ರಾಯಚೂರು

ಉಸ್ಸಪ್ಪ... ಬೇಸಿಗೆ ಮುಗಿದ್ರೆ ಸಾಕಪ್ಪಾ!

Published On :

 ಕ.ಪ್ರ. ವಾರ್ತೆ, ರಾಯಚೂರು, ಮೇ 20
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ತಾಪಮಾನಕ್ಕೆ ಅಕ್ಷರಶಃ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬೇಸಿಗೆಯ ಬಿರುಬಿಸಿಲ ದಿನಗಳು ಇನ್ನೇನು ಮುಗಿದವು ಎಂದುಕೊಂಡವರಿಗೆ ಏರಿಕೆ ಕಾಣುತ್ತಿರುವ ತಾಪಮಾನ ಆತಂಕ ತಂದಿದೆ. ಕಳೆದ ಏಪ್ರಿಲ್‌ನಿಂದ ಬಿರುಬಿಸಿಲ ಅಬ್ಬರ ಮುಂದುವರಿದಿದ್ದು, ಜನತೆ ಹತ್ತಾರು ಸಮಸ್ಯೆ ಎದುರಿಸುವಂತಾಗಿದೆ.
ಜಿಲ್ಲೆಯಲ್ಲಿ ಬೇಸಿಗೆಯಲ್ಲಷ್ಟೇ ಅಲ್ಲ ಸರ್ವಕಾಲಕ್ಕೂ ಬಿಸಿಲು, ಬಿಸಿಲು.. ಅದರಲ್ಲೂ ಬೇಸಿಗೆಯ ದಿನಗಳಲ್ಲಿ ಬಿರುಬಿಸಿಲ ಪ್ರಮಾಣ ತೀರಾ ಹೆಚ್ಚೆನ್ನುವಷ್ಟಿರುತ್ತದೆ. ಈ ಬಾರಿಯೂ ಹೀಗೆಯೇ ಆಗಿದ್ದು, ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿರುವುದು ಸಂಕಷ್ಟಕ್ಕೆ ದಾರಿ ಮಾಡಿದೆ.
ಪ್ರಸಕ್ತ ಬೇಸಿಗೆಯಲ್ಲಿ ತಾಪಮಾನವು ಕಳೆದ ಏಪ್ರಿಲ್‌ನಿಂದ 40 ಡಿಗ್ರಿ ದಾಟಿದೆ. ಪ್ರಸಕ್ತ ವರ್ಷ ಅತೀ ಹೆಚ್ಚು 42 ಡಿಗ್ರಿ ಸೆಲ್ಸಿಯಸ್ ತಾಪಮಾನ ಜಿಲ್ಲೆಯಲ್ಲಿ ದಾಖಲಾಗಿದ್ದು, ಹತ್ತಾರು ಸಮಸ್ಯೆಗಳಿಗೆ ಬೇಸಿಗೆ ಕಾರಣವಾಗಿದೆ.
ವಿದ್ಯುತ್ ಕಡಿತ: ಬೇಸಿಗೆಯಲ್ಲಿ ಸಹಜವಾಗಿಯೇ ವಿದ್ಯುತ್‌ಗೆ ಬೇಡಿಕೆ ಹೆಚ್ಚು. ಪರಿಣಾಮ ಜಿಲ್ಲೆಯಲ್ಲಿಯೇ ವಿದ್ಯುತ್ ಉತ್ಪಾದಿಸುವ ಥರ್ಮಲ್ ಘಟಕಗಳಿದ್ದರೂ ವಿದ್ಯುತ್ ಕಡಿತ ತೀರಾ ಸಾಮಾನ್ಯ ಸಂಗತಿ. ಪ್ರಸಕ್ತ ಬೇಸಿಗೆಯಲ್ಲಿ ದಿನವೂ ನಾಲ್ಕು ಗಂಟೆ ವಿದ್ಯುತ್ ಕಡಿತ ಮಾಡುತ್ತಿರುವುದು ಬಿರುಬಿಸಿಲಿನ ತಾಪದ ಅನುಭವ ಹೆಚ್ಚಳಕ್ಕೆ ಕಾರಣವಾಗಿದೆ. ಹಗಲು- ರಾತ್ರಿ ಎನ್ನದೇ ಮಾಡುತ್ತಿರುವ ವಿದ್ಯುತ್ ಕಡಿತ ಜನರ ನಿದ್ದೆಗೆಡಿಸಿದೆ.
ಕುಡಿಯುವ ನೀರಿಗೆ ಅಭಾವ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದು ಸಾಮಾನ್ಯ. ಈ ಬಾರಿ ತುಸು ಹೆಚ್ಚೆನ್ನುವಷ್ಟು ನೀರಿನ ಅಭಾವವಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದ ಜನತೆ ಎರಡರಿಂದ ಮೂರು ಕಿಮೀ ದೂರದವರೆಗೆ ಸಾಗಿ ನೀರು ತರುವಂತಾಗಿದೆ. ವಿದ್ಯುತ್ ಕಡಿತದಿಂದಲೂ ನೀರಿನ ಪೂರೈಕೆ ವ್ಯವಸ್ಥೆಯಲ್ಲಿ ಏರುಪೇರಾಗಿದೆ. ಬಿರುಬಿಸಿಲು ಮಕ್ಕಳೂ ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವುದು ಸಾಮಾನ್ಯ.
ಮಳೆಯಿಂದ ತಾಪ ಹೆಚ್ಚಳ: ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿರುವುದು ಒಂದೆಡೆ ಆತಂಕದ ವಿಚಾರವಾದರೆ ಮತ್ತೊಂದೆಡೆ ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಕಳೆದ ಏಪ್ರಿಲ್‌ನಿಂದೀಚೆಗೆ ಆಗಾಗ್ಗೆ ಸುರಿಯುವ ಅಲ್ಪ ಮಳೆ ತಾಪಮಾನದ ಹೆಚ್ಚಳಕ್ಕೆ ದಾರಿಯಾಗುತ್ತಿದ್ದು ಮತ್ತಷ್ಟು ತೊಂದರೆ ಸೃಷ್ಟಿಸುತ್ತಿದೆ.
ಎಲ್ಲವೂ ತುಟ್ಟಿ: ಬೇಸಿಗೆಯ ದಿನಗಳಲ್ಲಿ ತಂಪು ಪಾನೀಯ, ಆರೋಗ್ಯಕ್ಕೆ ಹಿತ ನೀಡುವ ಹಣ್ಣುಗಳಿಗೆ ಭಾರೀ ಬೇಡಿಕೆ. ಹಾಗೆಯೇ ತೆಂಗಿನ ಎಳೆ ನೀರಿಗೂ ಫುಲ್ ಡಿಮ್ಯಾಂಡ್. ಪರಿಣಾಮ ಸದ್ಯ ಮಾರುಕಟ್ಟೆಯಲ್ಲಿ ಹಣ್ಣಿನ ದರ ಭಾರೀ ಏರಿಕೆ ಕಂಡಿದೆ. ಹಾಗೆಯೇ ಎಳೆ ನೀರಿನ ದರವೂ 25ನ್ನು ದಾಟಿದೆ.
ಅನಾರೋಗ್ಯದಿಂದ ಬಳಲುತ್ತಿರುವವರು ದುಬಾರಿ ಬೆಲೆ ತೆತ್ತಾದರೂ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ ಜನತೆ ಬೇಸಿಗೆ ಮುಗಿದರೆ ಸಾಕಪ್ಪಾ ಎಂದು ನಿಟ್ಟುಸಿರಿಡುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.