿಸುತ್ತಿದ್ದಾರೆ. ಇಂಥ ಷರತ್ತು ಪತ್ರಕ್ಕೆ ಕಾರ್ಮಿಕರಿಂದ ಸಹಿ ಪಡೆದ ನಂತರವೇ ನೇಮಕಾತಿ ಆದೇಶ ನೀಡಲಾಗುತ್ತಿದೆ. ಕಾರ್ಮಿಕ ಸಂಘ-ಸಂಸ್ಥೆಗಳೊಂದಿಗೆ ಗುರುತಿಸಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ಗುರುತಿಸಿಕೊಂಡರೆ ಅಂಥವರನ್ನು ಕೆಲಸದಿಂದ ಮುನ್ಸೂಚನೆ ನೀಡದೇ ತೆಗೆದು ಹಾಕಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕಾರ್ಮಿಕ ಸಂಘಟನೆಗಳನ್ನು ಕಟ್ಟಿಕೊಳ್ಳುವುದು ಮತ್ತು ಹೋರಾಡುವುದು ಸಂವಿಧಾನಬದ್ಧ ಹಕ್ಕಾಗಿದೆ. ಗುತ್ತಿಗೆದಾರರ ಕಾರ್ಮಿಕ ವಿರೋಧಿ ನೀತಿ ಸಹಿಸಲಾಗದು. ಕೂಡಲೇ ಈ ನಿಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘದ ಗೌರವಾಧ್ಯಕ್ಷ ಶೇಕ್ಷಾಖಾದ್ರಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

